ನಾಪೋಕ್ಲು: ಭಾಗಮಂಡಲ ಗ್ರಾಮ ಪಂಚಾಯಿತಿಗೆ ಸ್ಥಳೀಯ ಸಂಪನ್ಮೂಲ ಕ್ರೋಢೀಕರಣ ಕುಸಿತವಾಗಿರುವುದರಿಂದ ಭಗಂಡೇಶ್ವರ ದೇವಸ್ಥಾನದ ಆವರಣದಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲ ಎಂದು ಭಾಗಮಂಡಲ ಗ್ರಾಮ ಪಂಚಾಯಿತಿಯು ಶ್ರೀ ಭಗಂಡೇಶ್ವರ ತಲಕಾವೇರಿ ಮತ್ತು ಸಮೂಹವು ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದೆ.
ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ಭಕ್ತರು ಮತ್ತು ಪ್ರವಾಸಿಗರಿಂದ ಸಂಗ್ರಹವಾಗುವ ಕಸವನ್ನು ಲೇವಾರಿ ಮಾಡುವಂತೆ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದು, ಈಚೆಗೆ ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ‘ದೇವಸ್ಥಾನದ ಆಡಳಿತ ಮಂಡಳಿಯೇ ಕಸ ವಿಲೇವಾರಿ ನಿರ್ವಹಣೆ ಮಾಡಬೇಕು’ ಸೂಚಿಸಿದೆ.
‘2024-25ರ ಸಾಲಿನವರೆಗೆ ಪಂಚಾಯಿತಿ ವ್ಯಾಪ್ತಿಯ ಹಾಗೂ ದೇವಸ್ಥಾನದ ಆವರಣದಲ್ಲಿರುವ ಕಸವನ್ನು ಪಂಚಾಯಿತಿಯಿಂದಲೇ ಸಂಗ್ರಹಿಸಿ ನಿರ್ವಹಿಸಲಾಗುತ್ತಿತ್ತು. ಕಸದ ನಿರ್ವಹಣೆಗೆ ಪ್ರತಿ ತಿಂಗಳು ₹35 ಸಾವಿರದಂತೆ ಹಾಗೂ ಸ್ವಚ್ಛವಾಹಿನಿ ಇನ್ನಿತರ ಖರ್ಚು ಸೇರಿ ವರ್ಷಕ್ಕೆ ₹4.50 ಲಕ್ಷ ಖರ್ಚು ಮಾಡಲಾಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ತಿಳಿಸಿದ್ದಾರೆ.
‘ಭಾಗಮಂಡಲ- ತಲಕಾವೇರಿ, ಭಾಗಮಂಡಲ- ತಾವೂರು, ಚೆದುಕಾರು ಮತ್ತು ಭಾಗಮಂಡಲದಿಂದ ಕಸ ವಿಲೇವಾರಿ ಘಟಕಕ್ಕೆ ಅಂದಾಜು 30 ಕಿಲೋ ಮೀಟರ್ ದೂರ ವಾರದಲ್ಲಿ ಮೂರು ದಿನ ಕಸ ವಿಲೇವಾರಿಯ ಸ್ವಚ್ಛವಾಹಿನಿ ಕಾರ್ಯ ನಿರ್ವಹಿಸುತ್ತಿದೆ. ಸಂಪನ್ಮೂಲದ ಕೊರತೆಯಿಂದ ದೇವಸ್ಥಾನದ ಆವರಣದಲ್ಲಿರುವ ಕಸವನ್ನು ಪಂಚಾಯಿತಿಗೆ ಸಂಗ್ರಹ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ದೇವಾಲಯದ ಆಡಳಿತ ಮಂಡಳಿ ಹಾಗೂ ಗ್ರಾಮ ಪಂಚಾಯಿತಿ ತಿಕ್ಕಾಟದಿಂದ ದೇವಸ್ಥಾನದ ಆವರಣದಲ್ಲಿ ಕಸದ ರಾಶಿ ತುಂಬಿ ಗಬ್ಬೆದ್ದು ನಾರುತಿದೆ. ಇತ್ತ ದೇವಾಲಯದ ಸಮಿತಿಯೂ ಕಸ ವಿಲೇವಾರಿ ಮಾಡುತ್ತಿಲ್ಲ. ಅತ್ತ ಗ್ರಾಮ ಪಂಚಾಯಿತಿಯು ಗಮನಹರಿಸುತ್ತಿಲ್ಲ. 2018ರಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಈ ಗ್ರಾಮ ಪಂಚಾಯಿತಿ ಗ್ರಾಮದ ಸ್ವಚ್ಛತೆ ಮಾತ್ರ ಗಮನಹರಿಸುತ್ತಿದೆ’ ಎಂದು ನಾಗರಿಕರು ಆರೋಪಿಸಿದ್ದಾರೆ.
‘ಅಧಿಕಾರಿಗಳು ದೇವಾಲಯದ ಸ್ವಚ್ಛತೆಯತ್ತ ಗಮನ ಹರಿಸುವುದು ಅನಿವಾರ್ಯ. ನಾಪೋಕ್ಲು ವ್ಯಾಪ್ತಿಯಲ್ಲೂ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ಜನರು ಇದೀಗ ರಸ್ತೆ ಮಧ್ಯದಲ್ಲಿಯೇ ತಂದು ಹಾಕುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಇಲ್ಲಿನ ನಾಗರಿಕರು ಆರೋಪಿಸಿದ್ದಾರೆ.
ರಸ್ತೆ ಬದಿಯಲ್ಲಿ ಪದೇ ಪದೇ ತ್ಯಾಜ್ಯ ತಂದು ಹಾಕುವವರ ವಿರುದ್ದ ಕ್ರಮಕೈಗೊಳ್ಳಲಾಗುವುದು–ಚೋಂದಕ್ಕಿ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.