ADVERTISEMENT

ಮಡಿಕೇರಿ: ಬೇಸಿಗೆಯಲ್ಲಿ ಕಾಣಸಿಗುತ್ತಿದೆ ಉಂಡೂರು ದೇವಸ್ಥಾನ!

ಹಾರಂಗಿ ಹಿನ್ನೀರಿನಲ್ಲಿ ಈಗ ನೋಡಬಹುದು ಹಳೆಯ ದೇಗುಲಗಳು, ಶಿಲಾಯುಗದ ಅವಶೇಷಗಳು

ಕೆ.ಎಸ್.ಗಿರೀಶ್
Published 6 ಮೇ 2025, 5:29 IST
Last Updated 6 ಮೇ 2025, 5:29 IST
ಹಾರಂಗಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ದೇಗುಲ
ಹಾರಂಗಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ದೇಗುಲ   

ಮಡಿಕೇರಿ: ಬೇಸಿಗೆ ಬಂತೆಂದರೆ ಪ್ರಕೃತಿಯ ಸೌಂದರ್ಯ ಮಾತ್ರವೇ ಇಮ್ಮಡಿಸುವುದಿಲ್ಲ. ವಸಂತ ಋತುವಿನಲ್ಲಾಗುವ ಬದಲಾವಣೆಗಳಿಂದ ಮಾನವ ನಿರ್ಮಿತ ಹಲವು ಸೌಂದರ್ಯಗಳೂ ಗೋಚರವಾಗುತ್ತವೆ!

ಈ ವೇಳೆ ಮಳೆ ಇಲ್ಲದೇ ಬಿರು ಬಿಸಿಲು ಇರುವುದರಿಂದ ಸಹಜವಾಗಿಯೇ ಹಾರಂಗಿ ಜಲಾಶಯದ ಹಿನ್ನೀರು ಕಡಿಮೆಯಾಗುತ್ತದೆ. ಆಗ ಅದರಲ್ಲಿ ಮುಳುಗಡೆಯಾಗಿದ್ದ ದೇಗುಲಗಳು, ಪ್ರಾಚ್ಯವಸ್ತು ಅವಶೇಷಗಳು ಕಣ್ಣಿಗೆ ಸಿಗುತ್ತವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಇವೆಲ್ಲವೂ ನೀರಿನೊಳಗೆ ಸೇರಿ ಬಿಡುತ್ತವೆ. ಮತ್ತೆ ಇವುಗಳನ್ನು ನೋಡಲು ಮುಂದಿನ ಬೇಸಿಗೆಯನ್ನೇ ಕಾಯಬೇಕಾಗುತ್ತದೆ.

ಈಗ ಹಾರಂಗಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಉಂಡೂರಿನಲ್ಲಿನ ಒಂದು ಅಪರೂಪದ ವಾಸ್ತುಶಿಲ್ಪ ಹೊಂದಿರುವ ದೇಗುಲವೊಂದು ಕಾಣುತ್ತಿದೆ. ಸಂಪೂರ್ಣ ಕಲ್ಲಿನಿಂದಲೇ ನಿರ್ಮಾಣವಾಗಿರುವ ಈ ದೇಗುಲವು ದಶಕಗಳ ಕಾಲ ನೀರಿನಲ್ಲೇ ಮುಳುಗಿದ್ದರೂ ಒಂದಿನಿತೂ ಏನೂ ಆಗದ ಸ್ಥಿತಿಯಲ್ಲಿ ಕಂಗೊಳಿಸುತ್ತಿದೆ. ಇದು ನಮ್ಮ ಪುರಾತನ ವಾಸ್ತುಶಿಲ್ಪಕ್ಕೆ ಹಿಡಿದ ಕೈಗನ್ನಡಿ ಎನಿಸಿದೆ.

ADVERTISEMENT

ಈಚೆಗಷ್ಟೇ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್ ಬಿ.ಪಿ.ರೇಖಾ ಅವರು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸದ್ಯ, ಈ ದೇಗುಲದಲ್ಲಿ ಗಣೇಶನ ಮೂರ್ತಿಯಷ್ಟೇ ಇದೆ. ಗರ್ಭಗುಡಿಯಲ್ಲಿ ಪಾಣಿಪೀಠವೂ ಇದೆ. ಹೀಗಾಗಿ, ಇದೊಂದು ಈಶ್ವರನಿಗೆ ಸಂಬಂಧಿಸಿದ ದೇಗುಲವಾಗಿತ್ತೆಂದು ಊಹಿಸಬಹುದು. ಆದರೆ, ಖಚಿತವಾಗಿ ಇಂತದ್ದೇ ದೇವರ ದೇಗುಲ ಎಂದು ಹೇಳುವುದಕ್ಕೆ ಕಷ್ಟವಾಗುತ್ತದೆ.

ಈ ದೇಗುಲದಲ್ಲಿ ಗರ್ಭಗುಡಿ, ನವರಂಗ ಹಾಗೂ ಮುಖಮಂಟಪಗಳಿವೆ. ಅಂದಾಜು 14ರಿಂದ 15ನೇ ಶತಮಾನಕ್ಕೆ ಸೇರಿದ, ವಿಜಯನಗರ ಸಾಮ್ರಾಜ್ಯದ ಅರಸರ ಕಾಲಘಟ್ಟದಲ್ಲಿ ನಿರ್ಮಾಣವಾಗಿತ್ತೆಂದು ಹೇಳಬಹುದಾದ ಈ ದೇಗುಲದ ಗೋಡೆಯಲ್ಲಿ ಶಾಸನವಿದ್ದರೂ ಅದರಲ್ಲಿನ ಬರಹ ನೀರಿನ ಸೆಳೆತಕ್ಕೆ ಅಳಿಸಿ ಹೋಗಿದೆ ಎಂದು ರೇಖಾ ಹೇಳುತ್ತಾರೆ.

ಶಿಲಾಯುಗದ ಕುರುಹುಗಳೂ ಲಭ್ಯ: ಇಲ್ಲಿ ಶಿಲಾಯುಗಕ್ಕೆ ಸೇರಿದ್ದ ಅನೇಕ ಕುರುಹುಗಳನ್ನು ಈಗಲೂ ಕಾಣಬಹುದು. ನೀರು ಕಡಿಮೆಯಾಗಿರುವುದರಿಂದ ಒಂದೆರಡು ನಿಲುಸುಗಲ್ಲುಗಳು ಗೋಚರವಾಗುತ್ತಿವೆ. ಸುಮಾರು 12ರಿಂದ 13 ತರಹ ಸಮಾಧಿಗಳಲ್ಲಿ ಈ ನಿಲುಸುಗಲ್ಲುಗಳು ಸಹ ಒಂದು. ಇದು ಅಂದಾಜು ಕ್ರಿ.ಪೂ. 1,500ದಿಂದ 2,000ನೇ ಇಸವಿಗೆ ಸೇರಿರಬಹುದಾದ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ.

ಇಲ್ಲಿಗೆ ಸ್ವಲ್ಪ ದೂರದಲ್ಲೇ ಯಡವಾರ ಹಾರಂಗಿ ಹಿನ್ನೀರು ಪ್ರದೇಶದಲ್ಲಿ 9ನೇ ಶತಮಾನಕ್ಕೆ ಸೇರಿದ ನಿಷಿಧಿ ಶಾಸನವೊಂದು ಸಿಕ್ಕಿದೆ. ‘ಕಲಿಯುಗ ಬ್ರಹ್ಮ ಎಂದು ಹೆಸರು ಪಡೆದಿದ್ದ ವೆಣ್ಡಿ ಎಂಬಾತ ಸ್ವರ್ಗವೇರಿದ’ ಎಂಬ ಸಂಗತಿ ಈ ಶಾಸನದಿಂದ ತಿಳಿಯುತ್ತದೆ.

ಅನುಮತಿ ಅಗತ್ಯ

ದೇಗುಲ ಇರುವ ಜಾಗವನ್ನು ತಲುಪಲು ಈಗ ದಟ್ಟವಾದ ಯಡವನಾಡು ಮೀಸಲು ಅರಣ್ಯದೊಳಗೆ ಹೋಗಬೇಕಿದೆ. ಇಲ್ಲಿ ಹೆಚ್ಚಿನ ಕಾಡಾನೆಗಳು ಸಂಚರಿಸುತ್ತವೆ. ಅರಣ್ಯ ಇಲಾಖೆಯ ನಿಯಮಾವಳಿ ಪ್ರಕಾರ ಅನುಮತಿ ಪಡೆದೇ ಈ ಸ್ಥಳಕ್ಕೆ ತೆರಳಬೇಕಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಬೇಸಿಗೆಯಲ್ಲಿ ಹಾರಂಗಿ ಹಿನ್ನೀರಿನಲ್ಲಿ ನೀರು ಕಡಿಮೆಯಾಗುವುದರಿಂದ ಉಂಡೂರು ದೇವಸ್ಥಾನ ಕಾಣಸಿಗುತ್ತದೆ. ಇದು ಸಂಪೂರ್ಣವಾಗಿ ಕಲ್ಲಿನಿಂದಲೇ ಕಟ್ಟಲಾಗಿದೆ.
-ಬಿ.ಪಿ.ರೇಖಾ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕ್ಯೂರೇಟರ್.
ಹಾರಂಗಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ದೇಗುಲ
ಹಾರಂಗಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ದೇಗುಲದ ಗರ್ಭಗುಡಿ
ಹಾರಂಗಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ದೇಗುಲದ ಚಾವಣಿ
ಹಾರಂಗಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ದೇಗುಲದ ಪ್ರವೇಶದ್ವಾರ
ಯಡವಾರೆ ಹಾರಂಗಿ ಹಿನ್ನೀರಿನಲ್ಲಿರುವ ನಿಷಿಧಿ ಕಲ್ಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.