ಸೋಮವಾರಪೇಟೆ: ‘ಹಿಂದೆ ಕಸುಬು ಆಧಾರಿತ ಜಾತಿ ವ್ಯವಸ್ಥೆ ಇದ್ದು, ಮೇಲ್ವರ್ಗ ಮತ್ತು ಕೆಳವರ್ಗ ಎಂಬುವುದು ಇರಲಿಲ್ಲ. ಹಾಗಾಗಿ ರಾಮಾಯಣವನ್ನು ರಚಿಸಿದ ವಾಲ್ಮೀಕಿ ಕೆಳವರ್ಗದವರು ಎಂಬುದು ತಪ್ಪು’ ಎಂದು ಚಿಕ್ಕಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕ ಕೆ.ಕೆ. ಧರ್ಮಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘಗಳ ಆಶ್ರಯದಲ್ಲಿ ಮಂಗಳವಾರ ಇಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ 2 ಸಾವಿರ ವರ್ಷಗಳ ಹಿಂದೆ ರಚಿ ರಚಿಸಿದ ರಾಮಾಯಣ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಮುಂದಿನ ವರ್ಷ ವಾಲ್ಮೀಕಿ ಜಯಂತಿಯನ್ನು ಸಮೀಪದ ಹಾಡಿಗಳಲ್ಲಿ ಆಚರಿಸಿ, ಸ್ಥಳೀಯ ಪ್ರತಿಭಾವಂತರನ್ನು ಸನ್ಮಾನಿಸಿ, ವಾಲ್ಮೀಕಿ ಆದರ್ಶಗಳನ್ನು ಎಲ್ಲರಿಗೂ ಪರಿಚಯಿಸಲಾಗುವುದು ಎಂದು ತಿಳಿಸಿದರು. ಸಮುದಾಯದ ಸಾಧಕ ವಿದ್ಯಾರ್ಥಿಗಳಾದ ಆಲೂರು ಸಿದ್ಧಾಪುರ ಶಾಲೆಯ ಕೃಷ್ಣಮೂರ್ತಿ , ಕ್ಯಾತೆ ಗ್ರಾಮದ ಎಪಿಜೆ ಅಬ್ದುಲ್ ಕಲಾಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವಿನೋದ್ ಅವರನ್ನು ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಎಸ್.ಇ. ಮೋಹಿನಿ, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸದಸ್ಯೆ ಶೀಲಾ ಡಿಸೋಜ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಮ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್, ಆರ್ ಎಫ್ಒ ಶೈಲೇಂದ್ರಕುಮಾರ್, ಕೆ.ಡಿ.ಪಿ ಸದಸ್ಯರಾದ ವೇದಕುಮಾರ್, ಔರಂಗಜೇಬ್, ಪರಿಶಿಷ್ಟ ಮುಖಂಡ ಕುಮಾರಸ್ವಾಮಿ, ದಲಿತ ಮುಖಂಡರಾದ ಬಿ.ಈ. ಜಯೇಂದ್ರ, ನಿರ್ವಾಣಪ್ಪ, ಹೊನ್ನಪ್ಪ, ಈರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.