
ಮಡಿಕೇರಿ: ‘ನಾವೂ ಉತ್ತಮ ಮಾರ್ಗದಲ್ಲಿ ಬಾಳಬೇಕು, ಇತರರನ್ನೂ ಉತ್ತಮ ಮಾರ್ಗದಲ್ಲಿ ಬಾಳಲು ಅವಕಾಶ ಮಾಡಿಕೊಡಬೇಕು’ ಎಂದು ಹೊನ್ನಾವರದ ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಸಭಾ ಪೀಠಾಧಿಪತಿ ಸಚ್ಚಿದಾನಂದ ಭಾರತಿ ಸ್ವಾಮೀಜಿ ಕರೆ ನೀಡಿದರು.
ಇಲ್ಲಿನ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ದೈವಜ್ಞ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜಾತಿ, ಮತ, ಪಂಥ ಪಂಗಡದ ಭೇದವಿಲ್ಲದೆ ಎಲ್ಲರೂ ಸತ್ಪ್ರಜೆಗಳಾಗಿ ಬಾಳುವಂತೆ ಮಾದರಿಯಾಗಿರೋಣ’ ಎಂದು ಹೇಳಿದರು.
‘ಹಿಂದೆ ದೈವಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ನಮ್ಮ ಹಿರಿಯರು ನಂತರ ಕಾಲಘಟ್ಟಗಳಲ್ಲಿ ಚಿನ್ನಾಭರಣ ತಯಾರಿಸುವ ಕಾಯಕ ಮಾಡುತ್ತಾ ದೇಶದೆಲ್ಲೆಡೆ ನೆಲೆಸಿದರು’ ಎಂದು ಅವರು ವಿವರಿಸಿದರು.
‘ಎಲ್ಲ ಸಮಯಕ್ಕೂ ನಮ್ಮ ಹಿರಿಯರಿಗೆ ಕೃತಜ್ಞತೆಯಿಂದ ಹಾಗೂ ಗೌರವದಿಂದ ಬದುಕಬೇಕು’ ಎಂದು ಕಿವಿಮಾತು ಹೇಳಿದರು.
ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಹಾಗೂ ಸುಂಟಿಕೊಪ್ಪದ ಸಮಾಜದ ಬಾಂಧವರು ಒಗ್ಗೂಡಿ ಆಯೋಜಿಸಿರುವ ಈ ಕಾರ್ಯಕ್ರಮ ಅವಿಸ್ಮರಣೀಯ ಮಾತ್ರವಲ್ಲ, ಇದು ಇಡೀ ರಾಜ್ಯಕ್ಕೆ ಮಾದರಿ ಎಂದು ಶ್ಲಾಘಿಸಿದರು.
ನಗರದ ಓಂಕಾರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಕಿರಿಯ ಸ್ವಾಮೀಜಿ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಹಾಗೂ ಭಕ್ತರೊಡನೆ ಕಳೆಯಲು ಸಾಧ್ಯ ಆಗಿದ್ದು ಮನಸ್ಸಿಗೆ ಅತೀವ ಆನಂದಗೊಂಡಿರುವೆ ಎಂದು ಹೇಳಿದರು.