
ಸೋಮವಾರಪೇಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷ ಪೂರೈಸಿದ್ದು, ವಿಶ್ವದ ಅತಿ ದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿದೆ. ದೇಶದಾದ್ಯಂತ ಹಿಂದೂ ಸಂಗಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕ್ ಗುರುಪ್ರಸಾದ್ ತಿಳಿಸಿದರು.
ಭಾನುವಾರ ಇಲ್ಲಿ ಆಯೋಜಿಸಿದ್ದ ಹಿಂದೂ ಸಂಗಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ‘ಹಿಂದೂಗಳನ್ನು ಒಗ್ಗೂಡಿಸಲು ಆರ್‌ಎಸ್‌ಎಸ್ ಮುಂದಾಗಿದೆ. ಭಾರತ ಮಾತೆಯ ಮಕ್ಕಳಾದ ನಾವೆಲ್ಲರೂ ಒಗ್ಗೂಡಿ ದೇಶದ ರಕ್ಷಣೆ ಮಾಡಬೇಕಾಗಿದೆ. ಹಿಂದೂ ಧರ್ಮದ ಸಂರಕ್ಷಣೆ ಸಂಘಟನೆಗಳ ಜವಾಬ್ದಾರಿಯಷ್ಟೇ ಅಲ್ಲ, ಅದು ಹಿಂದೂ ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು’ ಎಂದು ಹೇಳಿದರು.
‘ಸಮಾಜದಲ್ಲಿನ ಅಸ್ಪೃಶ್ಯತೆ, ಅಸಮಾನತೆ ನಿವಾರಿಸಿ, ಹಿಂದೂ ಸಮಾಜವನ್ನು ಗಟ್ಟಿಗೊಳಿಸುವ ಕಾಯಕದಲ್ಲಿ ಸರ್ವ ಹಿಂದೂಗಳು ತೊಡಗಿಸಿಕೊಳ್ಳಬೇಕು. ಜಾತಿ ಗಣತಿ ಹೆಸರಿನಲ್ಲಿ ರಾಜ್ಯ ಸರ್ಕಾರ ಜಾತಿಗಳನ್ನು ಮತ್ತು ಧರ್ಮಗಳನ್ನು ಒಡೆಯುತ್ತಿದೆ. ಮತ ಬ್ಯಾಂಕಾಗಿ ಹಿಂದೂ ಧರ್ಮವನ್ನು ಒಡೆಯಲು ರಾಜ್ಯ ಸರ್ಕಾರ ಮುಂದಾಗಿರುವುದು ದುರದೃಷ್ಟಕರ’ ಎಂದರು.
ಮುಖ್ಯ ಅತಿಥಿ ಪ್ರಗತಿಪರ ಮಹಿಳೆ ನಿರ್ಮಲಾ ಪ್ರಕಾಶ್ ಮಾತನಾಡಿ, ‘ಹಿಂದೆ ಕುಟುಂಬ ವ್ಯವಸ್ಥೆಯ ಗಟ್ಟಿತನದಿಂದಾಗಿ ಆರೋಗ್ಯ, ಶಿಕ್ಷಣ, ಸಂಸ್ಕಾರ ಮನೆಯಿಂದಲೇ ಕಲಿಸಲಾಗುತ್ತಿತ್ತು. ಅದು ಮುಂದುವರೆಯುವಂತಾಗಬೇಕು. ಆಗ ಮಾತ್ರ ಸುಂದರ, ಸದೃಢ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ಹೇಳಿದರು.
ಬಾಣಾವಾರ ರಸ್ತೆಯಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆ ನಡೆದು ಜಿಎಂಪಿ ಶಾಲಾ ಮೈದಾನದಲ್ಲಿ ಸಮಾಪ್ತಿಗೊಂಡಿತು. ಅಧ್ಯಕ್ಷತೆಯನ್ನು ಲೀಡ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಂ.ಬಿ.ಚಿಣ್ಣಪ್ಪ ವಹಿಸಿದ್ದರು. ಹಿಂದೂ ಸಂಗಮ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ.ಸನತ್, ಗೌರವ ಅಧ್ಯಕ್ಷ ಎಸ್.ಎಲ್.ಸೀತಾರಾಂ, ನಗರ ಸಮಿತಿ ಅಧಕ್ಷ ನಂದಕುಮಾರ್, ಆರ್.ಎಸ್.ಎಸ್ ಜಿಲ್ಲಾ ಕಾರ್ಯವಾಹ ಡಿ.ಕೆ. ರವಿ ಉಪಸ್ಥಿತರಿದ್ದರು.
ಮುಳ್ಳೂರು ಬಸವಾಪಟ್ಟಣ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದೂ ಭಯೋತ್ಪಾದನೆಯನ್ನು ಪ್ರಚೋದಿಸಿಲ್ಲ ದೇಶದ್ರೋಹ ಮಾಡಲೂ ಹೇಳಿಲ್ಲ. ಆದರೆ ರಾಜ್ಯದಲ್ಲಿ ಸಂಘಟನೆ ಮೇಲೆ 17 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದು ಯಾರಿಗೂ ಶಿಕ್ಷೆಯಾಗದೆ 15 ಪ್ರಕರಣಗಳು ಮುಕ್ತಾಯವಾಗಿವೆ. ಕೇವಲ ಮತಬ್ಯಾಂಕ್ ಗೋಸ್ಕರ ಒಂದು ಧರ್ಮವನ್ನು ಓಲೈಸಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.