
ಕುಶಾಲನಗರ: ಭಾಷೆ ಮತ್ತು ಸಂವಹನ ಕ್ರಿಯೆಯು 21ನೇ ಶತಮಾನದ ಬಹುದೊಡ್ಡ ಶಕ್ತಿ ಎಂದು ರಾಜ್ಯಶಾಸ್ತ್ರ ಉಪನ್ಯಾಸಕ ಎನ್.ಕೆ. ಸುದರ್ಶನ್ ಕುಮಾರ್ ಹೇಳಿದರು.
ಸಮೀಪದ ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳ ಕನ್ನಡ ಸೌರಭ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಉದ್ಯೋಗ ನಿಮಿತ್ತ ಕ್ರಿಯಾ ಯೋಜನೆ ಸಿದ್ಧಪಡಿಸುವ, ಕೌಶಲಾಧಾರಿತ ಕಲಿಕೆಗೆ ಒತ್ತು ಕೊಡುವ ವಾತಾವರಣ ನಿರ್ಮಿಸಿಕೊಳ್ಳುವುದು, ಹೊಸ ವಿಶ್ವವಿದ್ಯಾಲಯ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಂಡು ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಾಚೀನ ಕಾಲದ ಪ್ರಸಿದ್ಧ ಭಾವಚಿತ್ರಗಳನ್ನು ವಿಭಾಗಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಬಹು ಅರ್ಥಪೂರ್ಣವಾಗಿ ಕನ್ನಡ ಸೌರಭ ಸಂಘದ ಉದ್ಘಾಟನೆ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಧ್ಯಾಪಕರಾದ ಸುವರ್ಣ ಕಂಬಿ, ಮಂಜುನಾಥ್, ಮಮತಾ ಅವರು ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಉಪನ್ಯಾಸಕರಾದ ಬಿ.ಆರ್.ರಮೇಶ್, ಜ಼ಮೀರ್ ಅಹಮದ್, ಕನ್ನಡ ವಿಭಾಗದ ಮತ್ತು ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕನ್ನಡ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಕನ್ನಡ ವಿಭಾಗಕ್ಕೆ ಪ್ರಾಚೀನ ಕವಿಗಳಾದ ಪಂಪ, ಪೊನ್ನ, ರನ್ನ ಮತ್ತು ಜನ್ನರ ಭಾವಚಿತ್ರಗಳನ್ನು ಕೊಡುಗೆಯಾಗಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.