ADVERTISEMENT

ಹಿರಿಯರ ಕೊರಳಿನಿಂದ ಹೊಮ್ಮಿತು ಜೀವನೋತ್ಸಾಹ

16 ಮಂದಿ ಹಿರಿಯರಿಂದ ವೈವಿಧ್ಯಮಯವಾದ ಅಪರೂಪದ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:06 IST
Last Updated 10 ಡಿಸೆಂಬರ್ 2025, 4:06 IST
ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಡಿಕೇರಿಯ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಹಿರಿಯರ ಕವಿಗೋಷ್ಠಿಯನ್ನು ಸಾಹಿತಿ ಕಾಜೂರು ಸತೀಶ್ ಉದ್ಘಾಟಿಸಿದರು
ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಡಿಕೇರಿಯ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಹಿರಿಯರ ಕವಿಗೋಷ್ಠಿಯನ್ನು ಸಾಹಿತಿ ಕಾಜೂರು ಸತೀಶ್ ಉದ್ಘಾಟಿಸಿದರು   

ಮಡಿಕೇರಿ: ಹಿರಿಯರ ಕೊರಳಿನಿಂದ ಹೊರಹೊಮ್ಮಿತು ಜೀವನೋತ್ಸಾಹದ ಕವನಗಳು. ಒಬ್ಬೊಬ್ಬ ಹಿರಿಯರ ಕವನವೂ ಮಂಕು ಕವಿದ ಇಂದಿನ ವಾತಾವರಣಕ್ಕೆ ದೀವಿಗೆ ಹಿಡಿಯುವಂತಿತ್ತು. ಕೆಲವರ ಕವನಗಳು ಮಲಗಿದ್ದವರನ್ನು ಬಡಿದೆಬ್ಬಿಸುವಂತಿತ್ತು. ಮತ್ತೆ ಕೆಲವರದ್ದು ಬಾಡಿದ ಮನಸ್ಸುಗಳಿಗೆ ಕಚಗುಳಿ ಇಟ್ಟಂತಿತ್ತು.

ಈ ದೃಶ್ಯಗಳು ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕವು ಏರ್ಪಡಿಸಿದ್ದ ಬಲು ಅಪರೂಪದ ‘ಹಿರಿಯರ ಕವಿಗೋಷ್ಠಿ’ಯಲ್ಲಿ ಕಂಡು ಬಂತು. ಬರೋಬರಿ 16 ಮಂದಿ ಹಿರಿಯರು ಕವನ ವಾಚಿಸಿ ಗಮನ ಸೆಳೆದರು.

ಭಾಗೀರಥಿ ಹುಳಿತಾಳ ಅವರು ವಾಚಿಸಿದ ‘ತೆರೆದಿಡು ಮನವ ಬಾಗಿಲವ’ ಕವನದ ಪ್ರತಿ ಚರಣದಲ್ಲೂ ಅವರು ‘ಪಡುಪಡು ಸಂತಸವ ಅದು ಭಗವಂತನ ಸೃಷ್ಟಿ’ ಎಂದು ಹೇಳಿದ ಮಾತುಗಳು ಇಡೀ ಕವಿಗೋಷ್ಠಿಯ ಆಶಯವನ್ನು ಪ್ರತಿಬಿಂಬಿಸಿದಂತಿತ್ತು. ಹಾ.ತಿ.ಜಯಪ್ರಕಾಶ್ ಅವರು ಬಲೂನ್ ಒಳಗೆ ಚುಟುಕಗಳನ್ನು ಬರೆದಿಟ್ಟು, ಬಲೂನ್ ಒಡೆದು ಚುಟುಕಗಳನ್ನು ವಾಚಿಸಿದ್ದು ವಿಶೇಷ ಎನಿಸಿತ್ತು.

ADVERTISEMENT

ಹಿರಿಯ ಸಾಹಿತಿ ಬಿ.ಎ.ಷಂಶುದ್ದೀನ್ ಅವರು, ಕವಿ, ಕವಿತ್ವ, ಕಾವ್ಯದ ಹಿನ್ನಲೆ, ಕಾವ್ಯದಿಂದ ಸಮಾಜದಲ್ಲಿ ಬದಲಾವಣೆ ಹೇಗೆ ತರಬಹುದು ಎಂಬ ಕುರಿತು ಮಾತನಾಡಿ, ತಾವು ವಿದ್ಯಾರ್ಥಿ ಜೀವನದಲ್ಲಿ ರಚಿಸಿದ ಕವನಗಳನ್ನು ವಾಚಿಸಿದರು. ಇಂತಹ ಕಾರ್ಯಕ್ರಮಗಳು ಯಥೇಚ್ಛವಾಗಿ ನಡೆಯಬೇಕು ಎಂದರು.

ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಹಿರಿಯ ಚೇತನಗಳು ಹಿಂದೆ ಕೊಡಗಿನಲ್ಲಿ ಸಾಹಿತ್ಯ ಕ್ಷೇತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಈಗ ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿದೆ. ಹಾಗಾಗಿ, ಈ ಕವಿಗೋಷ್ಠಿ ಏರ್ಪಡಿಸಲಾಗಿದೆ’ ಎಂದು ಹೇಳಿದರು.

ಕಿಗ್ಗಾಲು ಎಸ್ ಗಿರೀಶ್, ಮೂಟೆರ ಕೆ ಗೋಪಾಲಕೃಷ್ಣ, ಕೆ.ಶೋಭಾ ರಕ್ಷಿತ್, ಕಟ್ರತನ ಲಲಿತಾ ಅಯ್ಯಣ್ಣ, ಅಂಬೆಕಲ್ಲು ಸುಶೀಲ ಕುಶಾಲಪ್ಪ, ಬಿ.ಜಿ.ಅನಂತಶಯನ, ವಿದ್ವಾನ್ ಶಂಕರಯ್ಯ ಮಾಸ್ಟರ್, ಭಾಗೀರಥಿ ಹುಳಿತಾಳ, ರೇವತಿ ರಮೇಶ್, ಬಿ.ಬಿ.ನಾಗರಾಜ ಆಚಾರ್, ಕೆ.ಎಸ್.ನಳಿನಿ ಸತ್ಯನಾರಾಯಣ, ಶಿವದೇವಿ ಅವನೀಶ್ಚಂದ್ರ, ಹರೀಶ್ ಸರಳಾಯ, ಹಾ.ತಿ.ಜಯಪ್ರಕಾಶ್, ಪಿ.ಎಸ್ ವೈಲೇಶ್, ಪಿ.ಎ.ಸುಶೀಲಾ ಕವನಗಳನ್ನು ವಾಚಿಸಿದರು.

ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಗೌರವ ಕಾರ್ಯದರ್ಶಿ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್‌ಕುಮಾರ್, ಶಿಕ್ಷಕಿ ಪ್ರತಿಮಾ ರೈ ಭಾಗವಹಿಸಿದ್ದರು.

ಹಿರಿಯರ ಕವಿಗೋಷ್ಠಿ ಉದ್ಘಾಟಿಸಿದ ಕಾಜೂರು ಸತೀಶ್ ಮಾತನಾಡಿದರು
ಚುಟುಕು ಕವಿ ಹಾ.ತಿ.ಜಯಪ್ರಕಾಶ್ ಬಲೂನ್ ಒಡೆಯುವ ಮೂಲಕ ವಿಶಿಷ್ಟವಾಗಿ ಚುಟುಕು ವಾಚಿಸಿದರು
ಕವಿ ಹಾ.ತಿ.ಜಯಪ್ರಕಾಶ್ ಅವರು ಬಲೂನ್ ಒಡೆಯುವ ಮೂಲಕ ವಿಶಿಷ್ಟವಾಗಿ ಕವನ ವಾಚಿಸಿದರು

ಹಿರಿಯರ ಅನುಭವದ ಅನುಗ್ರಹವೇ ಬಾಳಿನ ಬೆಳಕು; ಕೃಪಾದೇವರಾಜ್

ಸಾಹಿತಿ ಕೃಪಾ ದೇವರಾಜ್ ಮಾತನಾಡಿ ‘ಹಿರಿಯರ ಅನುಭವದ ಅನುಗ್ರಹವೇ ನಮ್ಮ ಬಾಳಿನ ಬೆಳಕು.  ಹಿರಿಯರನ್ನು ಗೌರವಿಸುವುದು ಒಂದು ಸ್ವಸ್ಥ ಸಮಾಜಕ್ಕೆ ಹಾಕುವ ಭದ್ರ ಅಡಿಪಾಯ’ ಎಂದು ಪ್ರತಿಪಾದಿಸಿದರು. ‘ವಯಸ್ಸು ಕೇವಲ ಎಣಿಕೆಯ ಸಂಖ್ಯೆ. ದೇಹಕ್ಕೆ ವಯಸ್ಸಾಗಬಹುದು ಮನಸ್ಸಿಗೆ ಅಲ್ಲ. ನಮ್ಮ ಮನಸ್ಸಿನಲ್ಲಿರುವ ಮಗುತನವನ್ನು ಯಾವಾಗಲೂ ಜೀವಂತವಾಗಿ ಲವಲವಿಕೆಯಿಂದ ಇಟ್ಟುಕೊಳ್ಳಬೇಕು. ಆಗ ಮಾತ್ರ ಸಂತಸ ಸಾಧ್ಯ’ ಎಂದರು. ‘ನಾಳೆ ಎಂಬುದು ಭರವಸೆಯಷ್ಟೇ. ಹಾಗಾಗಿ ಇವತ್ತಿನ ಜೀವನವನ್ನು ನಾವು ಆನಂದದಿಂದ ಜೀವಿಸಬೇಕು. ಒಳ್ಳೆಯದೇ ಮಾಡುತ್ತಾ ಬದುಕುವ. ಚಿಂತೆ ಬಿಟ್ಟು ಖುಷಿಯಾಗಿ ಜೀವಿಸುವ. 60ಕ್ಕೆ ಅರಳು ಮರಳು ಅಲ್ಲ ಮರಳಿ ಅರಳುವ ಕಾಲ’ ಎಂದು ಹೇಳಿದರು.

Cut-off box - ಗಮನ ಸೆಳೆದ ಕಾಜೂರು ಸತೀಶ್ ಅವರ ಕವನ ಕವಿಗೋಷ್ಠಿ ಉದ್ಘಾಟಿಸಿದ ಸಾಹಿತಿ ಕಾಜೂರು ಸತೀಶ್ ಅವರು ಝೆನ್ ಕಥೆಯೊಂದಿಗೆ ಮಾತು ಆರಂಭಿಸಿ ಕವನ ವಾಚನದೊಂದಿಗೆ ಮುಗಿಸಿದರು. ಅವರು ತಮ್ಮ ಭಾಷಣದಲ್ಲಿ ಹಿಂದೆ ಇದ್ದ ಪರಿಸ್ಥಿತಿಗೂ ಈಗಿನ ಆಧುನಿಕ ಸ್ಥಿತಿಗೂ ಹೋಲಿಸಿ ಮಾತನಾಡಿದರು. ಹಿಂದೆ ಇದ್ದ ಧ್ಯಾನಸ್ಥ ಸ್ಥಿತಿ ಈಗ ಇಲ್ಲ. ಮೊಬೈಲ್‌ಗಳು ಕಿತ್ತು ತಿನ್ನುತ್ತಿದ್ದು ಒಂದು ಪುಸ್ತಕವನ್ನೂ ತದೇಕಚಿತ್ತದಿಂದ ಓದದಂತೆ ಮಾಡಿವೆ. ಈಗಿನ ಹಿರಿಯರು ಇಂದಿನ ಆ ಸ್ಥಿತಿ ಹಾಗೂ ಈಗಿನ ಈ ಸ್ಥಿತಿ ಎರಡನ್ನೂ ಕಂಡಿದ್ದು ಬರೆಯುತ್ತಿದ್ದಾರೆ ಎಂದು ಹೇಳಿದರು. ಅವರು ವಾಚಿಸಿದ ‘ಚಪ್ಪಲಿಗಳು ನಾವು’ ಕವನ ಸೂಜಿಗಲ್ಲಿನಂತೆ ಸೆಳೆಯಿತು. ‘ಎಡವಿ ನಜ್ಜುಗುಜ್ಜಾಗುತ್ತಿದ್ದ ಹೆಬ್ಬೆರಳುಗಳೇ ಹೀಗೆ ಮರೆಯಬಹುದೇ ನಮ್ಮ ನಮ್ಮ ಉಂಗುಷ್ಟದ ಕೊರಳ ಉಸಿರಗಟ್ಟಿಸಿದರೂ ನಿಮ್ಮ ಮುನ್ನಡೆಸಿದ ನಮ್ಮ ನಮ್ಮ ತಿನ್ನುವ ಹಸಿ ಬೇತಾಳ ನಾಯಿಗಳೆ ನಿಮಗೆ ಶರಣು’ ಎಂಬ ಸಾಲುಗಳು ಇಡೀ ಕವನದಿಂದ ಬೇರೊಂದು ಧ್ವನಿಯನ್ನು ಹೊಮ್ಮಿಸಿದಂತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.