ADVERTISEMENT

ಸುಂಟಿಕೊಪ್ಪ; ಕ್ರಿಸ್ಮಸ್ ಸಂಭ್ರಮ

ಚರ್ಚ್‌ಗಳಿಗೆ ವಿಶೇಷ ದೀಪಾಲಂಕಾರ, ಕ್ರೈಸ್ತ ಧರ್ಮೀಯರಲ್ಲಿ ಹಬ್ಬದ ಸಡಗರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:27 IST
Last Updated 24 ಡಿಸೆಂಬರ್ 2025, 6:27 IST
ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ
ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ   

ಸುಂಟಿಕೊಪ್ಪ: ಕ್ರಿಸ್ಮಸ್ ಹಬ್ಬದ ಸಡಗರವು ಪಟ್ಟಣವನ್ನು ಆವರಿಸುತ್ತಿದೆ. ಸುತ್ತಮುತ್ತಲಿನ ಚರ್ಚ್‌ಗಳು ವಿದ್ಯುತ್‌ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದು, ಕ್ರೈಸ್ತ ಧರ್ಮೀಯರೂ ಮಾತ್ರವಲ್ಲದೇ ಸಾರ್ವಜನಿಕರ ಮನಸೆಳೆಯುತ್ತಿದೆ.

ಪಟ್ಟಣ ಸೇರಿದಂತೆ ಏಳನೇ ಹೊಸಕೋಟೆ, ಹಟ್ಟಿಹೊಳೆ, ಮಾದಾಪುರ, ಕುಂಬೂರು ಗ್ರಾಮಗಳಲ್ಲಿ ಕ್ರೈಸ್ತರು ಹಬ್ಬದ ಆಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಹಬ್ಬದ ಆಗಮನಕ್ಕೆ ಕಾತರರಾಗಿದ್ದಾರೆ.

ಇಲ್ಲಿನ ಸಂತ ಅಂತೋಣಿ ದೇವಾಲಯ, ಸಿಎಸ್ಐ ಕ್ರೈಸ್ತ ದೇವಾಲಯ, ಹಟ್ಟಿಹೊಳೆ ಓಲಿ ರೋಸಾರಿ ದೇವಾಲಯ, ಏಳನೇ ಹೊಸಕೋಟೆ ಸಂತ ಸಭಾಸ್ಟೀನ್ ದೇವಾಲಯ, ಮಾದಾಪುರ ಚರ್ಚ್‌ಗಳು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತವಾಗಿವೆ. ಚರ್ಚ್‌ಗಳಿಗೆ ತೆರಳುವ ದಾರಿಯಲ್ಲಿ ನಕ್ಷತ್ರ ದೀಪಗಳು ಭಕ್ತರನ್ನು ಸ್ವಾಗತಿಸಲು ಸಿದ್ಧವಾಗಿವೆ.

ADVERTISEMENT

ಹಬ್ಬಕ್ಕೆ ಸ್ವಾಗತ ಬ್ಯಾನರ್‌ಗಳು, ಬಣ್ಣಬಣ್ಣದ ಬಾವುಟಗಳು ರಾರಾಜಿಸಲು ಸಿದ್ಧವಾಗಿವೆ. ಚರ್ಚ್ ಆವರಣದಲ್ಲಿ ಬಾಲ ಯೇಸುವನ್ನು ಸ್ವಾಗತಿಸುವ ಗೋದಲಿಗಳನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. ಬಾಲ ಯೇಸುವಿನ ಹಾಗೂ ಮಾತೆ ಮೇರಿಯ ಬೊಂಬೆಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಕ್ರಿಸ್ಮಸ್ ಮರಕ್ಕೆ ಅಲಂಕಾರ ಮಾಡಲಾಗಿದೆ. ಕ್ರೈಸ್ತರು ತಮ್ಮ ಮನೆಗಳ ಮುಂದೆ ನಕ್ಷತ್ರ ದೀಪ, ಗೋದಲಿ ಸ್ಥಾಪಿಸಿ ಹಬ್ಬವನ್ನು ಸ್ವಾಗತಿಸುತ್ತಿದ್ದಾರೆ.

ಹಬ್ಬದ ಪ್ರಯುಕ್ತ ಬುಧವಾರ ಮತ್ತು ಗುರುವಾರ ಚರ್ಚ್‌ಗಳಲ್ಲಿ ನಡೆಯುವ ಗಾಯನ ಕಾರ್ಯಕ್ರಮಕ್ಕೆ ಚರ್ಚ್ ಸದಸ್ಯರು ಕಳೆದ ಎರಡು ವಾರಗಳಿಂದ ತಯಾರಿ ನಡೆಸಿದ್ದಾರೆ. ಕಳೆದ 15 ದಿನಗಳಿಂದ ಕ್ರೈಸ್ತರ ಮನೆಗಳಿಗೆ ಧರ್ಮಗುರುಗಳ ನೇತೃತ್ವದಲ್ಲಿ ಯೇಸು ಕ್ರಿಸ್ತರ ಜನನದ ಶುಭವಾರ್ತೆ ಸಾರುವ ಕ್ಯಾರೊಲ್‌ ಗಾಯನ ತಂಡ, ಸಾಂತಕ್ಲಾಸ್ ವೇಷಧಾರಿ, ಕನ್ಯಾಸ್ತ್ರೀಯರು ತೆರಳಿ ಶುಭಾಶಯ ಕೋರಿ ಹಬ್ಬದ ವೈಶಿಷ್ಟ್ಯವನ್ನು ತಿಳಿಸಿ ಸಂಭ್ರಮ ಹರಡಿದ್ದಾರೆ.

ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿದೆ.

ಇಂದು ರಾತ್ರಿಯಿಂದಲೇ ವಿಶೇಷ ಪೂಜೆ

ಬುಧವಾರ ರಾತ್ರಿ ಗೋದಲಿಯಲ್ಲಿ ಬಾಲಯೇಸುವನ್ನು ಇರಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಧಾರ್ಮಿಕ ಗುರುಗಳೊಂದಿಗೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ನಂತರ ನೆರೆದಿದ್ದ ಭಕ್ತರಿಗೆ ಕೇಕ್‌ಗಳನ್ನು ಹಂಚಿ ಸಂಭ್ರಮಿಸಲಾಗುವುದು. ಗುರುವಾರ ಕ್ರಿಸ್ಮಸ್ ಹಬ್ಬದ ಅಂಗವಾಗಿ ಬೆಳಿಗ್ಗೆ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ರೆ.ಫಾ.ವಿಜಯಕುಮಾರ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಪರಮ ಪ್ರಸಾದ ಬಲಿಪೂಜೆ ನಡೆಯಲಿದೆ. ನಂತರ ದೇವಾಲಯದ ವತಿಯಿಂದ ಕೇಕ್‌ ಸಿಹಿ ಹಂಚಿ ಸಂತೋಷ ಹಂಚಿಕೊಳ್ಳಲು ಸಿದ್ಧತೆ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.