
ನಾಪೋಕ್ಲು: ‘ಶಿಸ್ತು, ವಿಧೇಯತೆ ಮತ್ತು ಸಮಯಪಾಲನೆ ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕಾದ ಉತ್ತಮ ಹವ್ಯಾಸಗಳು’ ಎಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎ೦.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಚೌರಿರ ಜಗತ್ ತಿಮ್ಮಯ್ಯ ಹೇಳಿದರು.
ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಿಂದ ಈಚೆಗೆ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪೋಷಕರು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡದಿದ್ದರೆ ಮಕ್ಕಳು ಬೆಳೆಯಲು ಸಾಧ್ಯವಿಲ್ಲ. ಮಕ್ಕಳಿಗೆ ಶಿಸ್ತು ಮತ್ತು ಸಮಯ ಪಾಲನೆಯ ಮಹತ್ವ ಅರಿವು ಮೂಡಿಸಬೇಕು. ಮಕ್ಕಳಿಗೆ ಯಾವತ್ತು ಒಳ್ಳೆಯದು ಹೇಳಿಕೊಡಬೇಕು ಎಂದರು.
ಕೊಡಗಿನ ಮಕ್ಕಳಲ್ಲಿ ಶಿಸ್ತು ಇದೆ. ಫೀಲ್ಡ್ ಮಾರ್ಷಲ್ ಕೆ.ಎ೦.ಕಾರ್ಯಪ್ಪನವರು ಜೀವನದುದ್ದಕ್ಕು ಶಿಸ್ತನ್ನು ಪಾಲಿಸಿದರು. ಅಂತಹ ನಾಡಿನಲ್ಲಿ ಹುಟ್ಟಿದ ಮಕ್ಕಳು ಶಿಸ್ತುಬದ್ಧ ಜೀವನ ನಡೆಸಲು ಶಕ್ತರು. ಇಂದಿನ ದಿನಗಳಲ್ಲಿ ಆಂಗ್ಲ ಭಾಷೆಯ ಅಗತ್ಯ ಬಹಳಷ್ಟು ಇದೆ. ಭಾಷೆ ಕಲಿತರೆ ಎಲ್ಲಿ ಹೋದರೂ ಯಶಸ್ಸು ಸಿಗುತ್ತದೆ. ನಮ್ಮ ಜೀವನದ ಬಹುಪಾಲು ಅವಧಿಯನ್ನು ಮೊಬೈಲ್ ಆಕ್ರಮಿಸಿಕೊಂಡಿದೆ. ಮೊಬೈಲ್‌ನಲ್ಲಿ ಉತ್ತಮವಾದ ವಿಚಾರಗಳಿವೆ. ಆ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಸೂಕ್ತ ಮಾರ್ಗದರ್ಶನ ಸಿಗದಿದ್ದಲ್ಲಿ ಮಕ್ಕಳು ತಪ್ಪು ದಾರಿಗೆ ಹೋಗುತ್ತಾರೆ’ ಎಂದು ತಿಳಿಸಿದರು.
ಶಾಲೆಯಲ್ಲಿ ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳು ಇವೆ. ಎನ್‌ಸಿಸಿ ಅಂತಹ ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಎನ್‌ಸಿಸಿಯಲ್ಲಿ ತೊಡಗಿಸಿಕೊಂಡರೆ ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.