ADVERTISEMENT

ಸೋಮವಾರಪೇಟೆ: ಕುವೆಂಪು ವಿದ್ಯಾಸಂಸ್ಥೆಯಲ್ಲಿ ವೈದ್ಯರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:24 IST
Last Updated 1 ಜುಲೈ 2025, 15:24 IST
ಸೋಮವಾರಪೇಟೆ ವಿನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಆಲೂರು ಪಿಎಚ್‌ಸಿ ವೈದ್ಯಾಧಿಕಾರಿ ಸುಪರ್ಣಾ ಅವರನ್ನು ಸನ್ಮಾನಿಸಲಾಯಿತು 
ಸೋಮವಾರಪೇಟೆ ವಿನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಆಲೂರು ಪಿಎಚ್‌ಸಿ ವೈದ್ಯಾಧಿಕಾರಿ ಸುಪರ್ಣಾ ಅವರನ್ನು ಸನ್ಮಾನಿಸಲಾಯಿತು    

ಸೋಮವಾರಪೇಟೆ: ಮಕ್ಕಳ ಆರೋಗ್ಯದಲ್ಲಿ ಅವರ ಪೋಷಕರು ಮತ್ತು ಬೆಳೆಯುವ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಪರ್ಣಾ ಅಭಿಪ್ರಾಯ ವ್ಯಕ್ತಪಡಿಸಿದರು. 

ವೈದ್ಯರ ದಿನಾಚರಣೆ ಅಂಗವಾಗಿ ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಚೌಡ್ಲು ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ನಡೆದ 'ಹದಿಹರೆಯದಲ್ಲಿ ಮಾನಸಿಕ ಆರೋಗ್ಯ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೆಳೆಯುತ್ತಿರುವ ಮಕ್ಕಳು ನೋಡಿ ಕಲಿಯುವುದೇ ಹೆಚ್ಚು. ಮನೆಯಲ್ಲಿ ಪೋಷಕರು, ಶಾಲಾ– ಕಾಲೇಜಿನಲ್ಲಿ ಶಿಕ್ಷಕರನ್ನು ನೋಡಿ ಕಲಿಯುತ್ತಾರೆ. ಮಕ್ಕಳ ಬೆಳವಣಿಗೆಯಲ್ಲಿ ಇವರ ಪಾತ್ರ ಪ್ರಮುಖ. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು, ಹಿರಿಯರು, ಪೋಷಕರು ಮತ್ತು ಶಿಕ್ಷಕರನ್ನು ಗೌರವಿಸುವುದು, ಅವರ ಮಾತು ಕೇಳುವುದು. ತಮ್ಮನ್ನು ತಾವು ಕಾಪಾಡಿಕೊಳ್ಳುವುದು, ಒಳ್ಳೆಯ ಅಲೋಚನೆ ಮಾಡುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ವಿದ್ಯಾರ್ಥಿಗಳು ಮಾನಸಿಕ ಅರೋಗ್ಯವಂತರು’ ಎಂದು ಹೇಳಿದರು.

ADVERTISEMENT

‘ಕಾರಣವಿಲ್ಲದೆ ಚಿಂತೆ, ದುಃಖ ಪಡುವುದು, ಏಕಾಗ್ರತೆ ಕೊರತೆ, ಅವಶ್ಯಕವಿಲ್ಲದ ಕೋಪ, ಭಯ ಪಡುವುದು, ತಪ್ಪನ್ನು ಒಪ್ಪಿಕೊಳ್ಳದಿರುವುದು ಇವೆಲ್ಲಾ ಮಾನಸಿಕ ರೋಗದ ಲಕ್ಷಣಗಳು, ವಿದ್ಯಾರ್ಥಿಗಳಲ್ಲಿ ಇಂತಹ ಸಮಸ್ಯೆಗಳು ಕಂಡು ಬಂದಾಗ ಪೋಷಕರು ಮತ್ತು ಶಿಕ್ಷಕರು ತಕ್ಷಣ ಸೂಕ್ತ ತಜ್ಞ ವೈದ್ಯರನ್ನು ಭೇಟಿ ಮಾಡಿಸಿ, ಕೌನ್ಸೆಲಿಂಗ್ ಮಾಡಿಸಬೇಕು. ದೂರವಾಣಿ ಮೂಲಕ ಕರೆ ಮಾಡಿದರೆ ವೈದ್ಯರೇ ಶಾಲಾ ಕಾಲೇಜಿಗೆ ಬಂದು ಸೂಕ್ತ ಸಲಹೆಗಳನ್ನು ನೀಡುತ್ತಾರೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್ ನಿಯೋಜಿತ ಅಧ್ಯಕ್ಷೆ ತನ್ಮಯಿ ಪ್ರವೀಣ್, ನಿರ್ಗಮಿತ ಅಧ್ಯಕ್ಷೆ ಸಂಗೀತ ದಿನೇಶ್, ಬಿಟಿಸಿಜಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಿಲ್ಡ್ರೆಡ್ ಗೋನ್ಸಾಲ್ವೆಸ್, ಕ್ಲಬ್ ಪದಾಧಿಕಾರಿಗಳಾದ ಸುಮಲತಾ ಪುರುಷೋತ್ತಮ್, ಲತಾ ಮಂಜು ಹಾಜರಿದ್ದರು.

Highlights - ಹದಿಹರೆಯದಲ್ಲಿ ಮಾನಸಿಕ ಆರೋಗ್ಯ ಕುರಿತ ಉಪನ್ಯಾಸ ಉತ್ತಮವಾಗಿ ಆಲೋಚನೆ ಮಾಡಿ ಶಿಕ್ಷಕರನ್ನು ಗೌರವಿಸಲು ಸಲಹೆ

Cut-off box - ‘ಮೊಬೈಲ್‌ ಗೀಳು ಒಳ್ಳೆಯದಲ್ಲ’ ‘ವಿದ್ಯಾರ್ಥಿಗಳಿಗೆ ಮೊಬೈಲ್ ಗೀಳು ಒಳ್ಳೆಯದಲ್ಲ. ಕಲಿಕೆಗೆ ಅವಶ್ಯವಿದ್ದಷ್ಟು ಮಾತ್ರ ಬಳಕೆ ಮಾಡಿಕೊಳ್ಳಬೇಕು. 12ರಿಂದ 18 ವರ್ಷದ ವಯಸ್ಸಿನಲ್ಲಿ ಶಾರೀರಿಕ ಮಾನಸಿಕ ಬದಲಾವಣೆಗಳು ನಡೆಯುತ್ತಿವೆ. ಈ ಸಮಯದಲ್ಲಿ ಎಚ್ಚರಿಕೆ ಅಗತ್ಯವಿದೆ. ಪುರುಷರಿಂದ ಮಾನಸಿಕ ಕಿರುಕುಳ ಆದರೆ ಕೂಡಲೇ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿದರೆ ಅರೋಪಿಗಳ ವಿರುದ್ಧ ಪೋಕ್ಸೊ ಮೊಕದ್ದಮೆ ದಾಖಲಾಗುತ್ತದೆ. ವಿದ್ಯಾರ್ಥಿಗಳು ವೈಯುಕ್ತಿಕ ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಸಹಾಯವಾಣಿ 14416 ಸಂಖ್ಯೆಗೆ ಕರೆ ಮಾಡಿದರೆ ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ತಿಳಿಸುತ್ತಾರೆ’ ಎಂದು ಸುಪರ್ಣಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.