ADVERTISEMENT

ಒಮ್ಮೆಗೆ ಸುರಿದ ಮಳೆ; ಜನರ ಪರದಾಟ

ಮಡಿಕೇರಿ ನಗರದ ಕಾವೇರಿ ಲೇಔಟ್‌ನ ರಸ್ತೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 4:30 IST
Last Updated 6 ಆಗಸ್ಟ್ 2025, 4:30 IST
ಒಮ್ಮೆಗೆ ಸುರಿದ ಭಾರಿ ಮಳೆಯಿಂದ ಚರಂಡಿ ಕಟ್ಟಿಕೊಂಡು ರಸ್ತೆಯಲ್ಲಿ ನೀರು ಆವರಿಸಿದ್ದ ಮಡಿಕೇರಿಯ ಕಾವೇರಿ ಲೇಔಟ್‌ಗೆ ತೆರಳಿದ ನಗರಸಭೆ ಅಧ್ಯಕ್ಷೆ ಕಲಾವತಿ ಮತ್ತು ಮಹೇಶ್ ಜೈನಿ ಪರಿಶೀಲನೆ ನಡೆಸಿದರು. ನಗರಸಭೆ ಸಿಬ್ಬಂದಿ ಕಟ್ಟಿಕೊಂಡಿದ್ದ ಚರಂಡಿಯನ್ನು ಸುರಿಯುವ ಮಳೆಯಲ್ಲೂ ಸ್ವಚ್ಛಗೊಳಿಸಿದರು
ಒಮ್ಮೆಗೆ ಸುರಿದ ಭಾರಿ ಮಳೆಯಿಂದ ಚರಂಡಿ ಕಟ್ಟಿಕೊಂಡು ರಸ್ತೆಯಲ್ಲಿ ನೀರು ಆವರಿಸಿದ್ದ ಮಡಿಕೇರಿಯ ಕಾವೇರಿ ಲೇಔಟ್‌ಗೆ ತೆರಳಿದ ನಗರಸಭೆ ಅಧ್ಯಕ್ಷೆ ಕಲಾವತಿ ಮತ್ತು ಮಹೇಶ್ ಜೈನಿ ಪರಿಶೀಲನೆ ನಡೆಸಿದರು. ನಗರಸಭೆ ಸಿಬ್ಬಂದಿ ಕಟ್ಟಿಕೊಂಡಿದ್ದ ಚರಂಡಿಯನ್ನು ಸುರಿಯುವ ಮಳೆಯಲ್ಲೂ ಸ್ವಚ್ಛಗೊಳಿಸಿದರು   

ಮಡಿಕೇರಿ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ ಮಂಗಳವಾರ ಅಕ್ಷರಶಃ ಅಬ್ಬರಿಸಿತು. ಒಮ್ಮೊಂದೊಮ್ಮೆಗೆ ಸುರಿದ ಮಳೆಯಿಂದ ಜನಸಾಮಾನ್ಯರು ಪರದಾಡಿದರು. ಮತ್ತಷ್ಟು ಮಳೆ ಬೀಳುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಕೊಡಗು ಜಿಲ್ಲೆಗೆ ಮುಂದಿನ 2 ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಿದೆ.

ಮಡಿಕೇರಿ ನಗರದಲ್ಲಿ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಒಂದೇ ಸಮನೆ ನಿರಂತರವಾಗಿ ಸುರಿದ ಮಳೆಯಿಂದ ನಗರದ ರಸ್ತೆಗಳೆಲ್ಲವೂ ಹೊಳೆಗಳಂತಾದವು. ತಗ್ಗು ಪ್ರದೇಶಗಳು ಕೆರೆಗಳಂತಾದವು.

ಕಾವೇರಿ ಲೇಔಟ್‌ನ ರಸ್ತೆಗಳು ಮಳೆಯಿಂದ ಜಲಾವೃತಗೊಂಡಿತು. ರಸ್ತೆಯ ಮೇಲೆ ಸುಮಾರು ಒಂದು ಅಡಿಗೂ ಹೆಚ್ಚು ನೀರು ಹರಿಯಲಾರಂಭಿಸಿ, ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿತು. ಮಳೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ರಸ್ತೆಯ ಮೇಲಿದ್ದ ನೀರಿನ ಪ್ರಮಾಣವೂ ತಗ್ಗಿತು.

ADVERTISEMENT

ಸಂಜೆ ಶಾಲೆಯಿಂದ ವಿದ್ಯಾರ್ಥಿಗಳು ಮನೆಗೆ ಬರಲು ಪರದಾಡಿದರು. ಕೊಡೆ ಹಿಡಿದಿದ್ದರೂ ಸಂಪೂರ್ಣ ನೆನೆಯುವಷ್ಟು ಪ್ರಮಾಣದಲ್ಲಿ ಮಳೆ ಸುರಿಯಿತು. ಮತ್ತೊಂದೆಡೆ ಕೊಡೆ, ರೇನ್ ಕೋಟ್ ಬಿಟ್ಟು ಬಂದವರ ಪಾಡು ಹೇಳತೀರದ್ದಾಗಿತ್ತು. ಮಳೆ ನಿಲ್ಲುವವರೆಗೂ ಹಲವು ವಿದ್ಯಾರ್ಥಿಗಳು ಶಾಲೆಯಿಂದ ಹೊರಡಲು ಸಾಧ್ಯವಾಗಲಿಲ್ಲ.

ನಿಷೇಧ ಮುಂದುವರಿಕೆ: ಜಿಲ್ಲೆಯಲ್ಲಿ ಭಾರಿ ವಾಹನಗಳ ಸಂಚಾರದ ಮೇಲೆ ಹೇರಲಾಗಿದ್ದ ನಿಷೇಧವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆ. 25ರವರೆಗೂ ಮುಂದುವರಿಸಿ ಆದೇಶ ಹೊರಡಿಸಿದ್ದಾರೆ.

ಎಲ್ಲಾ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಾಣಿಕೆ ವಾಹನಗಳು, ವಾಹನದ ನೋಂದಣಿ ತೂಕ 18,500 ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಣೆ ಮಾಡುವ ಸರಕು ಸಾಗಾಣಿಕೆ ವಾಹನಗಳು, ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ವಾಹನಗಳು, ಆರ್ಟಿಕ್ಯೂಲೇಟೆಡ್ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಅಡುಗೆ ಅನಿಲ, ಇಂಧನ, ಹಾಲು, ರಸಗೊಬ್ಬರ ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲಾಗುವ ವಾಹನಗಳು, ಮಲ್ಟಿ ಆಕ್ಸಿಲ್ ಬಸ್‍ಗಳು ಸೇರಿದಂತೆ ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಹಾನಿ ಪ್ರದೇಶಗಳಿಗೆ ಅಧ್ಯಕ್ಷೆ ಉಪಾಧ್ಯಕ್ಷ ಭೇಟಿ

ಕೆಲವೇ ಗಂಟೆಗಳಲ್ಲಿ ಸುರಿದ ಭಾರಿ ಮಳೆಯಿಂದ ಮಡಿಕೇರಿ ನಗರ ಕಾವೇರಿ ಲೇಔಟ್‌ನ ರಸ್ತೆಗಳು ಜಲಾವೃತಗೊಂಡವು. ಚರಂಡಿ ಕಟ್ಟಿಕೊಂಡು ನೀರು ಹರಿಯಲಾಗದೇ ರಸ್ತೆಗೆ ತುಂಬಿತು. ಮಳೆಯ ಬಿರುಸು ಹೆಚ್ಚಿದಂತೆಲ್ಲ ನೀರು ಮನೆಯೊಳಗೆ ನುಗ್ಗುವ ಸಾಧ್ಯತೆ ಅಧಿಕವಾಗತೊಡಗಿತು. ಸ್ಥಳಕ್ಕೆ ಬಂದ ಅಧ್ಯಕ್ಷೆ ಕಲಾವತಿ ಮತ್ತು ಉಪಾಧ್ಯಕ್ಷ ಮಹೇಶ್ ಜೈನಿ ನಗರಸಭೆಯ ಸಿಬ್ಬಂದಿ ಕರೆಸಿ ಚರಂಡಿಯನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.