ವಿರಾಜಪೇಟೆ: ‘ಸದೃಢವಾಗಿ ಶರೀರವನ್ನು ಕಾಯ್ದುಕೊಳ್ಳಲು ಹಾಗೂ ಮಾನಸಿಕವಾಗಿಯೂ ಸಮರ್ಥವಾಗಿರಿಸುವಲ್ಲಿ ಕ್ರೀಡೆ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ’ ಎಂದು ಸಮೀಪದ ಅರಮೇರಿಯ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಚಾಮೀಯಾಲ ಗ್ರಾಮದಲ್ಲಿ ಕೂವಲೇರ ಕುಟುಂಬ ಆಯೋಜಿಸಿರುವ ಕೊಡವ ಮುಸ್ಲಿಂ ಕ್ರಿಕೆಟ್ ಹಬ್ಬಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಕ್ರೀಡೆಗೆ ಪ್ರಮುಖ ಸ್ಥಾನವಿದ್ದು, ಹಾಕಿ, ಕ್ರಿಕೆಟ್, ಹಗ್ಗಜಗ್ಗಾಟ ಹೀಗೆ ಒಂದಿಲ್ಲೊಂದು ಕ್ರೀಡಾಕೂಟಗಳು ನಿರಂತರವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುತ್ತದೆ. ಇದು ಸಾಮಾಜಿಕ ಸಂಘಟನೆಯ ಜೊತೆಗೆ ಕುಟುಂಬಗಳನ್ನು ಬೆಸೆಯುವ ಕೆಲಸವನ್ನು ನಿರ್ವಹಿಸುತ್ತದೆ. ಜೊತೆಗೆ ಅನೇಕ ಯುವ ಪ್ರತಿಭೆಗಳಿಗೆ ಅಗತ್ಯವಾದ ವೇದಿಕೆಯನ್ನು ಒದಗಿಸುತ್ತದೆ’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೂವಲೇರ ಕೊಡವ ಮುಸ್ಲಿಂ ಕ್ರಿಕೆಟ್ ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷ ಕೂವಲೇರ ಹನೀಸ್ ಮಾತನಾಡಿ, ‘ಈ ಬಾರಿಯ ಕ್ರೀಡಾಕೂಟದಲ್ಲಿ 64 ತಂಡಗಳು ಭಾಗವಹಿಸುತ್ತಿದೆ. ಏ. 21ರವರೆಗೆ ಟೂರ್ನಿ ನಡೆಯಲಿದೆ. ವಿಜೇತ ತಂಡಕ್ಕೆ ₹ 1 ಒಂದು ಲಕ್ಷ ನಗದು ಬಹುಮಾನ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹ 50 ಸಾವಿರ ನಗದು, ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳಿಗೂ ಟ್ರೋಫಿ ಹಾಗೂ ಹಲವು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು’ ಎಂದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕೊಳಕೇರಿಯ ವರ್ತಕ ಹ್ಯಾರೀಸ್, ಕೊಡಗು ಮುಸ್ಲಿಂ ಕಪ್ ಆಯೋಜಕ ಕೆ.ಅಬ್ದುಲ್ ರಶೀದ್ ಹಾಗೂ ಹಿರಿಯರಾದ ಕೆ.ಹನೀಫ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.