ADVERTISEMENT

ಭಾಗಮಂಡಲ| ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ: ನಡೆದಿದೆ ಭರದ ಸಿದ್ಧತೆ

ಸಿ.ಎಸ್.ಸುರೇಶ್
Published 15 ಅಕ್ಟೋಬರ್ 2025, 4:13 IST
Last Updated 15 ಅಕ್ಟೋಬರ್ 2025, 4:13 IST
<div class="paragraphs"><p>ಭಗಂಡೇಶ್ವರ ದೇವಾಲಯದಲ್ಲಿ ಇರುವ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಕಾವೇರಿ ಜಾತ್ರೆ ಕಾರ್ಯಕ್ರಮಕ್ಕೆ ಪ್ರತಿವರ್ಷ ಚಾಲನೆ ನೀಡಲಾಗುತ್ತದೆ (ಸಂಗ್ರಹ ಚಿತ್ರ)</p></div>

ಭಗಂಡೇಶ್ವರ ದೇವಾಲಯದಲ್ಲಿ ಇರುವ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಕಾವೇರಿ ಜಾತ್ರೆ ಕಾರ್ಯಕ್ರಮಕ್ಕೆ ಪ್ರತಿವರ್ಷ ಚಾಲನೆ ನೀಡಲಾಗುತ್ತದೆ (ಸಂಗ್ರಹ ಚಿತ್ರ)

   

ನಾಪೋಕ್ಲು: ತಲಕಾವೇರಿ ಜಾತ್ರೆಗೆ ಸಂಬಂಧಿಸಿದಂತೆ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ಭಾಗಮಂಡಲ ಕ್ಷೇತ್ರದಲ್ಲಿ ಜರುಗುತ್ತವೆ. ಪ್ರತಿವರ್ಷ ಒಂದು ತಿಂಗಳ ಕಾಲ ನಿಗದಿತ ದಿನಗಳಂದು ಸಾಂಪ್ರದಾಯಿಕ ಆಚರಣೆಗಳು ಜರುಗುತ್ತವೆ. ಭಕ್ತರು ಪಾಲ್ಗೊಂಡು ಸಂಭ್ರಮಿಸುತ್ತಾರೆ. ಈಗಾಗಲೇ ಧಾರ್ಮಿಕ ಕೈಂಕರ್ಯಗಳು ಇಲ್ಲಿ ಗರಿಗೆದರಿವೆ.

ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಆರಂಭದಲ್ಲಿ ಆಜ್ಞಾಮುಹೂರ್ತ ನೆರವೇರಿಸಲಾಗುತ್ತದೆ. ಕಾವೇರಿ ತೀಥೋದ್ಭವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ತುಲಾಸಂಕ್ರಮಣದ ಪ್ರಯುಕ್ತ ಕಟ್ಟು ವಿಧಿಸುವ ಕಾರ್ಯ ಇದು. ಗ್ರಾಮದ ದೇವಾಲಯಗಳ ತಕ್ಕ ಮುಖ್ಯಸ್ಥರು, ಅರ್ಚಕರು ಸೇರಿ ಸ್ಥಳೀಯರಾದ ರವಿ ಹೆಬ್ಬಾರ್ ಅವರ ಮನೆಗೆ ತೆರಳಿ ಬಾಳೆಗೊನೆ ಕಡಿದು ನಾದ ಸ್ವರದೊಂದಿಗೆ ಮೆರವಣಿಗೆ ಮೂಲಕ ಭಗಂಡೇಶ್ವರ ದೇವಾಲಯದ ಸನ್ನಿಧಿಗೆ ಬಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ತಪ್ಪಡ್ಕ (ಕಟ್ಟುಬೀಳುವುದು) ವಿಧಿಸುವರು. ಆ ದಿನದಿಂದ ಜಾತ್ರೆ ಮುಗಿಯುವವರೆಗೆ ನಾಡಿನಲ್ಲಿ ಮದುಮಾಂಸ ಸೇವನೆ ಮರಕಡಿಯುವುದು, ಬಲಿ, ಹಿಂಸಾಕೃತ್ಯಗಳನ್ನು ನಡೆಸುವುದು ಮುಂತಾದ ಕಾರ್ಯಗಳಿಗೆ ನಿರ್ಬಂಧ ಹೇರಲಾಗುತ್ತದೆ.

ADVERTISEMENT

‘ಕಾವೇರಿ ತೀರ್ಥೋದ್ಭವಕ್ಕೆ ಸಂಬಂಧಿಸಿದಂತೆ ಭಗಂಡೇಶ್ವರ ದೇವಾಲಯದಲ್ಲಿ ನೆರವೇರಿಸುವ ಆಜ್ಞಾ ಮಹೂರ್ತ ದೇಶ ಕಟ್ಟಾಗಿದ್ದು ಎಲ್ಲರೂ ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಆಚರಿಸಬೇಕು. ಈ ಮುಹೂರ್ತ ಭಾಗಮಂಡಲ ನಾಡಿಗೆ ಮಾತ್ರ ಸೀಮಿತವಾದುದಲ್ಲ. ಒಂದು ತಿಂಗಳ ಕಾಲ ತಲಕಾವೇರಿ ಜಾತ್ರೆ ನಡೆಯಲಿದ್ದು, ಜಾತ್ರೆಯ ಅವಧಿಯಲ್ಲಿ ಕೊಡಗಿನಲ್ಲಿ ಪ್ರತಿಯೊಬ್ಬರು ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು’ ಎನ್ನುತ್ತಾರೆ ಅರ್ಚಕ ಹರೀಶ್ ಭಟ್.

ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮ ಮತ್ತೊಂದು ಧಾರ್ಮಿಕ ಕಾರ್ಯಕ್ರಮ. ಭಾಗಮಂಡಲದ ಬಳ್ಳಡ್ಕ ಕುಟುಂಬಸ್ಥರ ಐನ್ ಮನೆಯಲ್ಲಿ ಭಕ್ತರು ಒಟ್ಟು ಸೇರಿ ಮನೆಯಿಂದ ಅಕ್ಕಿಯನ್ನು ತಂದು ಭಗಂಡೇಶ್ವರ ದೇವಾಲಯದಲ್ಲಿ ಇರುವ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಕಾವೇರಿ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ತಕ್ಕ ಮುಖ್ಯಸ್ಥರಾದ ಬಳ್ಳಡ್ಕ ಅಪ್ಪಾಜಿ ಅವರ ಮನೆಯಿಂದ ಅಕ್ಕಿಯನ್ನು ವಾದ್ಯ ಸಹಿತವಾಗಿ ತಂದು ಭಾಗಮಂಡಲ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಪತ್ತಾಯಕ್ಕೆ ಅಕ್ಕಿಯನ್ನು ಹಾಕಿ ಪೂಜೆ ನೆರವೇರಿಸುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ.

ಕಾವೇರಿ ಜಾತ್ರೆಯ ಹಿನ್ನೆಲೆಯಲ್ಲಿ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಬಾಳೆಗೊನೆಯೊಂದಿಗೆ ನಾದಸ್ವರ ಮೆರವಣಿಗೆ ನಡೆಯುವುದು..

ಭಗಂಡೇಶ್ವರ ದೇವಾಲಯದಲ್ಲಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಎರಡು ದಿನ ಮೊದಲು ಅಕ್ಷಯ ಪಾತ್ರೆ ಇರಿಸಿ ನಂದಾದೀಪವನ್ನು ಉರಿಸಲಾಗುತ್ತದೆ. ಅದೇ ದಿನ ಸಂಜೆ ಕಾಣಿಕೆ ಡಬ್ಬಿ ಇಡುವ ಕಾರ್ಯಕ್ರಮ ನೆರವೇರಲಿದೆ.

ಅಕ್ಷಯ ಪಾತ್ರೆ ಭಗಂಡೇಶ್ವರ ದೇವಾಲಯದ ಮತ್ತೊಂದು ವೈಶಿಷ್ಟ್ಯ. ಮರದ ವಿಶಾಲವಾದ ತೊಟ್ಟಿಯಾಗಿರುವ ಅಕ್ಷಯ ಪಾತ್ರೆಗೆ ತುಲಾ ಸಂಕ್ರಮಣದ ದಿನ ಮತ್ತು ಅದರ ಹಿಂದಿನ ದಿನ ಕೊಡಗಿನ ಭಕ್ತಜನ ಪಡಿಯಕ್ಕಿಯನ್ನು ತಂದು ಹಾಕುತ್ತಾರೆ. ಅಲ್ಲದೆ, ದೇವಾಲಯಕ್ಕೆ ಭೇಟಿ ನೀಡುವ ಇತರ ಭಕ್ತರು ಅಕ್ಷಯ ಪಾತ್ರೆಯಿಂದ ಪಡಿಯಕ್ಕಿಯನ್ನು ಭಕ್ತಿಭಾವದಿಂದ ತಮ್ಮ ಮನೆಗಳಿಗೆ ಕೊಂಡೊಯ್ದು ಸಂತೃಪ್ತಿಯ ಭಾವನೆ ಹೊಂದುತ್ತಾರೆ.

ಇನ್ನು ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ತೊಡಿಸಲು ಚಿನ್ನಾಭರಣಗಳನ್ನು ಭಾಗಮಂಡಲ ದೇವಾಲಯದಿಂದ ಕೊಂಡೊ ಯ್ಯಲಾಗುತ್ತದೆ. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಕಾರ್ಯನಿರ್ವಹಣಾಧಿಕಾರಿಯವರಿಂದ ತಕ್ಕರಾದ ಕೋಡಿ ಮೋಟಯ್ಯಕಾವೇರಿ ಮಾತೆಗೆ ತೊಡಿಸುವ ಚಿನ್ನಾಭರಣಗಳನ್ನು ಪಡೆದುಕೊಂಡು ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಲಕಾವೇರಿಗೆ ಕೊಂಡೊಯ್ಯುವರು..ಅಲ್ಲಿ ಕಾವೇರಿ ಮಾತೆಗೆ ಚಿನ್ನಾಭರಣ ತೊಡಿಸಿ ಬಳಿಕ ಒಂದು ತಿಂಗಳ ಕಾಲ ಚಿನ್ನಾಭರಣಗಳಿಂದ ಕಾವೇರಿ ಮಾತೆ ಕಂಗೊಳಿಸುವಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.