ಮಡಿಕೇರಿ: ಪೊನ್ನಂಪೇಟೆಯಲ್ಲಿರುವ ರಾಮಕೃಷ್ಣ ಶಾರದಾಶ್ರಮಕ್ಕೆ 3 ದಿನಗಳ ಕಾಲ ಭೇಟಿ ನೀಡಿರುವ ರಾಮಕೃಷ್ಣ ಮಿಷನ್ನಿನ ಹಿರಿಯ ಉಪಾಧ್ಯಕ್ಷ ಸ್ವಾಮಿ ಸುಹಿತಾನಂದ ಮಹಾರಾಜ್ ಅವರು ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಸೇವಾಶ್ರಮ ಆಸ್ಪತ್ರೆಯ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅವರು ಹಳೆಯ ಕಟ್ಟಡ ದುರಸ್ತಿ ಕಾರ್ಯಕ್ಕೂ ಚಾಲನೆ ನೀಡಿದರು. ಹೊಸ ಡಿಸೇಲ್ ಚಾಲಿತ ವಿದ್ಯುತ್ ಜನರೇಟರ್, ಶುದ್ಧ ಕುಡಿಯುವ ನೀರಿನ ಘಟಕ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರವನ್ನು ಸೇವೆ ಸಮರ್ಪಿಸಿದರು.
ಈ ವೇಳೆ ಮಾತನಾಡಿದ ಅವರು, ‘ಪೊನ್ನಂಪೇಟೆಯ ಆಶ್ರಮದ ಶತಮಾನೋತ್ಸವದ ಸುಸಂದರ್ಭದಲ್ಲಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸಹಾಯ ಹಸ್ತ ಚಾಚಬೇಕು’ ಎಂದು ಕರೆ ನೀಡಿದರು.
ಮಾದಿಹಳ್ಳಿ ಸ್ವಾಮಿ ತದ್ಯುಕ್ತನಂದ ಮಹಾರಾಜ್ ಅವರ ನೇತೃತ್ವದಲ್ಲಿ ಭಜನೆ ನಡೆಯಿತು. ನಂತರ ಪ್ರಸಾದ ವಿನಿಯೋಗ ನೆರವೇರಿತು.
ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಪರಹಿತಾನಂದ ಮಹಾರಾಜ್, ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಮಹಾರಾಜ್, ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಮಹಾರಾಜ್, ವಕ್ತಾರ ಸ್ವಾಮಿ ಯುಕ್ತೇಶನಂದ ಮಹಾರಾಜ್, ಹಲಸೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಬೋಧಸ್ವರೂಪನಂದ ಮಹಾರಾಜ್, ಸ್ವಾಮಿ ಯೋಗೀಶನಂದ ಮಹಾರಾಜ್, ಕೇರಳದ ಕೊಯಿಲಾಂಡಿ ಆಶ್ರಮದ ಅಧ್ಯಕ್ಷ ಸುಂದರನಂದ ಮಹಾರಾಜ್, ಬೆಂಗಳೂರಿನ ಬಸವನಗುಡಿ ರಾಮಕೃಷ್ಣಾಶ್ರಮದ ಆತ್ಮವಿದಾನಂದ ಮಹಾರಾಜ್ ಭಾಗವಹಿಸಿದ್ದರು.
21 ಸ್ವಾಮೀಜಿಗಳು ಹಾಗೂ 490 ಭಕ್ತರು, ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
490ಕ್ಕೂ ಅಧಿಕ ಭಕ್ತರ ಭಾಗಿ ಹಲವು ಸ್ವಾಮೀಜಿಗಳಿಂದ ಉಪನ್ಯಾಸ ನೆರವೇರಿದ ಭಜನಾ ಕಾರ್ಯಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.