
ಕುಶಾಲನಗರ: ಪಟ್ಟಣದ ಟೋಲ್ ಗೇಟ್ ಬಳಿಯ ಕಾವೇರಿ ದೇವಸ್ಥಾನದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದಿಂದ ಬನದ ಹುಣ್ಣಿಮೆ ಅಂಗವಾಗಿ ಶನಿವಾರ ರಾತ್ರಿ ವಿಶೇಷ ಪೂಜೆ ಜರುಗಿತು.
ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಕಾವೇರಿ ಪ್ರತಿಮೆಗೆ ವಿವಿಧ ಪುಷ್ಪ ಹಾಗೂ ವಸ್ತ್ರಗಳಿಂದ ಅಲಂಕಾರ, ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿ, ಮಹಾ ಆರತಿ ಬೆಳಗಲಾಯಿತು. ಬೆಂಗಳೂರಿನ ಉದ್ಯಮಿ ಸುನಂದ ಕೌಶಿಕ್ ಹಾಗೂ ರುದ್ರೇಶ್ ಕುಟುಂಬಸ್ಥರು ಸೇವಾರ್ಥ ಪೂಜೆ ನೆರವೇರಿಸಿದರು. ಕುಟುಂಬಸ್ಥರು ಕಾವೇರಿ ಮಾತೆಗೆ ವಸ್ತ್ರ ಸಮರ್ಪಿಸಿದರು.
ಪಿರಿಯಾಪಟ್ಟಣ ಕರುನಾಡು ಜನಜಾಗೃತಿ ವಿಚಾರ ವೇದಿಕೆ ಅಧ್ಯಕ್ಷ ಬಿ.ಟಿ.ಸಚ್ಚಿದಾನಂದ ಮಾತನಾಡಿ, ನಾಡಿನ ಜೀವನದಿ ಕೊಡಗಿನ ಕಾವೇರಿಗೆ ಕಲುಷಿತ ನೀರು ಹರಿಸುವುದು, ಕಸ , ತ್ಯಜ್ಯ ವಸ್ತುಗಳನ್ನು ಹಾಕುವುದನ್ನು ಪ್ರತಿಯೊಬ್ಬರೂ ನಿಲ್ಲಿಸಬೇಕು. ನದಿಯ ಪಾವಿತ್ರ್ಯ ಕಾಪಾಡಲು ಎಲ್ಲರೂ ಕೈಜೋಡಿಸಬೇಕು. ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಬಾರವಿ ಸಂಘದ ಸಂಚಾಲಕ ರವೀಂದ್ರ ಪ್ರಸಾದ್ ಮಾತನಾಡಿ, ಜೀವನದಿ ಕಾವೇರಿ ಮತ್ತು ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಸ್ವಚ್ಛ ಪರಿಸರದ ಉಳಿವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್, ಸಂಘಟನಾ ಸಂಚಾಲಕ ವಿಜಯೇಂದ್ರ ಪ್ರಸಾದ್ ಮುಖಂಡರಾದ ಕೆಇಬಿ ಲೋಕೇಶ್ , ಮನುಗೌಡ, ಪವನ್ ಕೂಡಿಗೆ, ಚಂದ್ರಣ್ಣ,ಶಂಕರ್, ತಿಲಕ್‌ಪುಜಾರಿ, ರಮೇಶ್ ಆವರ್ತಿ, ಮಣಿಯಣ್ಣ, ರುದ್ರೇಶ್ ಪಾಲ್ಗೊಂಡಿದ್ದರು.