ಮಡಿಕೇರಿ: ‘ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಗಮನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಮುಡಾ ಪ್ರಕರಣ ಸಣ್ಣದು. ಮೊದಲು ಬಿಜೆಪಿಯವರು ರಾಜೀನಾಮೆ ಕೊಡಬೇಕು’ ಎಂದು ಉನ್ನತ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಒತ್ತಾಯಿಸಿದರು.
ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ಆದಾಯ ತೆರಿಗೆ ದಾಳಿಗೆ ಒಳಗಾದ ಕಂಪನಿಗಳು ಚುನಾವಣಾ ಬಾಂಡ್ ಕೊಟ್ಟಿವೆ ಎಂಬ ಗುರುತರವಾದ ಆರೋಪ ಅವರ ಮೇಲಿದೆ. ಈ ಪ್ರಕರಣದಲ್ಲಿ ಪ್ರಧಾನಿ ಸೇರಿದಂತೆ ಇನ್ನಿತರ ಕೇಂದ್ರ ಸಚಿವರೂ ಬರುತ್ತಾರೆ. ಅವರು ಮೊದಲು ರಾಜೀನಾಮೆ ಕೊಡಲಿ’ ಎಂದರು.
‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಇಲ್ಲದ ವಿಷಯಗಳನ್ನು ಹೇಳಿ ಇಡೀ ವ್ಯವಸ್ಥೆ ಹಾಳು ಮಾಡಬಾರದು. ಹಿಂದೆಯೂ ಅವರು, ಪೆನ್‌ಡ್ರೈವ್ ಜೇಬಲ್ಲೇ ಇದೆ ತೆಗೆಯುತ್ತೇನೆ ಎಂದು ಹೇಳಿದ್ದರು. ಗಾಜಿನ ಮನೆಯಲ್ಲಿ ಕುಳಿತವರು ಬೇರೆಯವರತ್ತ ಕಲ್ಲೆಸೆಯಬಾರದು. ಪ್ರತಿ ವಿಷಯದಲ್ಲೂ ಅಕ್ರಮವಾಗಿದೆ ಎಂದು ಆರೋಪಿಸುವ ಪರಿಪಾಠ ಬಿಜೆಪಿ– ಜೆಡಿಎಸ್‌ನಿಂದ ಆರಂಭವಾಗಿದೆ. ಇದು ರಾಜ್ಯಕ್ಕೂ, ಸಾರ್ವಜನಿಕರಿಗೂ ಒಳ್ಳೆಯದಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.