ಮಡಿಕೇರಿ: ಇಂದು ವಿಶ್ವ ವಸ್ತುಸಂಗ್ರಹಾಲಯಗಳ ದಿನ. ಪ್ರಾಚೀನ ಕಾಲದ ಅನನ್ಯವಾದ ಇತಿಹಾಸ ಹಾಗೂ ತನ್ನದೇ ವಿಶಿಷ್ಟವಾದ ಸಂಸ್ಕೃತಿ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಇರುವುದು ಕೇವಲ 2 ವಸ್ತುಸಂಗ್ರಹಾಲಯಗಳು ಮಾತ್ರ. ಇಲ್ಲಿನ ಇತಿಹಾಸ, ಪರಂಪರೆಯನ್ನು ಜತನದಿಂದ ರಕ್ಷಿಸಲು ಜಿಲ್ಲೆಯಲ್ಲಿ ಇನ್ನಷ್ಟು ವಸ್ತುಸಂಗ್ರಹಾಲಯಗಳು ಸ್ಥಾಪನೆಯಾಗಬೇಕಿದೆ.
ಸದ್ಯ, ಪುರಾತತ್ವ ಮತ್ತು ಪರಂಪರೆ ಇಲಾಖೆಗೆ ಸೇರಿದ ಕೋಟೆಯೊಳಗಿರುವ ವಸ್ತುಸಂಗ್ರಹಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ಜನರಲ್ ತಿಮ್ಮಯ್ಯ ವಸ್ತುಸಂಗ್ರಹಾಲಯಗಳಿವೆ.
ಈ ಎರಡೂ ವಸ್ತುಸಂಗ್ರಹಾಲಯಗಳು ಸಹ ಅತ್ಯಂತ ವಿಶಿಷ್ಟವಾಗಿವೆ ಮಾತ್ರವಲ್ಲ ಅಪರೂಪದ ವಸ್ತುಸಂಗ್ರಹಾಲಯಗಳು ಎನಿಸಿವೆ.
ಕೋಟೆಯೊಳಗೆ ಇರುವ ಪುರಾತತ್ವ ಮತ್ತು ಪರಂಪರೆ ಇಲಾಖೆಗೆ ಸೇರಿದ ವಸ್ತುಸಂಗ್ರಹಾಲಯವು ಈ ಮೊದಲು ಚರ್ಚ್ ಆಗಿತ್ತು. ಬ್ರಿಟಿಷರು ಈ ಚರ್ಚ್ ಅನ್ನು ತಮ್ಮ ಪ್ರಾರ್ಥನಾ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಬ್ರಿಟಿಷರೆಲ್ಲರೂ ವಾಪಸ್ ತಮ್ಮ ದೇಶಕ್ಕೆ ತೆರಳಿದ ನಂತರ ಈ ಚರ್ಚ್ ಹಾಳು ಸುರಿಯುತ್ತಿತ್ತು. 1971ರಲ್ಲಿ ಈ ಚರ್ಚ್ ಅನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ಈ ಬಗೆಯ ವಸ್ತುಸಂಗ್ರಹಾಲಯವೊಂದು ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ತೀರಾ ಅಪರೂಪ ಎನ್ನಬಹುದು.
ಈ ಕಟ್ಟಡವೇ ಒಂದು ಪಾರಂಪರಿ ಕಟ್ಟಡ ಎನಿಸಿದೆ. 150 ವರ್ಷಗಳಿಗೂ ಹಿಂದೆ ಕಟ್ಟಿದ ಈ ಕಟ್ಟಡವು ರೋಮನ್ ಗೋಥಿಕ್ ಶೈಲಿಯಲ್ಲಿದೆ. ಇಲ್ಲಿರುವ ಪಾರದರ್ಶಕ ಗಾಜಿನ ಕಿಟಕಿಗಳು ಅತ್ಯಾಕರ್ಷಕವಾಗಿವೆ.
ಇಲ್ಲಿ ಜೈನತೀರ್ಥಂಕರರ ಶಿಲ್ಪಗಳು, ಕ್ರಿ.ಶ 12ನೇ ಶತಮಾನದ ಹಿಂದೂ ದೇವ, ದೇವತೆಯರ ಶಿಲ್ಪಗಳು, ಅನೇಕ ವೀರಗಲ್ಲುಗಳನ್ನು ಇರಿಸಲಾಗಿದೆ. ಇವೆಲ್ಲವೂ ಕೊಡಗಿನಲ್ಲೇ ಸಿಕ್ಕಿರುವಂತಹವು ಎನ್ನುವುದು ವಿಶೇಷ.
ನೇಪಾಳದ್ದು ಎನ್ನಲಾದ ಶಿವಪಾರ್ವತಿಯರ ವಿಗ್ರಹ, ವೃತ್ತಾಕಾರದ ಪೀಠದ ಮೇಲೆ ಕುಳಿತಿರುವ ಶಿವ ಆತನ ಎಡತೊಡೆಯ ಮೇಲೆ ಕುಳಿರುವ ಪಾರ್ವತಿ ಇಲ್ಲಿರುವ ಉಮಾಮಹೇಶ್ವರ ಮೂರ್ತಿಯ ವಿಶೇಷ. ವಜ್ರಪರ್ಯಂಕ ಮುದ್ರೆಯಲ್ಲಿ ಕುಳಿತಿರುವ ಕಾಳಿಯ ವಿಗ್ರಹವಿದ್ದು, ಅದರ ಪ್ರಭಾವಳಿ ಗಮನ ಸೆಳೆಯುವಂತಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಬಳಕೆ ಮಾಡುತ್ತಿದ್ದ ಅಪರೂಪದ ವಸ್ತುಗಳೂ ಇಲ್ಲಿವೆ. ಈ ಸಂಗ್ರಹಾಲಯವು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ತೆರೆದಿರುತ್ತದೆ. ಸೋಮವಾರ, ಎರಡನೇ ಶನಿವಾರ ಮತ್ತು ಸರ್ಕಾರಿ ರಜೆದಿನಗಳು ಈ ವಸ್ತುಸಂಗ್ರಹಾಲಯ ಮುಚ್ಚಿರುತ್ತದೆ.
ಸೂಜಿಗಲ್ಲಿನಂತೆ ಸೆಳೆಯುವ ಜನರಲ್ ತಿಮ್ಮಯ್ಯ ವಸ್ತುಸಂಗ್ರಹಾಲಯ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ಜನರಲ್ ತಿಮ್ಮಯ್ಯ ವಸ್ತುಸಂಗ್ರಹಾಲಯವು ಮಡಿಕೇರಿಯಲ್ಲೆ ಇದ್ದು, ಇದು ಸಹ ಬೇರೆಲ್ಲೂ ಕಾಣಸಿಗದಂತಹ ವಸ್ತುಸಂಗ್ರಹಾಲಯ ಎನಿಸಿದೆ.
ದೇಶಕ್ಕಾಗಿ ಅನುಪಮ ಸೇವೆ ಸಲ್ಲಿಸಿದ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಮನೆ ‘ಸನ್ನಿಸೈಡ್’ ಅನ್ನು 2021ರಲ್ಲಿ ರಾಷ್ಟ್ರಪತಿಯಾಗಿದ್ದ ರಾಮನಾಥ ಕೋವಿಂದ್ ಅವರು ಯುದ್ಧ ಸ್ಮಾರಕವಾಗಿ ಉದ್ಘಾಟಿಸಿದರು. ಇಲ್ಲಿ ಸೇನೆಗೆ ಸಂಬಂಧಿಸಿದ ವಸ್ತುಗಳು, ಯುದ್ಧ ಟ್ಯಾಂಕರ್‌ಗಳು ಸೇರಿದಂತೆ ಅನೇಕ ವಸ್ತುಗಳಿವೆ. ಜನರಲ್ ತಿಮ್ಮಯ್ಯ ಅವರು ಹುಟ್ಟಿದಾಗಿನಿಂದ ಅವರು ಸೇನೆಯಲ್ಲಿ ವಿವಿಧ ಹಂತಗಳಲ್ಲಿ ಸಲ್ಲಿಸಿದ ಸೇವೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವಂತಹ ವ್ಯವಸ್ಥೆ ಇಲ್ಲಿದೆ.
ಮೆಷಿನ್‌ಗನ್‌ಗಳು, ರಾಕೆಟ್ ಲಾಂಚರ್‌ಗಳು, ಯುದ್ಧ ವಿಮಾನಗಳು, ಹಲವು ಬಗೆಯ ರೈಫಲ್‌ಗಳು ಸೇರಿದಂತೆ ನೂರಾರು ಸೇನಾ ಪರಿಕರಗಳು ನೋಡುಗರನ್ನು ವಿಸ್ಮಿತಗೊಳಿಸುತ್ತವೆ.
ನಾಣ್ಯಗಳ ಪ್ರದರ್ಶನ ಇಂದು
ಮಡಿಕೇರಿ: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ನಗರದ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಮೇ 18ರಂದು ಬೆಳಿಗ್ಗೆ 9.30ಕ್ಕೆ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯು ‘ದಿ ಪ್ಯೂಚರ್ ಆಫ್ ಮ್ಯೂಸಿಯಂ ಇನ್ ರ್ಯಾಪಿಡ್ಲಿ ಚೇಜಿಂಗ್ ಕಮ್ಯುನಿಟೀಸ್’ ಎಂಬ ಘೋಷವಾಕ್ಯದಡಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಹುಣಸೂರು ಪಿ.ಕೆ.ಕೇಶವಮೂರ್ತಿ ಅವರು ಸಂಗ್ರಹಿಸಿಟ್ಟುಕೊಂಡಿರುವ ‘ಪ್ರಾಚೀನ ನಾಣ್ಯಗಳ ಪ್ರದರ್ಶನ’ವನ್ನು ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಉದ್ಘಾಟಿಸಲಿದ್ದಾರೆ. ಡಾ.ಎಂ.ಜಿ.ಪಾಟ್ಕರ್ ವಿಜಯಲಕ್ಷ್ಮೀ ಪಾಟ್ಕರ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ.ರೇಖಾ ತಿಳಿಸಿದ್ದಾರೆ.
‘ಸಂರಕ್ಷಿಸಿ ಪ್ರದರ್ಶಿಸಲಾಗುವುದು’
ಭಿನ್ನಗೊಂಡ ವಿಗ್ರಹಗಳು ದೇವರ ಮೂರ್ತಿಗಳು ಲೋಹದ ಕೆತ್ತನೆಗಳನ್ನು ಜನರು ಹೊಳೆಗೆ ಎಸೆಯದೇ ಅದನ್ನು ವಸ್ತುಸಂಗ್ರಹಾಲಯಕ್ಕೆ ನೀಡಿದ್ದಲ್ಲಿ ಅದನ್ನು ಅದೇ ಗ್ರಾಮದ ಹೆಸರಿನಲ್ಲಿ ಅಥವಾ ನೀಡಿದವರ ಹೆಸರಿನಲ್ಲಿಯೇ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿ ಪ್ರದರ್ಶಿಸಲಾಗುವುದು. ಇದರಿಂದ ಮುಂದಿನ ಪೀಳಿಗೆಗೆ ಕೊಡಗಿನ ಇತಿಹಾಸ ಉಳಿಯುತ್ತದೆ. ಸಾಮಾನ್ಯವಾಗಿ ದೇವಸ್ಥಾನಗಳ ಪುನರುಜ್ಜೀವನದ ಸಂದರ್ಭದಲ್ಲಿ ಭಿನ್ನಗೊಂಡ ಮೂರ್ತಿಗಳನ್ನು ಸಿಗುವ ವಸ್ತುಗಳನ್ನು ವಸ್ತುಸಂಗ್ರಹಾಲಯಗಳು ನೀಡಬೇಕು. ಸದ್ಯ ಕೋಟೆಯೊಳಗಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಸೇರಿದ ವಸ್ತುಸಂಗ್ರಹಾಲಯದಲ್ಲಿ ಸಾವಿರಕ್ಕೂ ಅಧಿಕ ಪ್ರಾಚ್ಯಾವಶೇಷಗಳಿವೆ. ಇಲಾಖೆಯಿಂದ ಪ್ರಕಟಿಸಲಾದ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಬಿ.ಪಿ.ರೇಖಾ ಕ್ಯೂರೇಟರ್ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.