ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ‘ಶ್ರೀಕೃಷ್ಣ ಜನ್ಮಾಷ್ಟಮಿ’ಯನ್ನು ಶನಿವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿನ ಕಂಚಿ ಕಾಮಾಕ್ಷಿ ದೇವಾಲಯ ಸೇರಿದಂತೆ ಇತರೆ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಕಾಲೇಜ್ ರಸ್ತೆಯಲ್ಲಿರುವ ಇಸ್ಕಾನ್ ಮಂದಿರದಲ್ಲಿ ವಿಶೇಷ ಭಜನೆ, ಪೂಜಾವಿಧಿಗಳು ನೆರವೇರಿದವು.
ಹಲವು ಶಾಲೆಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮನೆಗಳಲ್ಲಿಯೂ ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಪೋಷಕರು ಸಂಭ್ರಮಿಸಿದರು. ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಕೃಷ್ಣನ ವೇಷದಲ್ಲಿರುವ ತಮ್ಮ ಮಕ್ಕಳ ಚಿತ್ರ ಹಾಕಿ ಖುಷಿಪಟ್ಟರು. ಮಕ್ಕಳೂ ಕೃಷ್ಣನ ವೇಷ ತೊಟ್ಟು ಸಂತಸಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ‘ಶ್ರೀಕೃಷ್ಣಜನ್ಮಾಷ್ಟಮಿ’ ಕಾರ್ಯಕ್ರಮದಲ್ಲಿ ಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಚಿಂತಕ ಚಿ.ನಾ.ಸೋಮೇಶ್ ಮಾತನಾಡಿ, ‘ಕೃಷ್ಣನ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಪ್ರತಿಪಾದಿಸಿದರು.
ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಅಧ್ಯಯನ ಮಾಡಿದ್ದಲ್ಲಿ ಶ್ರೀಕೃಷ್ಣನ ಮಹತ್ವದ ಬಗ್ಗೆ ಅರಿವಾಗುತ್ತದೆ. ಕೃಷ್ಣ ವಿಶ್ವದ ಬೆಳಕು ಎಂದರೆ ಅತಿಶಯೋಕ್ತಿಯಲ್ಲ ಎಂದರು.
ಯಾವುದೇ ಫಲಾಪೇಕ್ಷೆ ಇಲ್ಲದೆ ನೀಡಿದ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಶ್ರೀಕೃಷ್ಣ ಸಾರಿದ್ದಾರೆ. ಹಾಗಾಗಿಯೇ ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಕೃಷ್ಷನ ವೇಷದಲ್ಲಿ ಮಕ್ಕಳನ್ನು ಕಾಣುತ್ತೇವೆ. ಕೃಷ್ಣನಿಂದ ತಾಳ್ಮೆ ಕಲಿಯಬೇಕು ಎಂದರು.
ಪ್ರಿಯಾ ರವಿಕುಮಾರ್ ಮಾತನಾಡಿ, ‘ರಾಷ್ಟ್ರಾದ್ಯಂತ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ವಿಶಿಷ್ಟ ಹಾಗೂ ವಿಶೇಷವಾಗಿ ಭಕ್ತಿಯಿಂದ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.
ಕಂಚಿ ಕಾಮಾಕ್ಷಮ್ಮ ದೇವಾಲಯ ಸಮಿತಿಯ ಉಪಾಧ್ಯಕ್ಷ ಜಗದೀಶ್ ಮಾತನಾಡಿ, ‘ದೇಶ ವಿದೇಶಗಳಲ್ಲಿ ಶ್ರೀಕೃಷ್ಣನ ಅಧ್ಯಯನ ಮಾಡಿದ್ದಾರೆ. ಶ್ರೀಕೃಷ್ಣ ಜಗತ್ಪ್ರಸಿದ್ದ ಮೇರು ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಸೂಯೆ ನಾಶ ಆಗಬೇಕು ಎಂದು ಶ್ರೀಕೃಷ್ಣರು ಬದುಕಿನುದ್ದಕ್ಕೂ ಸಾರಿದ್ದಾರೆ ಎಂದು ನುಡಿದರು.
ಬ್ಲಾಸಂ ಶಾಲೆಯ ಮುಖ್ಯೋಪಾದ್ಯಯರಾದ ಅನಸೂಯ ಮಾತನಾಡಿ, ‘ಪ್ರತಿಯೊಬ್ಬರೂ ಕಷ್ಟದಲ್ಲಿದ್ದಾಗ ಶ್ರೀಕೃಷ್ಣನನ್ನು ಸ್ಮರಿಸುತ್ತೇವೆ. ಆದ್ದರಿಂದ ರಾಷ್ಟ್ರದಲ್ಲಿ ಶ್ರೀಕೃಷ್ಣರಿಗೆ ತನ್ನದೇ ಆದ ಮಹತ್ವದ ಸ್ಥಾನವಿದೆ’ ಎಂದು ಹೇಳಿದರು.
ಕಂಚಿ ಕಾಮಾಕ್ಷಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಜಿ.ಎಲ್.ದಾಸ್, ಉಪಾಧ್ಯಕ್ಷ ಪೆರುಮಾಳ್, ಗೌರವಾಧ್ಯಕ್ಷರಾದ ಜಿ.ಜಿ.ಬಾಲಕೃಷ್ಣ, ಜಿ.ಬಿ.ಪವನ್, ಜಾನಪದ ಪರಿಷತ್ತಿ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಟಿ.ಅನಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಮಣಜೂರು ಮಂಜುನಾಥ್ ಭಾಗವಹಿಸಿದ್ದರು.
ಸಮಾಜದಲ್ಲಿ ಅಸಹನೆ ಅಸಹಿಷ್ಣುತೆ ಇರಬಾರದು; ಜಿ.ವಿ.ರವಿಕುಮಾರ್
ಕಂಚಿಕಾಮಾಕ್ಷಿ ದೇವಾಲಯ ಸಮಿತಿಯ ಗೌರವ ಅಧ್ಯಕ್ಷ ಜಿ.ವಿ.ರವಿಕುಮಾರ್ ಮಾತನಾಡಿ ‘ಜೀವನದಲ್ಲಿ ಮಾನವೀಯ ಮೌಲ್ಯ ಮತ್ತು ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ದ್ವೇಷ ಅಸೂಯೆ ಅಸಹನೆ ಅಸಹಿಷ್ಣುತೆ ಇರಬಾರದು. ಒಳ್ಳೆಯದನ್ನು ರೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶ್ರೀಕೃಷ್ಣನ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಶ್ರೀಕೃಷ್ಣರು ಭಕ್ತಿಯ ಶಕ್ತಿಯಾಗಿ ಬರುತ್ತಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.