ADVERTISEMENT

‘ಸ್ವಚ್ಛ ಕೊಡಗು- ಸುಂದರ ಕೊಡಗು’ ಅಭಿಯಾನ | 200 ಟನ್ ತ್ಯಾಜ್ಯ ಸಂಗ್ರಹ: ದಿನೇಶ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 4:35 IST
Last Updated 17 ಅಕ್ಟೋಬರ್ 2025, 4:35 IST
ಅಭಿಯಾನದಲ್ಲಿ ಸಂಗ್ರಹಗೊಂಡ ರಾಶಿಗಟ್ಟಲೆ ತ್ಯಾಜ್ಯ
ಅಭಿಯಾನದಲ್ಲಿ ಸಂಗ್ರಹಗೊಂಡ ರಾಶಿಗಟ್ಟಲೆ ತ್ಯಾಜ್ಯ   

ಮಡಿಕೇರಿ: ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಬುಧವಾರ ಕೈಗೊಳ್ಳಲಾದ ಸ್ವಚ್ಛ ಕೊಡಗು - ಸುಂದರ ಕೊಡಗು ಸ್ವಚ್ಛತಾ ಅಭಿಯಾನದ ವೇಳೆ ಜಿಲ್ಲೆಯಾದ್ಯಂತ 200 ಟನ್ ತ್ಯಾಜ್ಯ ಸಂಗ್ರಹವಾಗಿದ್ದು ಮೈಸೂರಿನ ತ್ಯಾಜ್ಯ  ವಿಲೇವಾರಿ ಸಂಗ್ರಹಾಗಾರ ಸೇರಿದಂತೆ ಕೊಡಗು ಜಿಲ್ಲೆಯ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಇವುಗಳನ್ನು ರವಾನಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ತಿಳಿಸಿದ್ದಾರೆ.

ಈ ಅಭಿಯಾನದಲ್ಲಿ ಜಿಲ್ಲೆಯ 30 ಸಾವಿರದಷ್ಟು ಸ್ವಚ್ಛತಾ ಕಾರ್ಯಕರ್ತರಿಗೆ 33,800 ಕೈಗವಸು ಮತ್ತು 9,200 ತ್ಯಾಜ್ಯ ಸಂಗ್ರಹಣಾ ಬ್ಯಾಗ್‌ಗಳನ್ನು ವಿತರಿಸಲಾಗಿದೆ.  ಜಿಲ್ಲೆಯ 178 ಸ್ಥಳಗಳಲ್ಲಿ 330ಕ್ಕೂ ಅಧಿಕ ಸಂಘಸಂಸ್ಥಗಳಿಗೆ ಸೇರಿದ ಅಂದಾಜು 30 ಸಾವಿರದಷ್ಟು ಜನರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಪ್ರಯತ್ನದಿಂದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು 17 ಸಂಗ್ರಹಣ ಕೇಂದ್ರಗಳಿಂದ ಪಡೆದುಕೊಂಡ ತ್ಯಾಜ್ಯವನ್ನು ಜಿಲ್ಲೆಯ 145 ತ್ಯಾಜ್ಯ ಸಂಗ್ರಹಣಾ ಮಾರ್ಗಗಳಿಂದ ಟ್ರಕ್ ಮೂಲಕ ಪಡೆದು ಕ್ಲೀನ್ ಕೂರ್ಗ್ ಸಂಸ್ಥೆಯ ಸಹಕಾರದೊಂದಿಗೆ ಮೈಸೂರಿಗೆ ರವಾನಿಸಲಾಗಿದೆ. 

ADVERTISEMENT

ಇದು ಕೇವಲ 1 ದಿನಕ್ಕೆ ಸೀಮಿತವಾದ ಅಭಿಯಾನ ಆಗಬಾರದು. ಸ್ವಚ್ಛ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ವಿವಿಧ ಕಾರ್ಯಯೋಜನೆ ಹಮ್ಮಿಕೊಳ್ಳಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸ್ವಚ್ಛ ಕೊಡಗು - ಸುಂದರ ಕೊಡಗು’ ಎಂಬ ಹೆಸರನ್ನು ಜಾನಪದ ಪರಿಷತ್ತಿನ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಟಿ.ಅನಿಲ್ ನೀಡಿದ್ದರು. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಭಾಷೆಗಳಲ್ಲಿ ನಟನಟಿಯರು, ಪರಿಸರಪ್ರೇಮಿಗಳು ಅಭಿಯಾನ ಕುರಿತು 58 ವಿಡಿಯೊಗಳನ್ನು ಹಾಕಿದ್ದರು. 3 ದಿನಗಳಲ್ಲಿಯೇ ರೂಪುಗೊಂಡ ಈ ಅಭಿಯಾನದ ಸಫಲತೆಗೆ ಇದು ಸಹ ಕಾರಣಗಳಲ್ಲಿ ಒಂದಾಯಿತು ಎಂದು ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ನಾಸಿರ್ ಅಹಮ್ಮದ್ ಶ್ಲಾಘಿಸಿದ್ದಾರೆ.

ಅಭಿಯಾನ ಯಶಸ್ವಿಯಾಗಿದ್ದಕ್ಕೆ ಸಲ್ಲಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ದಿನೇಶ್‌ ಕಾರ್ಯಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.