ಮಡಿಕೇರಿ: ನಗರದ ಪ್ರಮುಖ ಪ್ರವಾಸಿತಾಣ ರಾಜಾಸೀಟ್‌ಗೆ ಕೂಗಳತೆ ದೂರದಲ್ಲಿರುವ ‘ಕೂರ್ಗ್ ವಿಲೇಜ್’ ಹಾಳು ಸುರಿಯುತ್ತಿದ್ದು, ಬಿಕೊ ಎನ್ನುತ್ತಿದೆ.
ಸಾರ್ವಜನಿಕರ ಹಣ ಉಪಯೋಗಿಸಿ ನಿರ್ಮಿಸಿದ ಈ ತಾಣಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಜೀವ ತುಂಬಲು ಇಚ್ಛಾಶಕ್ತಿ ತೋರುತ್ತಿಲ್ಲ. ಈ ತಾಣ ಸದ್ಯ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಿದೆ.
ಸುಂದರ ಕೊಳ, ನಡಿಗೆಯ ಹಾದಿ, ಮರಗಿಡಗಳ ಹಚ್ಚ ಹಸಿರು, ಜೊತೆಗೆ 18 ಮಳಿಗೆಗಳು ಇಲ್ಲಿವೆ. ಪ್ರವಾಸಿಗರು ಮಾತ್ರವಲ್ಲ, ನಗರದ ನಿವಾಸಿಗಳೂ ಒಂದಷ್ಟು ಹೊತ್ತು ಇಲ್ಲಿ ಕಳೆಯಲು ಸೂಕ್ತ ಎನಿಸುವಂತಹ ತಾಣ ಇದು. ಆದಾಗ್ಯೂ, ಇದು ನಿರ್ಜನವಾಗಿದೆ.
ಇದು ಆರಂಭವಾಗಿ ಸರಿಸುಮಾರು 5 ವರ್ಷಗಳೇ ಕಳೆದಿವೆ. ಮಳಿಗೆಗಳನ್ನು ಸಹ ನಿಗದಿಮಾಡಲಾಗಿದೆ. ಆನಂತರ ಕಾರ್ಯಾರಂಭ ಮಾಡಿದರೂ ಪ್ರವಾಸಿಗರು ಸುಳಿಯುತ್ತಿಲ್ಲ, ಲಾಭ ಬರುತ್ತಿಲ್ಲ ಎಂಬ ಕಾರಣಕ್ಕೆ ಮುಚ್ಚಲಾಗಿದೆ. ಪ್ರವಾಸಿಗರು ಹೆಚ್ಚು ಭೇಟಿ ಕೊಡುವಂತಹ ರಾಜಾಸೀಟ್‌ನಂತಹ ಉದ್ಯಾನದ ಎದುರೇ ಈ ಕೂರ್ಗ್ ವಿಲೇಜ್ ಇದ್ದರೂ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿದೆ.
ಈ ತಾಣದ ಬಗ್ಗೆ ಮಾಹಿತಿ ನೀಡದಿರುವುದು ಈ ಸನ್ನಿವೇಶಕ್ಕೆ ಕಾರಣ, ಈ ಬಗ್ಗೆ ರಾಜಾಸೀಟ್‌ನಲ್ಲಿ ಪ್ರಚಾರ ಮಾಡಿದರೆ, ನಿಶ್ಚಿತವಾಗಿಯೂ ಪ್ರವಾಸಿಗರ ವೀಕ್ಷಣೆಯ ತಾಣವಾಗಲಿದೆ. ಆದರೆ ಪ್ರಚಾರದ ಪ್ರಯತ್ನ ನಡೆದಿಲ್ಲ. ರಾಜಾಸೀಟ್ ಹಾಗೂ ಕೂರ್ಗ್ ವಿಲೇಜ್ – ತೋಟಗಾರಿಕಾ ಇಲಾಖೆಗೆ ಸೇರಿದ್ದರೂ ಪ್ರಚಾರ ನಡೆಸುವಲ್ಲಿ ಇಲಾಖೆ ಸೋತಿದೆ.
18 ಮಳಿಗೆಗಳಲ್ಲಿ ಒಂದನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಲಾಗಿದೆ. ಅಲ್ಲಿ ಉತ್ತಮ ಗುಣಮಟ್ಟದ ಅಸಲಿ ಜೇನು ಮಾರಾಟ ಮಳಿಗೆ ತೆರೆಯುವ ಚಿಂತನೆ ಇದೆ ಎಂದು ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್ ಈಚೆಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದು, ‘ಕೂರ್ಗ್ ವಿಲೇಜ್ ಎಂಬ ತಾಣವೊಂದಿದೆ’ ಎಂಬ ಸಂಗತಿಯನ್ನು ನೆನೆಯುವಂತೆ ಮಾಡಿತು.
‘ಕೂರ್ಗ್ ವಿಲೇಜ್’ ಅನ್ನು ಮರೆತಿಲ್ಲ. ಅದನ್ನು ಇನ್ನಷ್ಟು ಅಭಿವೃದ್ದಿಪಡಿಸಿ ಪ್ರವಾಸಿಗರಿಗೆ ಲಭ್ಯವಾಗುವಂತೆ ಮಾಡುವ ಕಾರ್ಯ ನಡೆಯುತ್ತಿದೆ’ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೇಶ್ ‘ಪ‍್ರಜಾವಾಣಿ’ಗೆ ತಿಳಿಸಿದ್ದಾರೆ.
ಮರಗಿಡಗಳಿಗೆ, ಪಶು ಪಕ್ಷಿಗಳಿಗೆ ಹಾನಿಯಾಗದಂತೆ ಪ್ರವಾಸಿಗರನ್ನು ಸೆಳೆಯಲು ಏನೇನು ಮಾಡಬಹುದೆಂಬ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಸರ್ಕಾರದ ಮಟ್ಟದಲ್ಲೂ ಚಿಂತನೆ ಇದೆ. ಮಳಿಗೆ ನಿಗದಿಯಾಗಿರುವವರಿಗೆ ಪತ್ರ ಬರೆದು ಮಳಿಗೆ ತೆರೆಯುವಂತೆ ಕೋರಲಾಗಿದೆ. ಆದಷ್ಟು ಬೇಗ ಮತ್ತೆ ಕಾರ್ಯಾರಂಭ ಮಾಡಲು ಸಿದ್ಧತೆ ನಡೆಸಲಾಗಿದೆ’ ಎಂದು ಹೇಳಿದರು.
ಮರುಜೀವ ತುಂಬಬೇಕು
ಕೂರ್ಗ್ ವಿಲೇಜ್ ಅನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಲಾಗಿದೆ. ಅದು ನೋಡುವುದಕ್ಕೂ ತುಂಬಾ ಚೆನ್ನಾಗಿದೆ. ರಾಜಾಸೀಟ್ ಉದ್ಯಾನದ ಎದುರೇ ಇರುವುದರಿಂದ ಪ್ರವಾಸಿಗರನ್ನು ಸುಲಭವಾಗಿ ಸೆಳೆಯಬಹುದು. ಸಂಬಂಧಪಟ್ಟ ಇಲಾಖೆ ಸ್ವಲ್ಪ ಅನುದಾನ ಬಳಕೆ ಮಾಡಿ ಇದನ್ನು ಸ್ವಚ್ಛಗೊಳಿಸಿ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು. 10 ವರ್ಷದಿಂದ ಹಾಳು ಸುರಿಯುತ್ತಿರುವ ಈ ತಾಣಕ್ಕೆ ಜೀವ ತುಂಬಬೇಕು
- ಬಿ.ಆರ್.ನಾಗೇಂದ್ರ ಪ್ರಸಾದ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ.
ಇಚ್ಛಾಶಕ್ತಿ ಬೇಕು
ನಾವು ನಮ್ಮ ಹಸಿರನ್ನು ಉಳಿಸಿಕೊಳ್ಳಬೇಕು. ಕಾಂಕ್ರೀಟ್ ಜಂಗಲ್‌ನಿಂದ ಜನರು ಬೇಸರಗೊಂಡಿದ್ದಾರೆ. ಬಹಳಷ್ಟು ಬಾರಿ ರಾಜಾಸೀಟ್ ಭರ್ತಿಯಾಗುತ್ತದೆ. ಆಗ ಪ್ರವಾಸಿಗರಿಗೆ ಇದು ಪರ್ಯಾಯ ತಾಣವಾಗಿಯೂ ಕಾಣುತ್ತದೆ. ಅಲ್ಲಿನ ಕೆರೆಯನ್ನು ತಾವರೆಕೊಳ ಮಾಡಬಹುದು. ಜನರ ಕಣ್ಣಿಗೆ ಆಹ್ಲಾದಕರ ವಾತಾವರಣ ಸೃಷ್ಟಿಸಬಹುದು. ಸೆಲ್ಫೀ ಪಾಯಿಂಟ್‌ಗಳನ್ನು ಮಾಡಬಹುದು. ಇದರಿಂದ ಆದಾಯವೂ ಬರುತ್ತದೆ. ಆದರೆ, ಇದನ್ನೆಲ್ಲ ಮಾಡಲು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಇಚ್ಛಾಶಕ್ತಿ ಬೇಕಿದೆ.
- ಗೀತಾ ಗಿರೀಶ್, ಆರ್ಥಿಕ ಸಲಹೆಗಾರರು.
ಸಾರ್ವಜನಿಕರ ಹಣ ಪೋಲು..
‘ಕೂರ್ಗ್ ವಿಲೇಜ್’ ಕಟ್ಟುವುದಕ್ಕೆ ಬಳಕೆ ಮಾಡಿದ್ದು ಸಾರ್ವಜನಿಕ ಹಣ. ಈಗ ಹಲವು ವರ್ಷಗಳಿಂದ ಈ ತಾಣವನ್ನು ಬಳಕೆ ಮಾಡದೇ ಹಾಗೆಯೇ ಬಿಡಲಾಗಿದೆ. ಅದೀಗ ಅವಸಾನದತ್ತ ಸಾಗುತ್ತಿದೆ. ಇದು ಸಾರ್ವಜನಿಕರ ಹಣವನ್ನು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಜನಪ್ರತಿನಿಧಿಗಳಿಂದ ಕೇವಲ ಭರವಸೆಗಳಷ್ಟೇ ಸಿಗುತ್ತಿದೆ. ಆದರೆ ಕಾರ್ಯರೂಪಕ್ಕೆ ಬರುತ್ತಿಲ್ಲ. ಇನ್ನಾದರೂ, ಈ ತಾಣವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು
- ನವೀನ್ ಅಂಬೇಕಲ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ.
Cut-off box - ಪ್ರತಿಕ್ರಿಯೆಗಳು ಕೂರ್ಗ್ ವಿಲೇಜ್‌ಗೆ ಜೀವ ತುಂಬಬೇಕು ಕೂರ್ಗ್ ವಿಲೇಜ್ ಅನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಲಾಗಿದೆ. ಅದು ನೋಡುವುದಕ್ಕೂ ತುಂಬಾ ಚೆನ್ನಾಗಿದೆ. ರಾಜಾಸೀಟ್ ಉದ್ಯಾನದ ಎದುರೇ ಇರುವುದರಿಂದ ಪ್ರವಾಸಿಗರನ್ನು ಸುಲಭವಾಗಿ ಸೆಳೆಯಬಹುದು. ಸಂಬಂಧಪಟ್ಟ ಇಲಾಖೆ ಸ್ವಲ್ಪ ಅನುದಾನ ಬಳಕೆ ಮಾಡಿ ಇದನ್ನು ಸ್ವಚ್ಛಗೊಳಿಸಿ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು. 10 ವರ್ಷದಿಂದ ಹಾಳು ಸುರಿಯುತ್ತಿರುವ ಈ ತಾಣಕ್ಕೆ ಜೀವ ತುಂಬಬೇಕು ಬಿ.ಆರ್.ನಾಗೇಂದ್ರ ಪ್ರಸಾದ್ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ. *** ಇಚ್ಛಾಶಕ್ತಿ ಬೇಕು ನಾವು ನಮ್ಮ ಹಸಿರನ್ನು ಉಳಿಸಿಕೊಳ್ಳಬೇಕು. ಕಾಂಕ್ರೀಟ್ ಜಂಗಲ್‌ನಿಂದ ಜನರು ಬೇಸರಗೊಂಡಿದ್ದಾರೆ. ಬಹಳಷ್ಟು ಬಾರಿ ರಾಜಾಸೀಟ್ ಭರ್ತಿಯಾಗುತ್ತದೆ. ಆಗ ಪ್ರವಾಸಿಗರಿಗೆ ಇದು ಪರ್ಯಾಯ ತಾಣವಾಗಿಯೂ ಕಾಣುತ್ತದೆ. ಅಲ್ಲಿನ ಕೆರೆಯನ್ನು ತಾವರೆಕೊಳ ಮಾಡಬಹುದು. ಜನರ ಕಣ್ಣಿಗೆ ಆಹ್ಲಾದಕರ ವಾತಾವರಣ ಸೃಷ್ಟಿಸಬಹುದು. ಸೆಲ್ಫೀ ಪಾಯಿಂಟ್‌ಗಳನ್ನು ಮಾಡಬಹುದು. ಇದರಿಂದ ಆದಾಯವೂ ಬರುತ್ತದೆ. ಆದರೆ ಇದನ್ನೆಲ್ಲ ಮಾಡಲು ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಬೇಕಿದೆ. ಗೀತಾ ಗಿರೀಶ್ ಆರ್ಥಿಕ ಸಲಹೆಗಾರರು. *** ಸಾರ್ವಜನಿಕರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ‘ಕೂರ್ಗ್ ವಿಲೇಜ್’ ಕಟ್ಟುವುದಕ್ಕೆ ಬಳಕೆ ಮಾಡಿದ್ದು ಸಾರ್ವಜನಿಕ ಹಣ. ಈಗ ಹಲವು ವರ್ಷಗಳಿಂದ ಈ ತಾಣವನ್ನು ಬಳಕೆ ಮಾಡದೇ ಹಾಗೆಯೇ ಬಿಡಲಾಗಿದೆ. ಅದೀಗ ಅವಸಾನದತ್ತ ಸಾಗುತ್ತಿದೆ. ಇದು ಸಾರ್ವಜನಿಕರ ಹಣವನ್ನು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಜನಪ್ರತಿನಿಧಿಗಳಿಂದ ಕೇವಲ ಭರವಸೆಗಳಷ್ಟೇ ಸಿಗುತ್ತಿದೆ. ಆದರೆ ಕಾರ್ಯರೂಪಕ್ಕೆ ಬರುತ್ತಿಲ್ಲ. ಇನ್ನಾದರೂ ಈ ತಾಣವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ನವೀನ್ ಅಂಬೇಕಲ್ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ. ***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.