
ಸುಂಟಿಕೊಪ್ಪ: ಹೆರಾಯಿನ್, ಕೊಕೇನ್, ಫೆವಿಕ್ವಿಕ್ ಮೊದಲಾದ ಮಾದಕ ವ್ಯಸನಗಳಿಗೆ ಯುವ ಸಮುದಾಯ ಬಲಿಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಸೈಬರ್ ಅಪರಾದ ಪತ್ತೆ ದಳದ ಹೆಡ್ ಕಾನ್‌ಸ್ಟೆಬಲ್ ರಮೇಶ್ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಪೊಲೀಸ್ ಇಲಾಖೆಯಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವ್ಯಸನಿ ವಿರೋಧಿ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
‘ವಿದ್ಯಾರ್ಥಿ ಸಮುದಾಯವನ್ನು ದಾರಿ ತಪ್ಪಿಸುತ್ತಿರುವ ಮಾದಕ ದ್ರವ್ಯಗಳು ಅವರ ವ್ಯಾಸಂಗಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಹಾಗೆಯೇ ದೈಹಿಕ ಮತ್ತು ಮಾನಸಿಕವಾಗಿ ಮನುಷ್ಯನ ಜೀವನವನ್ನು ಜರ್ಜರಿತವನ್ನಾಗಿ ಮಾದಕ ದ್ರವ್ಯಗಳು ಮಾಡುತ್ತಿವೆ. ಮಾದಕ ದ್ರವ್ಯಗಳನ್ನು ಮಾರಾಟ ಮಾಡುವುದು ಮತ್ತು ಸೇವಿಸುವುದು ಅಪರಾಧವಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳ ಬಳಕೆಯೂ ಕ್ರಿಮಿನಲ್ ಅಪರಾಧವಾಗಿದೆ’ ಎಂದು ಎಚ್ಚರಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಲತಾ ಮಾತನಾಡಿ, ‘ಮೋಜು ಮಸ್ತಿ ಮತ್ತು ಕ್ಷಣಿಕ ಸುಖ ಅನುಭವಿಸಲು ಇಂದು ಯುವ ಜನಾಂಗ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಯುವ ಸಮುದಾಯವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ ಕೂಡ ಇದಾಗಿದೆ’ ಎಂದರು.
‘ಮತ್ತು ಬರಿಸುವ ಮಾದಕ ವ್ಯಸನಗಳು ನಮ್ಮ ಶಾರೀರಿಕ ದೃಢತೆಯ ಮೇಲೆ ದುಷ್ಪರಿಣಾಮ ಬೀರಿ ವ್ಯಕ್ತಿಯನ್ನು ಜೀವನ ಪರ್ಯಂತ ಬದುಕಿ ಸತ್ತಂತೆ ಮಾಡುತ್ತದೆ. ಶರೀರದ ನರಮಂಡಲದ ಮೇಲೆ ಈ ಮಾದಕ ವ್ಯಸನಗಳಿಂದ ವ್ಯತಿರಿಕ್ತ ಪರಿಣಾಮ ಉಂಟಾಗಿ ವ್ಯಕ್ತಿಯು ಸಾವಿನ ದವಡೆಗೆ ದೂಡಲ್ಪಡುತ್ತಾನೆ’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕಿ ಸುನಿತಾ ಗಿರೀಶ್ ಬೋಧಿಸಿದರು.
ಸುಂಟಿಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್, ಅಪರಾದ ಪತ್ತೆದಳದ ಪಿಎಸ್ಐ ಸ್ವಾಮಿ, ಪೊಲೀಸ್ ಸಿಬ್ಬಂದಿ ಜಗದೀಶ್, ಮಂಜುನಾಥ್, ಶರತ್, ಚಂಪಕಮಾಲಿನಿ, ಉಪನ್ಯಾಸಕರಾದ ಕೆ.ಸಿ. ಕವಿತಾ, ಕವಿತಾ ಭಕ್ತಾ, ಸುಚಿತ್ರಾ, ಈಶ, ಪದ್ಮಾವತಿ, ಸಂಧ್ಯಾ ಸೀಮಾ, ಅನುಷಾ, ಅಭಿಷೇಕ್, ಕನಕ, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.