ADVERTISEMENT

ಅಂದು ಜಿ.ಪಂ ಉಪಾಧ್ಯಕ್ಷೆ, ಈಗ ಸಿನಿಮಾ ನಿರ್ಮಾಪಕಿ

ಸಿನಿಮಾ ನಿರ್ಮಾಣಕ್ಕೆ ಮುಂದಾದ ‘ಕಾವೇರಿ’ ನಾಡಿನ ಪ್ರತಿಭೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 19:30 IST
Last Updated 25 ನವೆಂಬರ್ 2020, 19:30 IST
ಡಾ.ಕಾವೇರಿ
ಡಾ.ಕಾವೇರಿ   

ಮಡಿಕೇರಿ: ಕೊಡಗು ಜಿಲ್ಲೆಯ ಪ್ರತಿಭಾನ್ವಿತರು ಕ್ರೀಡೆ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಸಿನಿಮಾ ನಿರ್ಮಾಣ, ನಿರ್ದೇಶಕರಾಗಿಯೂ ಸಾಕಷ್ಟು ಹೆಸರು ಪಡೆದಿದ್ದಾರೆ. ಕಳೆದ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗಿದ್ದ ಕೊಡಗಿನ ಡಾ.ಎಚ್‌.ಎಂ.ಕಾವೇರಿ ಅವರು ರಾಜಕೀಯ ಕ್ಷೇತ್ರ ಬಿಟ್ಟು ಈಗ ಸಿನಿಮಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಜಿಲ್ಲೆಯ ಅಮ್ಮತ್ತಿ ಮೀಸಲು ಕ್ಷೇತ್ರದಿಂದ ಜಯ ಗಳಿಸಿದ್ದ ಅವರು ಕೊಡಗು ಜಿಲ್ಲೆಯ ಅಭಿವೃದ್ಧಿಗೂ ಶ್ರಮಿಸಿದ್ದರು.

ಈಗ ತಮ್ಮ ಸ್ನೇಹಿತರ ಜೊತೆಗೂಡಿ ‘ಸ್ವಾಮಿ ಅ್ಯಂಡ್‌ ಫ್ರೆಂಡ್ಸ್‌’ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಕಾವೇರಿ ನಾಡಿನ ‍ಪ್ರತಿಭೆ ಡಾ.ಕಾವೇರಿ ಅವರೊಂದಿಗೆ ದೊಡ್ಡ ಪ್ರತಿಭಾನ್ವಿತರ ತಂಡವೂ ಜೊತೆಗೂಡಿದೆ. ‘ಅರ್ಕ ಫಿಲಂಸ್‌’ ಅಡಿ ಚೊಚ್ಚಲ ಚಿತ್ರ ನಿರ್ಮಾಣ ಆಗುತ್ತಿದೆ.

ADVERTISEMENT

‘ಕೊಡಗಿನ ಟಾಟಾ ಕಾಫಿ ಎಸ್ಟೇಟ್‌ನಲ್ಲಿ ನಮ್ಮ ತಂದೆ ಕೆಲಸ ಮಾಡಿಕೊಂಡಿದ್ದರು. ಆಗ ಆಕಸ್ಮಿಕವಾಗಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅವಕಾಶವೂ ಒಲಿದು ಬಂದಿತ್ತು. ಅದರಲ್ಲಿ ಯಶಸ್ಸು ಕಂಡಿದ್ದೆ. ಈಗ ಒಳ್ಳೆಯ ಸಂದೇಶವುಳ್ಳ ಚಿತ್ರ ನೀಡುವ ಉದ್ದೇಶ ನನ್ನದು. ಅದಕ್ಕೆ ಒಳ್ಳೆಯ ತಂಡವು ನನ್ನೊಂದಿಗೆ ಕೈಜೋಡಿಸಿದೆ’ ಎಂದು ಪಾಲಿಬೆಟ್ಟದ ನಿವಾಸಿ, ನಿರ್ಮಾಪಕಿ ಕಾವೇರಿ ಸಂತಸ ಹಂಚಿಕೊಂಡರು.

‘ರುದ್ರಿ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಇತರೆ ನಟರು ಇದ್ದಾರೆ. ಮಂಡ್ಯ ರಮೇಶ್‌ ಅವರ ಪುತ್ರಿ ದಿಶಾ ರಮೇಶ್‌ ಪ್ರಥಮ ಬಾರಿಗೆ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ದಿಶಾ ಅವರು ರಂಗ ಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಿ.ಸುರೇಶ್ ಅವರು ಪ್ರಮುಖ ಪಾತ್ರದಲ್ಲಿದ್ದಾರೆ’ ಎಂದು ಕಾವೇರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕೊಡಗು, ಮೈಸೂರು ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ. ಸ್ಥಳಗಳು ಅಂತಿಮಗೊಳಿಸಲಾಗಿದೆ. ಜನವರಿ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ. ಕೊರೊನಾ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡೇ ಚಿತ್ರೀಕರಣ ನಡೆಸಲಾಗುವುದು. ಉತ್ತಮ ಸಂದೇಶದೊಂದಿಗೆ ಮನರಂಜನೆಯೂ ಇರಬೇಕು ಎಂಬ ಉದ್ದೇಶದೊಂದಿಗೆ ಚಿತ್ರ ನಿರ್ಮಿಸಲಾಗುತ್ತಿದೆ. ನನಗೆ ಸಿನಿಮಾ ಕ್ಷೇತ್ರ ಹೊಸದು, ಉತ್ತಮ ತಂಡವು ಜೊತೆಗೆ ಇರುವುದು ಸಂತೋಷ ತಂದಿದೆ’ ಎಂದು ಹೇಳಿದರು.

ಕಲಾವಿದರು ಹಾಗೂ ತಂತ್ರಜ್ಞರ ಬಳಗ: ರುದ್ರಿ ರಿಷಿಕ್‌ (ನಟ, ನಿರ್ದೇಶಕ, ಸಂಗೀತ ನಿರ್ದೇಶಕ), ಶಿವು ಚಾವಡಿ (ನಟ, ಸಹ ನಿರ್ದೇಶಕ), ದಿಶಾ ಮಂಡ್ಯ ರಮೇಶ್‌, (ನಾಯಕಿ), ಅವಿ ತೇಜ, ಅವಿ ವರ್ಮ, ಚಂದ್ರು (ನಟರು), ಪ್ರವೀಣ್‌ (ಛಾಯಾಗ್ರಾಹಕ), ಯು.ಡಿ.ವಿ.ವೆಂಕಟೇಶ್‌ (ಸಂಕಲನ), ವೈಶಾಕ್‌ ಶಶಿಧರನ್‌ (ಹಿನ್ನೆಲೆ ಸಂಗೀತ), ವಿನೋದ್‌ ಕರ್ಕೆರ (ನೃತ್ಯ ನಿರ್ದೇಶಕ), ಭರತ್‌ (ಕಲೆ) ಹಾಗೂ ಕೃಷ್ಣ (ವರ್ಣಾಲಂಕಾರ).

ಇಂದು ಮುಹೂರ್ತ: ನ.26ರ ಗುರುವಾರ ಬೆಳಿಗ್ಗೆ 11.30ಕ್ಕೆ ಮೈಸೂರಿನ ಜಯಲಕ್ಷ್ಮಿಪರಂನ ಶ್ರೀವಿದ್ಯಾ ಫೌಂಡೇಶನ್‌ನಲ್ಲಿ ಸಿನಿಮಾಕ್ಕೆ ಮುಹೂರ್ತ ನಡೆಯಲಿದೆ. ಜನಪದ ಅಕಾಡೆಮಿಯ ಅಧ್ಯಕ್ಷೆ ಮಂಜಮ್ಮ ಜೋಗತಿ, ಮಾಜಿ ಎಂಎಲ್‌ಸಿ ಎ.ಆರ್‌.ಕೃಷ್ಣಮೂರ್ತಿ, ಪೊಲೀಸ್‌ ಉಪ ಆಯುಕ್ತ ಪ್ರಕಾಶ್‌ಗೌಡ, ನಿರ್ದೇಶಕ ಬಿ.ಸುರೇಶ್‌, ಛಾಯಾಗ್ರಾಹಕ ಅಶೋಕ್‌ ಕಶ್ಯಪ್‌, ಕಿರಿತೆರೆ ನಿರ್ದೇಶಕರಾದ ರೇಖಾರಾಣಿ ಕಶ್ಯಪ್‌, ನಟ ರಮೇಶ್‌ ಪಂಡಿತ, ಮಂಡ್ಯ ರಮೇಶ್‌, ಶರಣಯ್ಯ, ನಿರ್ದೇಶಕರಾದ ಪ್ರವೀಣ್‌ ಕೃಪಾಕರ್‌ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.