ADVERTISEMENT

ಭೈರಪ್ಪನವರಗೆ ಅನುಭವವೇ ಅವರ ಶಕ್ತಿಯಾಗಿತ್ತು: ಡಾ.ಆರ್.ರವಿ ಭುಜವಳ್ಳಿ

ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:52 IST
Last Updated 24 ಫೆಬ್ರುವರಿ 2026, 7:52 IST
ವಿರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದಲ್ಲಿ ಭಾನುವಾರ ನಡೆದ ಹೊಂಬೆಳಕು ಕಾರ್ಯಕ್ರಮಕ್ಕೆ ಬರಹಗಾರರಾದ ಉಳುವಂಗಡ ಕಾವೇರಿ ಉದಯ ಅವರು ಚಾಲನೆ ನೀಡಿದರು.
ವಿರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದಲ್ಲಿ ಭಾನುವಾರ ನಡೆದ ಹೊಂಬೆಳಕು ಕಾರ್ಯಕ್ರಮಕ್ಕೆ ಬರಹಗಾರರಾದ ಉಳುವಂಗಡ ಕಾವೇರಿ ಉದಯ ಅವರು ಚಾಲನೆ ನೀಡಿದರು.   

ವಿರಾಜಪೇಟೆ: ಎಸ್.ಎಲ್.ಭೈರಪ್ಪನವರ ಕಾದಂಬರಿಗಳು ಜೀವನ ಮೌಲ್ಯಗಳನ್ನು ಸಾಮಾನ್ಯ ಓದುಗನು ಸುಲಭವಾಗಿ ಅರ್ಥೈಸಿಕೊಳ್ಳುವಂತೆ ಮಾಡಿದೆ ಎಂದು ಸಮೀಪದ ಬಿಳುಗುಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಆರ್.ರವಿ ಭುಜವಳ್ಳಿ ಅವರು ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಅರಮೇರಿ ಕಳಂಚೇರಿ ಮಠದಲ್ಲಿ ಭಾನುವಾರ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ಅವರು ‘ಎಸ್.ಎಲ್.ಬೈರಪ್ಪ ಅವರ ಬದುಕು-ಬರಹ’ ಎಂಬ ವಿಷಯದ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.

ಎಸ್.ಎಲ್.ಭೈರಪ್ಪ ಅವರು ಸಂಗೀತ ಮತ್ತು ಚಿತ್ರಕಲೆಯ ಕಲ್ಪನೆಯನ್ನು ಮುಂದಿಟ್ಟುಕೊಂಡು ಪುಸ್ತಕವನ್ನು ರಚನೆ ಮಾಡಿದ್ದಾರೆ. ‘ಗೃಹಭಂಗ’ ಭೈರಪ್ಪನವರ ಜೀವನದ ಹಾಗೂ ಹುಟ್ಟೂರಿನ ಕಥೆಯು ಹೌದು ಎಂದರು.

ADVERTISEMENT

ಎಸ್.ಎಲ್.ಭೈರಪ್ಪ ಅವರ ಬರವಣಿಗೆಯು ನಿರಂತರ ಅಧ್ಯಯನ, ಪೂರಕ ದಾಖಲೆಗಳನ್ನು ಸಂಗ್ರಹ ಹಾಗೂ ಪ್ರವಾಸದ ಮೂಲಕ ಸಮಾಜದ ವಸ್ತುಸ್ಥಿತಿಯನ್ನು ಅರ್ಥೈಸಿಕೊಂಡು ವಸ್ತುನಿಷ್ಠವಾಗಿ ಕಾದಂಬರಿಗಳನ್ನು ನಿರೂಪಿಸಿದ್ದಾರೆ. ಪರ್ವ, ಆವರಣ ಕಾದಂಬರಿಗಳು ಇದಕ್ಕೆ ಉತ್ತಮ ನಿದರ್ಶನಗಳಾಗಿವೆ. ಕಾದಂಬರಿಯ ಕ್ಷೇತ್ರದಲ್ಲಿ ಅವರ ಅನುಭವವೇ ಅವರ ಶಕ್ತಿಯಾಗಿತ್ತು ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬರಹಗಾರರಾದ ಟಿ.ಶೆಟ್ಟಿಗೇರಿಯ ಉಳುವಂಗಡ ಕಾವೇರಿ ಉದಯ ಅವರು, ‘ಜೀವನದಲ್ಲಿ ಹಲವು ಪಾಠಗಳನ್ನು ಕಲಿಸುವಂತಹ ಪುಸ್ತಕಗಳು ನಮ್ಮೊಂದಿಗೆ ಇದ್ದು, ಅವು ನಮ್ಮ ಸರಳತೆ ನೆಮ್ಮದಿ, ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತವೆ. ಜೊತೆಗೆ, ಆರೋಗ್ಯವನ್ನು ವೃದ್ಧಿಸುವ ಮೂಲಕ ಸಾಧನೆಯ ಪಥದಲ್ಲಿ ಮುನ್ನಡೆಸುತ್ತದೆ’ ಎಂದು ಹೇಳಿದರು.

ಉತ್ತಮ ಗ್ರಂಥಗಳು ನೈತಿಕ ಮೌಲ್ಯಗಳನ್ನು ತಿಳಿಸಿ, ಉನ್ನತ ವ್ಯಕ್ತಿತ್ವ ಹೊಂದಲು ಸಹಾಯ ಮಾಡುತ್ತವೆ. ಯಾರಿಂದಲೂ ಕದಿಯಲಾಗದ ಮತ್ತು ಹಂಚಿದಷ್ಟು ಹೆಚ್ಚಾಗುವ ಆಸ್ತಿ ಎಂದರೆ ಅದು ಜ್ಞಾನ ಮಾತ್ರ. ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಪುಸ್ತಕಗಳು ಮೂಲೆ ಸೇರುತ್ತಿವೆ ಎಂದು ಅನಿಸುತ್ತಿದೆ. ಯುವ ಪೀಳಿಗೆಗೆ ಪುಸ್ತಕಗಳ ಮಹತ್ವವನ್ನು ತಿಳಿಸಿಕೊಡುವಂತಹ ಕೆಲಸವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಉಳುವಂಗಡ ಕಾವೇರಿ ಉದಯ ಅವರು ರಚಿಸಿರುವ ‘ಭಕ್ತಿ ಪಥದಲ್ಲಿ ಪಯಣ’ ಎಂಬ ಪುಸ್ತಕವನ್ನು ಕಾಳಿಮಾಡ ಡಾ.ಕೆ.ಶಿವಪ್ಪ ಅವರು ಬಿಡುಗಡೆಗೊಳಿಸಿದರು.

ಸಾಹಿತಿ ಗಿರೀಶ್ ಕಿಗ್ಗಾಲು, ಡಾ.ಎಸ್.ವಿ.ನರಸಿಂಹನ್, ನಿವೃತ್ತ ಪ್ರಾಂಶುಪಾಲರಾದ ಪಟ್ಟಡ ಪೂವಣ್ಣ, ನಿವೃತ್ತ ಶಿಕ್ಷಕ ಆಲ್ಬರ್ಟ್ ಡಿಸೋಜಾ ಭಾಗವಹಿಸಿದ್ದರು.

ಉಳುವಂಗಡ ಕಾವೇರಿ ಉದಯ ಅವರು ರಚಿಸಿರುವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.