ಮಡಿಕೇರಿ: ಭಾರತ ಪಾಕಿಸ್ತಾನದ ಉಗ್ರರ ವಿರುದ್ಧ ನಡೆಸಿರುವ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾಗಲಿ ಹಾಗೂ ಭಾರತೀಯ ಸೈನಿಕರಿಗೆ ಶ್ರೇಯಸ್ಸಾಗಲಿ ಎಂದು ಕೊಡಗು ಜಿಲ್ಲೆಯ ಹಲವು ಮಸೀದಿಗಳಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆ ನಡೆಯಿತು.
ಇಲ್ಲಿನ ಬದ್ರಿಯಾ ಮಸೀದಿಯಲ್ಲಿ ಧರ್ಮ ಗುರುಗಳಾದ ಹಾಫಿಲ್ ನೌಫಾಲ್ ಸಕಾಫಿ ಅವರ ನೇತೃತ್ವದಲ್ಲಿ ಮುಸ್ಲಿಮರು ಭಾರತದ ಸೈನಿಕರಿಗೆ ಒಳಿತಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬದ್ರಿಯಾ ಮಸೀದಿ ಅಧ್ಯಕ್ಷ ಅಮೀನ್ ಮೊಹಿಸಿನ್, ‘ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಭಾರತೀಯ ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿಸಬೇಕು ಮತ್ತು ಶ್ರೇಯೋಭಿವೃದ್ಧಿಯಾಗಬೇಕೆಂದು ಸರ್ವ ಮುಸಲ್ಮಾನರು ಇಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ. ದೇಶವನ್ನು ಬಲಪಡಿಸುವ ನಿಟ್ಟಿನಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು, ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಒಗ್ಗಟ್ಟನ್ನು ಕಾಯ್ದುಕೊಳ್ಳಲು ಪ್ರಾರ್ಥಿಸಲಾಯಿತು’ ಎಂದರು.
ಬದ್ರಿಯಾ ಮಸೀದಿಯ ಉಪಾಧ್ಯಕ್ಷ ಇಸ್ಮಾಯಿಲ್, ಮದ್ರಸ ಪ್ರಾಂಶುಪಾಲರಾದ ಹನೀಫ್ ಧಾರಿಮಿ, ನಗರಸಭಾ ಸದಸ್ಯ ಮನ್ಸೂರ್ ಭಾಗವಹಿಸಿದ್ದರು.
ಸೋಮವಾರಪೇಟೆ: ಹೊಸತೋಟ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ
ಸೋಮವಾರಪೇಟೆ: ಭಾರತೀಯ ಸೈನಿಕರ ಪರ ಹಾಗೂ ಸೈನಿಕರ ಶ್ರೇಯಸ್ಸಿಗಾಗಿ ಹೊಸತೋಟ ಮಸೀದಿಯಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಖತೀಬ್ ಹಾಫಿಜ್ ಉಸ್ಮಾನ್ ಸಖಾಫಿ, ‘ಸಾಮಾಜಿಕ ಜಾಲತಾಣಗಳನ್ನು ಎಲ್ಲರೂ ಎಚ್ಚರಿಕೆಯಿಂದ ಬಳಕೆ ಮಾಡಬೇಕು. ಇದರಲ್ಲಿ ನಿಜವಾದ ಸುದ್ದಿಗಿಂತಲೂ ತಪ್ಪು ಮಾಹಿತಿ ನೀಡುವ ಮೂಲಕ ಜನರ ದಾರಿತಪ್ಪಿಸುವ ಕೆಲಸವಾಗುತ್ತಿದೆ. ನಮ್ಮ ರಾಷ್ಟ್ರದ ಸರ್ಕಾರದೊಂದಿಗೆ ಮತ್ತು ಸೈನಿಕರೊಂದಿಗೆ ಎಲ್ಲರೂ ಕೈಜೋಡಿಸಬೇಕು. ನಮ್ಮ ದೇಶ ನಮ್ಮ ಹೆಮ್ಮೆ’ ಎಂದು ಕರೆ ನೀಡಿದರು.
ಮಸೀದಿಯ ಖತೀಬ ಹಾಫಿಜ್ ಉಸ್ಮಾನ್ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಜಮಾಅತ್ ಕಾರ್ಯದರ್ಶಿ ಸಲೀಂ ಹೊಸತೋಟ, ಸಮಿತಿಯ ಸದಸ್ಯರಾದ ಖಾಲೀದ್, ರಷೀದ್, ಇಬ್ರಾಹಿಂ, ಶಿಹಾಬ್, ಜಾವಿದ್ ಭಾಗವಹಿಸಿದ್ದರು.
ಸಿದ್ದಾಪುರ: ಜುಮಾ ಮಸೀದಿಯಲ್ಲಿ ಪ್ರಾರ್ಥನೆ
ಸಿದ್ದಾಪುರ: ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೈನಿಕರ ಪರವಾಗಿ ಸಿದ್ದಾಪುರ ಜುಮಾ ಮಸೀದಿಯಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮಸೀದಿ ಖತೀಬರಾದ ನೌಫಲ್ ಹುದವಿ ಪ್ರಾರ್ಥನೆ ನೆರವೇರಿಸಿದರು. ಪ್ರಮುಖರಾದ ರಹೂಫ್ ಹಾಜಿ, ಉಮ್ಮರ್ ಫೈಜಿ, ಇಸ್ಮಾಯಿಲ್, ಬಶೀರ್, ಅಸ್ಕರ್, ಮುಸ್ತಫ, ಅಫ್ಸಲ್, ಹುಸೈನ್ ಭಾಗವಹಿಸಿದ್ದರು.
ಯೋಧರ ಒಳಿತಿಗೆ ಬಿಜೆಪಿಯಿಂದ ದೇಗುಲಗಳಲ್ಲಿ ಪೂಜೆ
ಮಡಿಕೇರಿ: ಯೋಧರಿಗೆ ಒಳಿತಾಗಲಿ ಎಂದು ಬಿಜೆಪಿ ಜಿಲ್ಲಾ ಘಟಕದ ಜಿಲ್ಲೆಯ ಹಲವು ದೇಗುಲಗಳಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿತು.
ಇಲ್ಲಿನ ಓಂಕಾರೇಶ್ವರ ದೇವಾಲಯದಲ್ಲಿ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಜಿಲ್ಲಾ ಮುಖಂಡರು ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅಪ್ಪಚ್ಚುರಂಜನ್ ‘ಭಾರತ ನ್ಯಾಯದ ಪರ ಯುದ್ಧ ಮಾಡುತ್ತಿದೆ’ ಎಂದರು.
ಸಿದ್ದಾಪುರದಲ್ಲಿ ಪೂಜೆ
ಸಿದ್ದಾಪುರ: ಅಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೇನೆಯ ಹೆಸರಿನಲ್ಲಿ ಸಿದ್ದಾಪುರ ಬಿಜೆಪಿ ಶಕ್ತಿ ಕೇಂದ್ರದಿಂದ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪಕ್ಷದ ಕಾರ್ಯಕರ್ತರು ಭಾರತೀಯ ಯೋಧರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.
ಈ ವೇಳೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರೂಪೇಶ್ ಗ್ರಾಮ ಪಂಚಾಯಿತಿ ಸದಸ್ಯ ಆನಂದ ರೀನಾ ತುಳಸಿ ಪ್ರಮುಖರಾದ ಮನೋಹರ್ ಬಾಲಕೃಷ್ಣ ರೈ ಭಾಗವಹಿಸಿದ್ದರು.
ಸೋಮವಾರಪೇಟೆ: ಸೋಮೇಶ್ವರ ದೇವಾಲಯದಲ್ಲಿ ಪೂಜೆ
ಸೋಮವಾರಪೇಟೆ: ಭಯೋತ್ಪಾದಕರ ವಿರುದ್ಧ ಸಮರ ಸಾರಿರುವ ಭಾರತೀಯ ಯೋಧರ ಶ್ರೇಯೋಭಿವೃದ್ಧಿಗೆ ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಆಟೋ ಚಾಲಕರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಜನಾರ್ದನ್ ವರ್ತಕ ಅರುಣ್ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.