
ಸೋಮವಾರಪೇಟೆ: ತಾಲ್ಲೂಕಿನಲ್ಲಿ 2025-26ನೇ ಸಾಲಿನ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯಲ್ಲಿ ₹ 256.86 ಕೋಟಿ ಅನುದಾನಕ್ಕೆ ಕ್ರಿಯಾಯೋಜನೆಗೆ, ಪ್ರಥಮ ಬಾರಿಗೆ ಮಂಗಳವಾರ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ‘ತಾಲ್ಲೂಕು ಯೋಜನೆ ಹಾಗೂ ಅಭಿವೃದ್ಧಿ ಸಮಿತಿ’ ಸಭೆಯಲ್ಲಿ ಅನುಮೋದನೆ ಲಭಿಸಿತು.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಭೆಯಲ್ಲಿ ಕ್ರಿಯಯೋಜನೆಗೆ ಅನುಮೋದನೆಯ ಪಡೆದ ನಂತರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಶಾಸಕ ಮಂತರ್ ಗೌಡ ತಿಳಿಸಿದರು. ಗ್ರಾಮ ಪಂಚಾಯಿತಿಗಳು ಅಭಿವೃದ್ಧಿಗೆ ಪೂರಕವಾಗಿ ಕ್ರಿಯಾಯೋಜನೆ ತಯಾರಿಸಬೇಕು. ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕನಿಷ್ಠ ₹2 ಕೋಟಿಯಷ್ಟು ವಾರ್ಷಿಕ ಪ್ರಗತಿ ಸಾಧಿಸಬೇಕು. ಗ್ರಾಮ ಸಭೆ ಹೆಚ್ಚು ಮಹತ್ವ ಪಡೆದಿದ್ದು, ಸದಸ್ಯರು ತಮ್ಮ ಅಧಿಕಾರ ಅರಿತು ಕೆಲಸ ಮಾಡಬೇಕೆಂದು ಅವರು ಸೂಚಿಸಿದರು.
ಉದ್ಯೋಗ ಖಾತ್ರಿ ಮೂಲಕ ಸಣ್ಣಪುಟ್ಟ ರಸ್ತೆ ನವೀಕರಣ, ಚರಂಡಿ, ಕೆರೆಗಳ ಹೂಳೆತ್ತುವ ಕಾಮಗಾರಿ ನಡೆಸಬೇಕು. ಜಾಬ್ ಕಾರ್ಡ್ ಮಾಡಿಸುವ ಬಗ್ಗೆ ಅಭಿಯಾನ ನಡೆಸಬೇಕು ಪಂಚಾಯಿತಿಗೆ ಆದಾಯಕ್ಕಾಗಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಬೇಕೆಂದು ಶಾಸಕರು ಸಲಹೆ ನೀಡಿದರು.
ದೊಡ್ಡಮಳ್ತೆ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಂಡಿಲ್ಲ. 2 ಕೊಳವೆ ಬಾವಿಗಳು ಸ್ಥಗಿತಗೊಂಡಿವೆ ಎಂದು ಗೋಪಾಲಕೃಷ್ಣ ಹೇಳಿದರು. ಬೆಟ್ಟದಳ್ಳಿ ಭಾಗದಲ್ಲಿ ಪೈಪ್‌ಲೈನ್ ಅಳವಡಿಸಿದ್ದರೂ ಟ್ಯಾಂಕ್ ಗಳ ನಿರ್ಮಾಣ ನಡೆದಿಲ್ಲ ಎಂದು ತಮ್ಮಯ್ಯ ದೂರಿದರು. ಕಾಮಗಾರಿ ಪೂರ್ಣಗೊಳ್ಳದೇ ದಾಖಲಾತಿಗಳಿಗೆ ಸಹಿ ಹಾಕುವುದು ಬೇಡ ಮತ್ತು ಪಂಚಾಯಿತಿಗಳಿಗೆ ವಹಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದ ಶಾಸಕರು, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್ ಟಿ.ಪಿ. ವೀರೇಂದ್ರ ಅವರಿಗೆ ಸೂಚಿಸಿದರು.
ಮಲ್ಲಳ್ಳಿ ಜಲಪಾತದ ಬಳಿ ಕೇಬಲ್ ಕಾರ್ ಅಳವಡಿಸುವ ಯೋಜನೆ ಪ್ರಗತಿಯಲ್ಲಿದ್ದು, ಪಿಲ್ಲರ್‌ಗಳ ನಿರ್ಮಾಣ ಸ್ಥಳವನ್ನು ಕಂದಾಯ ಇಲಾಖೆ ಗುರುತು ಮಾಡಬೇಕೆಂದು ತಹಶೀಲ್ದಾರ್ ಕೃಷ್ಣಮೂರ್ತಿ ಅವರಿಗೆ ನಿರ್ದೇಶಿಸಿದರು.
ತಾಲ್ರೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಆಡಳಿತಾಧಿಕಾರಿ ಅಬ್ದುಲ್ ನಬಿ, ತಹಶೀಲ್ದಾರ್ ಕೃಷ್ಣಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಬಿ. ಸತೀಶ್, ಬಿಟಿಸಿಜಿ ಕಾಲೇಜು ಪ್ರಾಂಶುಪಾಲ ಹರ್ಷ ಭಾಗವಹಿಸಿದ್ದರು.
‘ಖಾತ್ರಿ ನಿಯಮ ಸಡಿಲಿಸಿ’
ಉದ್ಯೋಗ ಖಾತ್ರಿ ಯೋಜನೆಯ ನಿಯಮಗಳು ಕಠಿಣವಾಗಿದ್ದು ಕಾಮಗಾರಿ ಕೈಗೊಳ್ಳಲು ಅಸಾಧ್ಯವಾಗಿದೆ. ಹೀಗಾಗಿ ನಿರೀಕ್ಷಿತ ಪ್ರಗತಿ ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಸೂಕ್ತ ಸಮಯದಲ್ಲಿ ಅನುದಾನ ಬರುತ್ತಿಲ್ಲ. ಮೆಟೀರಿಯಲ್ ಬಿಲ್‌ಗೆ ಹಣ ಸಿಗುತ್ತಿಲ್ಲ. ನಿಯಮಾವಳಿಯನ್ನು ಸರಳೀಕರಿಸಬೇಕು ಎಂದು ಸಭೆಯಲ್ಲಿದ್ದ ನಿಡ್ತ ಪಂಚಾಯಿತಿ ಅಧ್ಯಕ್ಷ ಅಶೋಕ್, ಬ್ಯಾಡಗೊಟ್ಟ ಪಂಚಾಯಿತಿ ಅಧ್ಯಕ್ಷೆ ಪಾವನ ಗಗನ್, ದುಂಡಳ್ಳಿ ಅಧ್ಯಕ್ಷೆ ಭವಾನಿ, ಗರ್ವಾ ಅಧ್ಯಕ್ಷೆ ನೇತ್ರಾ, ದೊಡ್ಡಮಳ್ತೆ ಅಧ್ಯಕ್ಷ ಗೋಪಾಲಕೃಷ್ಣ, ಬೆಟ್ಟದಳ್ಳಿ ಅಧ್ಯಕ್ಷ ತಮ್ಮಯ್ಯ ಸಭೆಯಲ್ಲಿ ತಿಳಿಸಿದರು.
ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ಸ್ಪಂದಿಸಬೇಕಿದೆ ಎಂದರು.ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಮಂತರ್ ಗೌಡ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.