ಮಡಿಕೇರಿ: ನಸುಕಿನ ಮಬ್ಬುಗತ್ತಲೆಯನ್ನು ಸೀಳಿಕೊಂಡು ರವಿಕಿರಣಗಳು ಮಂಜಿನಿಂದ ತೋಯ್ದಿದ್ದ ಹಸಿರು ಹುಲ್ಲಿನ ಮೇಲೆ ಬೀಳುವುದಕ್ಕೂ ಮುನ್ನ ರಾಜಾಸೀಟ್ ಉದ್ಯಾನದಲ್ಲಿ ನೂರಾರು ಮಂದಿ ಸೇರಿದ್ದರು. ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಸಂಗೀತ ಕಾರಂಜಿಯ ಸುತ್ತಲೂ ಸೇರಿದ್ದ ನೂರಾರು ಮಂದಿ ಯೋಗಕ್ಕೆ ಅಣಿಯಾದರು.
ಇಲ್ಲಿನ ರಾಜಾಸೀಟ್ ಉದ್ಯಾನದಲ್ಲಿ ಮಂಗಳವಾರ ರಥಸಪ‍್ತಮಿ ಪ್ರಯುಕ್ತ ಯೋಗ ಭಾರತಿ ಮತ್ತು ಯೋಗ ಸಂಧ್ಯಾ, ವಿದ್ಯಾಭವನ, ಪ್ರಣವ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಮಾರ್ನಿಂಗ್ ಸ್ಟಾರ್ಸ್ ಸಂಸ್ಥೆಗಳು ಏರ್ಪಡಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು.
6ನೇ ತರಗತಿ ಕಲಿಯುತ್ತಿರುವ ಬಾಲಕರಿಂದ ಹಿಡಿದು 75 ವರ್ಷದ ಹಿರಿಯ ನಾಗರಿಕರವರೆಗೆ ವಿವಿಧ ವಯೋಮಾನ ಪುರುಷ, ಮಹಿಳೆಯರು ಈ ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ಸಂಸ್ಥೆಗಳು ರಥಸಪ್ತಮಿ ವೇಳೆ ನಡೆಸುತ್ತಿರುವ ಸಾಮೂಹಿಕ ಸೂರ್ಯ ನಮಸ್ಕಾರದ 17ನೇ ವರ್ಷದ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಉದ್ಘಾಟಿಸಿದರು.
ನಂತರ, ಒಮ್ಮೆಯೂ ದಣಿವಾರಿಸಿಕೊಳ್ಳದೇ ಏಕಚಿತ್ತದಿ ಸುಮಾರು 150 ಮಂದಿ ಒಂದೆಡೆ ನಿಂತು ಸೂರ್ಯ ನಮಸ್ಕಾರದಲ್ಲಿ ತೊಡಗಿದರು.
ದೂರದಲ್ಲಿ ಕೇಳಿ ಬರುತ್ತಿದ್ದ ಭಕ್ತಿ ಸಂಗೀತದ ಅಲೆಯ ನಡುವೆ, ಚುಮುಚುಮು ಚಳಿಯ ಮಧ್ಯೆ, ಶಾಂತಚಿತ್ತವಾಗಿ ನಡೆದ ಸೂರ್ಯ ನಮಸ್ಕಾರವನ್ನು ವಾಯುವಿಹಾರಕ್ಕೆ ಬಂದಿದ್ದವರು, ಪ್ರವಾಸಿಗರು ವೀಕ್ಷಿಸಿ ಚಕಿತಪಟ್ಟರು. ಕೆಲವರು ಫೋಟೊ ಕ್ಲಿಕ್ಕಿಸಿದರು.
ಯೋಗಗುರುಗಳಾದ ಕೆ.ಕೆ. ಮಹೇಶ್‌ಕುಮಾರ್, ಎಂ.ಯು.ಸುಧಾಕರ್, ಶಿಲ್ಪಾ ರೈ, ಬಿ.ಎಂ. ಸುಧೀರ್, ಸರಿತಾ ವಿನೋದ್, ಶ್ರೀಪತಿ ಭಟ್, ಯೋಗೇಶ್, ಸವಿತಾ ಅಶೋಕ್ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು. ಆಯುಷ್ ಇಲಾಖೆಯ ವೈದ್ಯರೂ ಆಲ್ಲಿದ್ದರು.
‘ಪ್ರತಿ ತಿಂಗಳು 2ನೇ ಶನಿವಾರ ಬೆಳಿಗ್ಗೆ 5.30ಕ್ಕೆ ಸಾಮೂಹಿಕ ಸೂರ್ಯನಮಸ್ಕಾರ ನಡೆಯಲಿದೆ’ ಎಂದು ಯೋಗಗುರು ಮಹೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
6ನೇ ತರಗತಿ ಬಾಲಕರೂ ಅಲ್ಲಿದ್ದರು 75 ವರ್ಷ ವಯಸ್ಸಿನ ಹಿರಿಯ ನಾಗರಿಕರೂ ಯೋಗ ಮಾಡಿದರು ಎಲ್ಲರೂ ನಕ್ಕು ಸಂಭ್ರಮಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.