ADVERTISEMENT

ಸೋಮವಾರಪೇಟೆ | ಹಾಕಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ-ಅಪ್ಪಚ್ಚು ರಂಜನ್

ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:54 IST
Last Updated 27 ಫೆಬ್ರುವರಿ 2026, 7:54 IST
ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ  ಡಾಲ್ಫಿನ್ಸ್‌ ಸ್ಪೋರ್ಟ್ಸ್ ಕ್ಲಬ್, ಹಾಕಿ ಕೊಡಗು ಹಾಗೂ ಹಾಕಿ ಕರ್ನಾಟಕ ಸಹಯೋಗದೊಂದಿಗೆ ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥ ನಡೆದ ಹಾಕಿ ಟೂರ್ನಿಗೆ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು 
ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ  ಡಾಲ್ಫಿನ್ಸ್‌ ಸ್ಪೋರ್ಟ್ಸ್ ಕ್ಲಬ್, ಹಾಕಿ ಕೊಡಗು ಹಾಗೂ ಹಾಕಿ ಕರ್ನಾಟಕ ಸಹಯೋಗದೊಂದಿಗೆ ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥ ನಡೆದ ಹಾಕಿ ಟೂರ್ನಿಗೆ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು    

ಸೋಮವಾರಪೇಟೆ: ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಮೂಲಸೌಕರ್ಯದಿಂದ ವಂಚಿತವಾಗಿದ್ದ ಕ್ರೀಡೆಗೆ ಹೆಚ್ಚಿನ ನೆರವು ನೀಡಿದ್ದೇನೆ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ಡಾಲ್ಫಿನ್ಸ್‌ ಸ್ಪೋರ್ಟ್ಸ್ ಕ್ಲಬ್, ಹಾಕಿ ಕೊಡಗು ಹಾಗೂ ಹಾಕಿ ಕರ್ನಾಟಕ ಸಹಯೋಗದೊಂದಿಗೆ ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥ ಗುರುವಾರ ಪ್ರಾರಂಭವಾದ ಜಿಲ್ಲಾ ಮಟ್ಟದ ಹಾಕಿ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕ್ರೀಡಾಂಗಣಗಳ ಸಮಸ್ಯೆ ಇದ್ದು, ಈ ನಿಟ್ಟಿನಲ್ಲಿ ಶಾಸಕರ ಅವಧಿಯಲ್ಲಿ ಸೋಮವಾರಪೇಟೆ, ಕೂಡಿಗೆ ಕ್ರೀಡಾಶಾಲೆ ಹಾಗೂ ಪೊನ್ನಂಪೇಟೆ ಕ್ರೀಡಾ ಶಾಲೆಯ ಮೈದಾನಕ್ಕೆ ₹14 ಕೋಟಿ ವೆಚ್ಚದ ಸಿಂಥೆಟಿಕ್ ಟರ್ಫ್ ಮೈದಾನಕ್ಕೆ ಅನುದಾನ ಕಲ್ಪಿಸಿದ್ದರಿಂದ ಅಂತರರಾಷ್ಟ್ರೀಯ ಮಟ್ಟದ ಮೈದಾನಗಳು ಸಿಗಲು ಕಾರಣವಾಯಿತು. ಸ್ಥಳೀಯ ಸಾಕಷ್ಟು ಪ್ರತಿಭೆಗಳು ರಾಷ್ಟ್ರ ಮತ್ತು ಅಂತರರಾಷ್ಠೀಯ ಮಟ್ಟದಲ್ಲಿ ಹೆಸರು ಮಾಡಲು ಇಲ್ಲಿನ ಕ್ರೀಡಾಂಗಣಗಳು ಕೊಡಗೆ ನೀಡಿವೆ. ಮುಂದೆಯೂ ಪ್ರತಿಭಾವಂತ ಕ್ರೀಡಾಪಟುಗಳು ಜಿಲ್ಲೆಯ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕೆಂದರು.

ADVERTISEMENT

ಟೂರ್ನಿಯ ಟ್ರೋಫಿ ಮತ್ತು ನಗದು ದಾನಿಗಳಾದ ಬಿ.ಆರ್. ವೇಣು ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಇಲ್ಲಿ ಯಾವುದೇ ಹಾಕಿ ಪಂದ್ಯಾಟಗಳು ನಡೆದಿರಲಿಲ್ಲ. ಈ ನಿಟ್ಟಿನಲ್ಲಿ ಪಂದ್ಯಾಟ ಆಯೋಜಿಸಲಾಗಿದೆ. ಇಂತಹ ಕ್ರೀಡಾಕೂಟಗಳು ಸಾಕಷ್ಟು ಯುವ ಪ್ರತಿಭೆಗಳ ಪ್ರತಿಭೆಯ ಅನಾವರಣಕ್ಕೆ ಸಹಕಾರಿಯಾಗಲಿದೆ ಎಂದರು.

ಡಾಲ್ಫಿನ್ಸ್ ಟ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಂ.ಈ. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದಾನಿಗಳಾದ ಲಲಿತಾ ರಂಗಸ್ವಾಮಿ, ಬಿ.ಆರ್. ವಿನಯ್, ಬಿ.ಆರ್. ವಿಜಯ್, ಹಿರಿಯ ಹಾಕಿ ಆಟಗಾರರಾದ ಬಿ.ಕೆ. ಹಾಲಪ್ಪ, ಜೈಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ಇ. ಈರಪ್ಪ, ಮಾಜಿ ಯೋಧ ಎಂ.ಪಿ. ಪೂವಯ್ಯ ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ಮಡಿಕೇರಿಯ ಸಾಯಿ ಮತ್ತು ಕೂಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿನಿಯರಿಗೆ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿತ್ತು. ನಂತರ ನಡೆದ ಮೊದಲ ಪಂದ್ಯ ಗೋಣಿಕೊಪ್ಪದ ಬಿಬಿಸಿ ಮತ್ತು ಬೆರಲ್ ನಾಡ್ ತಂಡಗಳ ನಡುವೆ ನಡೆಯಬೇಕಿದ್ದು, ಬಿಬಿಸಿ ತಂಡ ಬಾರದ ಕಾರಣ ಬೆರಲ್ ನಾಡ್ ತಂಡಕ್ಕೆ ವಾಕ್ಓವರ್ ನೀಡಲಾಯಿತು. ಎರಡನೇ ಪಂದ್ಯ ಕೂರ್ಗ್ ಚಾಲೆಂರ್ಜರ್ಸ್ ಮತ್ತು ಕೋಣನಕುಂಟೆ ತಂಡಗಳ ನಡುವೆ ನಡೆಯಿತು. ಕೋಣನಕಟ್ಟೆ ತಂಡ 3-2 ಗೋಲುಗಳಿಂದ ಜಯ ಗಳಿಸಿತು.

ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ  ಡಾಲ್ಫಿನ್ಸ್‌ ಸ್ಪೋರ್ಟ್ಸ್ ಕ್ಲಬ್ ಹಾಕಿ ಕೊಡಗು ಹಾಗೂ ಹಾಕಿ ಕರ್ನಾಟಕ ಸಹಯೋಗದೊಂದಿಗೆ ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥ ನಡೆದ ಹಾಕಿ ಟೂರ್ನಿಗೆ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.