ಸೋಮವಾರಪೇಟೆ: ‘ಹಿಂದೂ ಸಮಾಜದಲ್ಲಿ ಏಕತೆ, ಸಾಮರಸ್ಯ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಹಾಗೂ ದೇಶಭಕ್ತಿಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಹಿಂದೂ ಸಂಗಮ ಆಯೋಜನಾ ಸಮಿತಿಯ ರಚನೆಯಾಗಿದ್ದು, ತಾಲ್ಲೂಕಿನ 24 ಮಂಡಲಗಳಲ್ಲಿ ಜ. 18ರಿಂದ ಹಿಂದೂ ಸಂಗಮ ಉತ್ಸವ ಮತ್ತು ಧಾರ್ಮಿಕ ಸಭೆಗಳನ್ನು ನಡೆಸಲಾಗುವುದು’ ಎಂದು ಸಮಿತಿಯ ಅಧ್ಯಕ್ಷ ಕೆ.ಟಿ. ಸನತ್ ತಿಳಿಸಿದರು.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವರ್ಷಾಚರಣೆಯ ಅಂಗವಾಗಿ ಸಮಾಜದಲ್ಲಿನ ಪ್ರಮುಖರನ್ನು ಒಗ್ಗೂಡಿಸಿ, ನೂತನ ತಾಲ್ಲೂಕು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ನೇತೃತ್ವದಲ್ಲಿ ಹಿಂದೂ ಸಂಗಮ ನಿರ್ವಹಣಾ ಸಮಿತಿಗಳನ್ನು ರಚಿಸಿ, ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
‘ಸಮಾಜದಲ್ಲಿನ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿ, ಹಿಂದೂ ಸಂಘಟನೆಗಳಿಗೆ ಬಲ ತುಂಬುವುದು, ಶಿಸ್ತು, ದೇಶಾಭಿಮಾನ, ಧೈರ್ಯ, ಪ್ರಾಮಾಣಿಕತೆಯಿಂದ ಕೂಡಿದ ಸಂಪನ್ಮೂಲ ವ್ಯಕ್ತಿಗಳ ನಿರ್ಮಾಣ , ಸಮಾಜವನ್ನು ಸದೃಢಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಮಾಜದಲ್ಲಿ ಸಮರಸತೆಯ ಬದುಕನ್ನು ರೂಪಿಸುವುದು, ಕುಟುಂಬ ಪ್ರಬೋಧನ್, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಶೈಲಿ, ನಾಗರಿಕ ಶಿಷ್ಟಾಚಾರಗಳನ್ನು ಮೈಗೂಡಿಸುವುದರೊಂದಿಗೆ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರೇರೇಪಿಸುವ ಕಾರ್ಯ ಈ ಆಚರಣೆಯ ಮೂಲಕ ಮಾಡಲಾಗುವುದು’ ಎಂದರು.
ಪಟ್ಟಣದಲ್ಲಿ ಫೆ. 1ರಂದು ಹಿಂದೂ ಸಂಗಮ ನಿಗದಿಯಾಗಿದ್ದು, ಅಂದು ಬೆಳಿಗ್ಗೆ 9.30 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಬಳಿಯಿಂದ ಶೋಭಾ ಯಾತ್ರೆ ಪ್ರಮುಖ ಬೀದಿಗಳಲ್ಲಿ ಸಾಗಿ, ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಸಮಾಪನಗೊಳ್ಳಲಿದೆ. 11.30ಕ್ಕೆ ಮೈದಾನದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಧರ್ಮ ಗುರುಗಳು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಎಸ್.ಎಲ್. ಸೀತಾರಾಮ್, ಕಾರ್ಯದರ್ಶಿ ಎಸ್.ಎನ್. ಸೋಮಶೇಖರ್, ಸಮಿತಿ ಸದಸ್ಯರಾದ ಬನ್ನಳ್ಳಿ ಗೋಪಾಲ್, ತಾಲ್ಲೂಕು ಸಂಯೋಜಕರಾದ ಬಿ.ಎ. ಭಾಸ್ಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.