ADVERTISEMENT

ಕಡಲೆಕಾಯಿ ಮಾರುತ್ತಿದ್ದ ಹುಡುಗ ಈಗ ಸಾಹಸ ಕಲಾವಿದ

ನಟನೆಯಲ್ಲೂ ಸೈ ಎನಿಸಿಕೊಂಡ ಗೋಣಿಕೊಪ್ಪಲು ಫಯಾಜ್ ಖಾನ್

ಜೆ.ಸೋಮಣ್ಣ
Published 7 ಜುಲೈ 2021, 9:59 IST
Last Updated 7 ಜುಲೈ 2021, 9:59 IST
ಫಯಾಜ್ ಖಾನ್
ಫಯಾಜ್ ಖಾನ್   

ಗೋಣಿಕೊಪ್ಪಲು: ಚಿತ್ರ ಮಂದಿರಗಳಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದ ಹುಡುಗ ಈಗ ಸಾಹಸ ಕಲಾವಿದ.

ಸಿನಿಮಾ ನಟನಾಗಬೇಕೆಂಬ ಗುರಿಯೊಂದಿಗೆ 1985ರಲ್ಲಿ ಬೆಂಗಳೂರಿಗೆ ಹೊರಟಗೋಣಿಕೊಪ್ಪಲು ಪ‍ಟ್ಟಣದ ನಿವಾಸಿ ಫಯಾಜ್ ಖಾನ್, ನಿರ್ದೇಶಕರನ್ನು ಕಾಡಿ ಬೇಡಿ, ಅವರು ಹೇಳಿದ ಕೆಲಸವನ್ನೆಲ್ಲ ಮಾಡಿಕೊಂಡು ಬಳಿಕ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಇವರ ನಟನೆಯ ಮೊದಲ ಸಿನಿಮಾ ತಮಿಳಿನ ‘ಇದಿಯಾದಾಗಂ’. ಮೊದಲ ಸಿನಿಮಾದಲ್ಲಿನ ನಟನೆ ಕಂಡ ನಿರ್ದೇಶಕರು, ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಅವಕಾಶ ನೀಡುತ್ತಾ ಹೋದರು. ನಟನೆಯ ಜತೆಗೆ ಸಾಹಸ ಕಲಾವಿದರಾಗಿಯೂ ಇವರು ಗುರ್ತಿಸಿಕೊಂಡರು.

ಬಡತನದಲ್ಲಿ ಜನಿಸಿದ ಫಯಾಜ್ ಖಾನ್, ಓದಿರುವುದು 3ನೇ ತರಗತಿ ಮಾತ್ರ. ಕುಟುಂಬ ಸಾಕುವುದಕ್ಕೆ ಅಪ್ಪ ಮಾಡುತ್ತಿದ್ದ ವೆಲ್ಡಿಂಗ್ ಕೆಲಸವನ್ನು ಬಾಲ್ಯದಲ್ಲಿಯೇ ಕಲಿತಿದ್ದರು. ಹಗಲಿನಲ್ಲಿ ವರ್ಕ್‌ಶಾ‍ಪ್‌ನಲ್ಲಿ ವೆಲ್ಡಿಂಗ್ ಮಾಡಿಕೊಂಡು ಸಂಜೆ ವೇಳೆ ಚಿತ್ರಮಂದಿರಲ್ಲಿ ಕಡಲೆಕಾಯಿ ಮಾರುತ್ತಿದ್ದರು.

ADVERTISEMENT

‘ಸಿನಿಮಾಗಳೆಂದರೆ ನನಗೆ ಪಂಚಪ್ರಾಣ, ಸಾಹಸ ಕಲಾವಿದ ಆಗಬೇಕು ಎಂದು ಬಾಲ್ಯದಲ್ಲಿಯೇ ಕನಸು ಕಂಡಿದ್ದೆ. ಹೆಚ್ಚಾಗಿ ಸಾಹಸ ಪ್ರಧಾನ ಸಿನಿಮಾಗಳನ್ನು ನೋಡುತ್ತಿದ್ದೆ’ ಎಂದು ಫಯಾಜ್ ಖಾನ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕನ್ನಡದ ಜತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ಚಲನಚಿತ್ರ ಸಾಹಸ ನಿರ್ದೇಶಕರ ಮತ್ತು ಸಾಹಸ ಕಲಾವಿದರ ಸಂಘದಲ್ಲಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದ ಫಯಾಜ್‌, ಎರಡು ವರ್ಷಗಳಿಂದ ತಾವೇ ಕೆಬಿಕೆ (ಕಲೆಗೆ ಬೆಲೆ ಕೊಡುವ ಸಾಹಸ ಕಲಾವಿದರ ಸಂಘ) ಸ್ಥಾಪಿಸಿಕೊಂಡು ಯುವಕ, ಯುವತಿಯರಿಗೆ ನಟನೆಯ ತರಬೇತಿ ನೀಡುತ್ತಿದ್ದಾರೆ. ಇವರು 1,560ಕ್ಕೂ ಹೆಚ್ಚಿನ ಸಿನಿಮಾಗಳಿಗೆ ಸಾಹಸ ನಿರ್ದೇಶನ ನೀಡಿದ್ದಾರೆ.

ವರನಟ ಡಾ.ರಾಜಕುಮಾರ್, ವಿಷ್ಣುವರ್ಧನ್, ಪ್ರಭಾಕರ್, ರಮೇಶ್, ಶಿವರಾಜ್‌ ಕುಮಾರ್, ಪುನೀತ್ ರಾಜಕುಮಾರ್, ರಜನಿಕಾಂತ್, ಸಲ್ಮಾನ್‌ಖಾನ್, ಅಕ್ಷಯ್ ಕುಮಾರ್, ಮುಮ್ಮಟ್ಟಿ, ಮೋಹನ್ ಲಾಲ್, ತೆಲುಗಿನ ಚಿರಂಜೀವಿ ಸೇರಿದಂತೆ ಮೊದಲಾದ ಪ್ರಸಿದ್ಧ ನಟರ ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಸಾಹಸ ನಿರ್ದೇಶನವನ್ನೂ ಮಾಡಿದ್ದಾರೆ.

‘ಕೊಡಗಿನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಉತ್ತಮ ಪರಿಸರವಿದೆ. ಇಲ್ಲಿಯ ಯುವಕರನ್ನು ಚಿತ್ರೀಕರಣ ಮತ್ತು ಕೆಲವು ಪಾತ್ರಗಳಿಗೆ ಬಳಸಿಕೊಂಡರೆ ಅವರಿಗೂ ಉದ್ಯೋಗ ಲಭಿಸಲಿದೆ. ಈ ಕಾರಣಕ್ಕೆ ಜಿಲ್ಲೆಯಲ್ಲಿ ಸಿನಿಮಾ ತರಬೇತಿ ಶಾಲೆ ತೆರೆಯುವ ಕನಸಿದೆ’ ಎಂದು ಫಯಾಜ್‌ ಅಭಿಪ್ರಾಯ ಹಂಚಿಕೊಂಡರು.

‘ಹಲವು ಸಿನಿಮಾಗಳಿಗೆ ಸ್ಟಂಟ್‌ ಮಾಸ್ಟರ್‌ ಆಗಿ ಕೆಲಸ ಮಾಡಿರುವ ಫಯಾಜ್ ಖಾನ್ ಕೊಡಗಿನವರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಆಗುತ್ತದೆ. ಫೈಟಿಂಗ್ ಮಾಡುವಾಗ ತಲೆಗೆ ಪೆಟ್ಟು ಬಿದ್ದು ತುಂಬಾ ತೊಂದರೆ ಅನುಭವಿಸಿದ್ದರು. ಅವರ ಪ್ರತಿಭೆ ಕೊಡಗಿನ ಯುವಕರಿಗೆ ಸಹಕಾರಿಯಾಗಲಿ’ ಎಂದು ರಂಗಭೂಮಿ ಕಲಾವಿದ ನಾರಾಯಣಸ್ವಾಮಿ ನಾಯ್ಡು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.