ಮಡಿಕೇರಿ: ಸುನ್ನಿ ಯುವಜನ ಸಂಘದ ವತಿಯಿಂದ ಆ. 15ರಂದು ಸಂಜೆ 4 ಗಂಟೆಗೆ ಕೊಡ್ಲಿಪೇಟೆಯ ನೂರ್‌ಮಹಲ್ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಜಾತ್ಯತೀತತೆ ಭಾರತದ ಧರ್ಮ ಎಂಬ ಶೀರ್ಷಿಕೆಯಡಿ ‘ರಾಷ್ಟ್ರ ರಕ್ಷಾ ಸಂಗಮ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ತಿಳಿಸಿದರು.
ಕಿರಿ ಕೊಡ್ಲಿಮಠದ ಮಠಾಧೀಶರಾದ ಸದಾಶಿವ ಸ್ವಾಮೀಜಿ, ಕೊಡ್ಲಿಪೇಟೆ ಚರ್ಚ್‌ನಫ್ರೆಡ್ಲಿ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕರಾದ ಡಾ.ಮಂತರ್‌ಗೌಡ, ಎ.ಎಸ್.ಪೊನ್ನಣ್ಣ ಭಾಗವಹಿಸಲಿದ್ದಾರೆ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖಂಡರಾದ ಕೆ.ಎ.ಯಾಕೂಬ್ ಮಾತನಾಡಿ, ‘ಹಲವಾರು ವರ್ಷಗಳಿಂದ ಕೊಡಗು ಜಿಲ್ಲೆಯ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಎಸ್‌ವೈಎಸ್ ನಡೆಸುತ್ತಾ ಬಂದಿದೆ. ನಮ್ಮ ಧರ್ಮ, ಜಾತಿ, ಪಕ್ಷ, ಪಂಗಡ, ಆಹಾರ ಪದ್ಧತಿ, ವಸ್ತ್ರಧಾರಣೆ, ಸಂಸ್ಕೃತಿ ಇವೆಲ್ಲವೂ ಬೇರೆ, ಬೇರೆಯಾಗಿರಬಹುದು. ಆದರೆ, ನಾವೆಲ್ಲರೂ ಭಾರತೀಯರು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ ಭಾರತ ನಮ್ಮೆಲ್ಲರ ಗುರಿ ಎಂದು ಹೇಳಿದರು.
ನೂರಾರು ವರ್ಷಗಳ ಕಾಲ ಭಾರತವನ್ನು ಆಳಿ ಭಾರತೀಯರನ್ನು ಗುಲಾಮಗಿರಿಯಲ್ಲಿಟ್ಟು ಭಾರತದ ಸಂಪತ್ತನ್ನು ಲೂಟಿ ಮಾಡಿ ತಮ್ಮ ರಾಷ್ಟ್ರಕ್ಕೆ ಕೊಂಡೊಯ್ಯುತ್ತಿದ್ದ ಆಂಗ್ಲರನ್ನು ಬಗ್ಗುಬಡಿದು ಅವರ ಕಪಿಮುಷ್ಠಿಯಿಂದ ಭಾರತವನ್ನು ಸ್ವತಂತ್ರಗೊಳಿಸಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದು, ನಮ್ಮ ಪೂರ್ವಿಕರ ಒಗ್ಗಟ್ಟಿನಿಂದ, ಅಹಿಂಸಾ ಹೋರಾಟದಿಂದ ಎಂದು ಹೇಳಿದ ಅವರು, ‘ಹಿಂಸೆ, ದ್ವೇಷ, ಕಲಹದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ’ ಎಂದರು.
ಮುಖಂಡರಾದ ಉಸ್ಮಾನ್ ಫೈಜಿ, ರಫೀಕ್ ಹಾಜಿ, ಮೊಹಮ್ಮದ್ ಶರೀಫ್, ಇಬ್ರಾಹಿಂ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.