ಸುಂಟಿಕೊಪ್ಪ: ಇಲ್ಲಿನ ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪಸ್ವಾಮಿ ದೈವಸ್ಥಾನದಲ್ಲಿ ಎರಡು ದಿನ ನಡೆದ ಧರ್ಮ ದೈವದ ನೇಮೋತ್ಸವವು ಮಂಗಳವಾರ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಭಾನುವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಪೂಜಾ ಕೈಂಕರ್ಯಗಳು ಆರಂಭಗೊಂಡವು. ನಂತರ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು.
ಸೋಮವಾರ ರಾತ್ರಿ ಅಣ್ಣಪ್ಪ ಸ್ವಾಮಿ ಮತ್ತು ಅಮ್ಮನವರ ಭಂಡಾರ ಮೆರವಣಿಗೆಯ ಮೂಲಕ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು. ಮಹಾಪೂಜೆ, ವಿಶೇಷ ಪೂಜೆ ನಡೆದವು. ನಂತರ ಎಣ್ಣೆ ಅರ್ಪಣೆಯ ಕಲ್ಲುರ್ಟಿ ದೈವದ ನೇಮೋತ್ಸವವು ನಡೆದು ಭಕ್ತಾದಿಗಳಿಗೆ ದರ್ಶನ ನೀಡಿತು. ತಡರಾತ್ರಿ ಪಂಜುರ್ಲಿ, ಗುಳಿಗ ನೇಮವು ಭಕ್ತರನ್ನು ಒಮ್ಮೆಲೇ ನಡುಗಿಸಿ ತನ್ನ ದರ್ಶನವನ್ನು ತೋರಿಸಿತು.
ಮಂಗಳವಾರ ಮುಂಜಾನೆ ಚಾಮುಂಡೇಶ್ವರಿ ಕೋಲ ಹಾಗೂ ಬಲಬಂಟ ಗುಳಿಗ ರಾಜ ದೈವಗಳ ಜೋಡಿ ಕೋಲಗಳು ಭಕ್ತರ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದವು.
ಬೆಳಿಗ್ಗೆ 9 ಗಂಟೆಯಿಂದ ಧರ್ಮ ದೈವದ ಹರಕೆ ಬೇಡಿಕೆ ಒಪ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಪರಿಹರಿಸುವಂತೆ ಭಕ್ತರು ದೈವದಲ್ಲಿ ಬೇಡಿಕೊಂಡರು.
ಮಧ್ಯಾಹ್ನ ಮಹಾಪೂಜೆಯ ನಂತರ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ವಿತರಿಸಲಾಯಿತು.
ಅಣ್ಣಸ್ವಾಮಿ ದೈವಸ್ಥಾನದಲ್ಲಿ ಧರ್ಮ ದೈವದ ನೇಮೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಸುಂಟಿಕೊಪ್ಪ ಸೇರಿದಂತೆ ವಿರಾಜಪೇಟೆ, ಸಿದ್ದಾಪುರ ಕುಶಾಲನಗರ ಹಾಗೂ ನೆರೆಯ ಜಿಲ್ಲೆಯ ಸುಳ್ಯ, ಪುತ್ತೂರು ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇದ್ದರು.
ದೈವಸ್ಥಾನದ ಪ್ರಮುಖರಾದ ಬಿ.ಡಿ.ರಾಜು ರೈ , ವಿವೇಕ್, ಶಿವಪ್ರಸಾದ್ ಇತರರು ಹಾಗೂ ಕುಟುಂಬಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.