ADVERTISEMENT

ಸೋಮವಾರಪೇಟೆ | ಪಟ್ಟಣ ಕಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ

ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಹತ್ತು ವರ್ಷ, ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಸಮಸ್ಯೆ

ಲೋಕೇಶ್ ಡಿ.ಪಿ
Published 27 ಫೆಬ್ರುವರಿ 2026, 7:54 IST
Last Updated 27 ಫೆಬ್ರುವರಿ 2026, 7:54 IST
ಸೋಮವಾರಪೇಟೆ ಹೈಟೆಕ್ ಮಾರುಕಟ್ಟೆ ಬಳಿಯಲ್ಲಿ ಸುರಿದಿರುವ ಪ್ಲಾಸ್ಟಿಕ್ ತ್ಯಾಜ್ಯದ ನಡುವೆ ಆಹಾರ ಹುಡುಕುತ್ತಿರುವ ಬೀಡಾಡಿ ದನಗಳು
ಸೋಮವಾರಪೇಟೆ ಹೈಟೆಕ್ ಮಾರುಕಟ್ಟೆ ಬಳಿಯಲ್ಲಿ ಸುರಿದಿರುವ ಪ್ಲಾಸ್ಟಿಕ್ ತ್ಯಾಜ್ಯದ ನಡುವೆ ಆಹಾರ ಹುಡುಕುತ್ತಿರುವ ಬೀಡಾಡಿ ದನಗಳು   

ಸೋಮವಾರಪೇಟೆ: ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಗೊಂಡು 10 ವರ್ಷಗಳು ಕಳೆದಿದ್ದರೂ ಪಟ್ಟಣ ಸೇರಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿ ಮಿತಿ ಮೀರಿದೆ.

ಇದರೊಂದಿಗೆ ತ್ಯಾಜ್ಯವಿಲೇವಾರಿ ಸಮಸ್ಯೆ ಇಂದಿಗೂ ಮುಂದುವರೆದಿದ್ದು, ಜನರು ಸಿಕ್ಕ ಸ್ಥಳಗಳಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡುತಿದ್ದಾರೆ. ಇದರಿಂದಾಗಿ ಎಲ್ಲ ಖಾಲಿ ಸ್ಥಳ, ಚರಂಡಿಗಳು ತ್ಯಾಜ್ಯದಿಂದ ತುಂಬಿವೆ. ಇದರಿಂದ ನೀರು ಸರಾಗವಾಗಿ ಹರಿಯದೆ, ಅಲ್ಲಲ್ಲಿ ನಿಂತು ಸಾಕಷ್ಟು ಕ್ರಿಮಿಕೀಟಗಳು ಮತ್ತು ವೈರಾಣುಗಳ ಹರಡುವಿಕೆಗೂ ಕಾರಣವಾಗಿದೆ.

ಸೋಮವಾರ ನಡೆಯುವ ಮಾರುಕಟ್ಟೆಯಲ್ಲಿ ಯಥೇಚ್ಚವಾಗಿ ಪ್ಲಾಸ್ಟಿಕ್ ಬಳಕೆಯಾಗುತ್ತಿದ್ದು, ಅದನ್ನು ತರಕಾರಿ ತ್ಯಾಜ್ಯದೊಂದಿಗೆ ಸುರಿಯುತ್ತಿರುವುದರಿಂದ, ಬೀಡಾಡಿ ದನಗಳು ಮತ್ತು ಬೀದಿ ನಾಯಿಗಳು ಆಹಾರವನ್ನು ಅದರಲ್ಲಿ ಹುಡುಕಿ, ತಿನ್ನುವುದು ಸಾಮಾನ್ಯವಾಗಿದೆ. ಜಾನುವಾರುಗಳು ಮತ್ತು ಬೀದಿ ನಾಯಿಗಳ ಹೊಟ್ಟೆಯನ್ನು ಪ್ಲಾಸ್ಟಿಕ್‌ ಸೇರುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಮೂಕ ಪ್ರಾಣಿಗಳ ಜೀವಕ್ಕೂ ಎರವಾಗಿದೆ.

ADVERTISEMENT

ಹೊರ ಜಿಲ್ಲೆಯಿಂದ ಬಂದು ಹಣ್ಣು ಮತ್ತು ತರಕಾರಿ ಮಾರುವವರು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಪ್ಲಾಸ್ಟಿಕ್‌ ಬಳಕೆಯನ್ನು ಕಟ್ಟು ನಿಟ್ಟಾಗಿ ತಡೆಯಲು ಮುಂದಾಗದಿರುವುದರಿಂದ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೂ ರಾಶಿ ಬಿದ್ದು, ಸಮಸ್ಯೆಯಾಗಿ ಕಾಡುತ್ತಿದೆ.

ಪಟ್ಟಣ ಪಂಚಾಯಿತಿಯು ತ್ಯಾಜ್ಯ ವಿಲೇವಾರಿಗಾಗಿ ಸಮೀಪದ ಸಿದ್ಧಲಿಂಗಪುರದಲ್ಲಿ ಸ್ಥಳ ಖರೀದಿಸಿದ್ದು, ಕಸವಿಲೇವಾರಿಯ ಹೈಟೆಕ್ ಘಟಕ ಇನ್ನೇನು ಬಳಕೆಗೆ ಸಿದ್ಧಗೊಂಡಿದೆ. ಮುಂದಿನ ಕೆಲವೇ ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದ ಹೊರಬರಬಹುದು. ಅಲ್ಲದೆ, ಈಗಾಗಲೇ ಪಟ್ಟಣ ಮತ್ತು ಸಂತೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಿದ್ದೇವೆ. ಮುಂದಿನ ವಾರದಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ವರ್ತಕರ ಸಭೆ ಕರೆದು, ಪ್ಲಾಸ್ಟಿಕ್ ಬಳಕೆ ಮತ್ತು ಮಾರುವುದರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗುವುದು. ನಂತರವೂ ಮುಂದುವರೆದಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಸೋಮವಾರಪೇಟೆ ಮಹಿಳಾ ಸಮಾಜದ ರಸ್ತೆಯ ಬದಿಯಲ್ಲಿ ಸುತ್ತಲಿನ ಕಸ ಬಿಸಾಡುತ್ತಿರುವುದರಿಂದ ಚರಂಡಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಭರ್ತಿಯಾಗಿದೆ
ಸೋಮವಾರಪೇಟೆ ಎಂ.ಜಿ. ರಸ್ತೆಯ ಹಳೆ ಕಾರ್ಪೋರೇಷನ್ ನಿವೇಶನದ ಬಳಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬಿದ್ದಿದೆ
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿ. 

‘ಪಟ್ಟಣ ಪಂಚಾಯಿತಿ ಸಂಪೂರ್ಣ ವಿಫಲ’

ಚಿಕ್ಕ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಪಟ್ಟಣ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ಮಾರುಕಟ್ಟೆ ಆವರಣಕ್ಕೆ ತ್ಯಾಜ್ಯ ತಂದು ರಾಶಿ ಹಾಕಿ ಬೆಂಕಿ ಹಾಕುತ್ತಿದ್ದಾರೆ. ತ್ಯಾಜ್ಯಕ್ಕೆ ಬೆಂಕಿ ಹಾಕಿ ಸುಡಬಾರದು ಎಂಬ ನ್ಯಾಯಾಲಯದ ಆದೇಶಕ್ಕೂ ಇಲ್ಲಿ ಬೆಲೆ ಇಲ್ಲದಾಗಿದೆ ಬಿ.ಈ. ಜಯೇಂದ್ರ ವಕೀಲ  ತ್ಯಾಜ್ಯಕ್ಕೆ ಬೆಂಕಿ ಹಾಕುವುದು ನಿಲ್ಲಬೇಕು ಎಲ್ಲೆಂದರಲ್ಲಿ ತ್ಯಾಜ್ಯವನ್ನು ಗುಡ್ಡೆಮಾಡಿ ಬೆಂಕಿ ಹಾಕುತ್ತಿರುವುದರಿಂದ ಅಕ್ಕಪಕ್ಕದಲ್ಲಿ ನಿಲ್ಲಲೂ ಸಾಧ್ಯವಿಲ್ಲದಂತಾಗಿದೆ. ಸಾರ್ವಜನಿಕರಿಗೆ ಪರಿಸರ ಉಳಿಸಿ ಎಂದು ಬೆಳಿಗ್ಗೆಯಿಂದ ರಸ್ತೆಯಲ್ಲಿ ಪ್ರಚಾರ ಮಾಡುವ ಪಟ್ಟಣ ಪಂಚಾಯಿತಿ ಸಂಗ್ರಹಿಸುವ ತ್ಯಾಜ್ಯಕ್ಕೆ ಹೀಗೆ ಬೆಂಕಿ ಹಾಕಿ ಪರಿಸರವನ್ನು ಹಾಳು ಮಾಡುತ್ತಿದೆ ನಾಗೇಶ್ ಉದ್ಯಮಿ   ತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ಆಗಲಿ  ಇತ್ತೀಚಿನ ದಿನಗಳಲ್ಲಿ ಯಾವುದೇ ರಸ್ತೆಗಳಲ್ಲಿ ನೋಡಿದರೂ ತ್ಯಾಜ್ಯದಿಂದ ಚರಂಡಿಗಳು ತುಂಬಿಹೋಗಿವೆ. ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಪಂಚಾಯಿತಿ ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ರೋಗ ರುಜೀನಗಳ ಹಾವಳಿ ಹೆಚ್ಚಾಗಲಿದೆ ಪಿ. ಮಧು ಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.