ಮಡಿಕೇರಿ ದಸರಾ ಶೋಭಾಯಾತ್ರೆ ಮಂಟಪ (ಸಂಗ್ರಹ ಚಿತ್ರ)
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಡೆಯಲಿರುವ ಎರಡು ಮಹತ್ವದ ದಸರೆಗಳೆನಿಸಿದ ಮಡಿಕೇರಿ ಹಾಗೂ ಗೋಣಿಕೊಪ್ಪಲಿನ ದಸರೆ ಪ್ರತಿ ವರ್ಷದಂತೆ ಈ ವರ್ಷವೂ ಪ್ರಚಾರದ ಕೊರತೆಯನ್ನು ಎದುರಿಸುತ್ತಿದೆ.
ವಿಜಯದಶಮಿಯಂದು ನಡೆಯುವ ದಸರಾ ದಶಮಂಟಪಗಳ ಶೋಭಾಯಾತ್ರೆಗೆ ಪ್ರಚಾರ ಬೇಡವೇ ಬೇಡ. ಜನಸಾಗರವೇ ತಾನೇ ತಾನಾಗಿ ಮಡಿಕೇರಿಯತ್ತ ನುಗ್ಗುತ್ತದೆ. ಆದರೆ, ಇನ್ನುಳಿದ ನವರಾತ್ರಿ ದಿನಗಳಂದು ನಡೆಯುವ ವೈವಿಧ್ಯಮಯವಾದ ಕಾರ್ಯಕ್ರಮಗಳ ಕುರಿತು ಹೊರ ಜಿಲ್ಲೆಯ ಜನರಿಗೆ ಗೊತ್ತೇ ಆಗುವುದಿಲ್ಲ. ಹೀಗಾಗಿ, ದಸರಾ ಕಾರ್ಯಕ್ರಮಗಳು ನಡೆಯುವ ಗಾಂಧಿ ಮೈದಾನ ಹಲವು ಕಾರ್ಯಕ್ರಮಗಳಿಗೆ ಪ್ರೇಕ್ಷಕರಿಲ್ಲದೆ ಭಣಗುಡುತ್ತಿರುತ್ತದೆ.
ಮಕ್ಕಳ ದಸರೆ, ಕಾಫಿ ದಸರೆ, ಯುವದಸರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದರೂ ಇನ್ನುಳಿದ ದಸರೆಯ ಕಾರ್ಯಕ್ರಮಗಳಿಗೆ ಗಾಂಧಿ ಮೈದಾನದ ಕುರ್ಚಿಗಳು ಭರ್ತಿಯಾಗುವುದಿಲ್ಲ. ಸಾಕಷ್ಟು ಪ್ರಚಾರ ನಡೆಸಿದರೆ ಖಂಡಿತವಾಗಿಯೂ ಮೈದಾನ ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ.
ಒಂದು ವಾರ ಮೊದಲೇ ಆಹ್ವಾನ ಪತ್ರಿಕೆ ತಯಾರಾಗಿ, ಯಾವ ಯಾವ ದಿನ ಯಾವ ಯಾವ ಕಾರ್ಯಕ್ರಮಗಳು ನಡೆಯುತ್ತವೆ ಎನ್ನುವುದು ಗೊತ್ತಾಗಬೇಕು. ಇದನ್ನು ಹೊರ ಜಿಲ್ಲೆಗಳಲ್ಲಿ ಕನಿಷ್ಠ ಪಕ್ಷದ ಜಿಲ್ಲೆಗೆ ಹೊಂದಿಕೊಂಡ ತಾಲ್ಲೂಕು ಕೇಂದ್ರಗಳಲ್ಲಿ ಪ್ರಚಾರ ನಡೆಸಿದರೆ ಆಗ ಸಹಜವಾಗಿಯೇ ನವರಾತ್ರಿಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರಲು ಸಾಧ್ಯವಾಗುತ್ತದೆ.
ಮಡಿಕೇರಿ ದಸರೆಗಾಗಿಯೇ ವೆಬ್‌ಸೈಟ್ ರೂಪಿಸಿ ಪ್ರಚಾರ ನಡೆಸಿದರೆ, ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್‌ಗಳಲ್ಲಿ ದಸರಾ ಕುರಿತು ಕಾರ್ಯಕ್ರಮಗಳ ವಿವರ ನೀಡಿದರೆ ಹೊರಗಿನಿಂದ ಜನರು ಬರಲು ಸಹಕಾರಿಯಾಗುತ್ತದೆ. ಆಗ ಇಲ್ಲಿನ ಹೋಟೆಲ್‌ನವರಿಗೂ ಲಾಭವಾಗುತ್ತದೆ.
ಆದರೆ, ದಸರಾ ಸಮೀಪಿಸಿದರೂ ಖಚಿತವಾಗದ ಅನುದಾನ, ಮೊದಲೇ ಬಿಡುಗಡೆಯಾಗದ ಹಣ, ಸಾಕಷ್ಟು ಮುಂಚೆ ನಡೆಯದ ಪೂರ್ವಸಿದ್ಧತಾ ಸಭೆ, ಇವಗಳೆಲ್ಲದರಿಂದ ಮೊದಲೇ ಕಾರ್ಯಕ್ರಮಗಳ ಪಟ್ಟಿ ತಯಾರಾಗುವುದೇ ಇಲ್ಲ. ಕೊನೆಗಳಿಗೆಯಲ್ಲಿ ಎಲ್ಲ ಕಸರತ್ತುಗಳೂ ನಡೆಯುತ್ತವೆ. ಹೀಗಾಗಿ, ದಸರೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹುಪಾಲು ದಿನಗಳ ಕಾಲ ಮೈದಾನ ಜನರಿಂದ ಭರ್ತಿಯಾಗುವುದೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.