ನಾಪೋಕ್ಲು: ಹೋಬಳಿ ಕೇಂದ್ರವೂ ಆಗಿರುವ, ಮಡಿಕೇರಿ ತಾಲ್ಲೂಕಿನ ಪ್ರಮುಖ ಪಟ್ಟಣ ಎನಿಸಿ ನಾಪೋಕ್ಲುವಿನಲ್ಲಿ ಬಸ್ ನಿಲ್ದಾಣ ಇಲ್ಲದೇ ಜನಸಾಮಾನ್ಯರು ಪರದಾಡುವ ಸ್ಥಿತಿ ಇದೆ.
ಇಲ್ಲಿ ವ್ಯವಸ್ಥಿತ ಬಸ್ ನಿಲ್ದಾಣ ಇಲ್ಲದಿರುವುದರಿಂದ ಬಸ್‌ನಿಲ್ದಾಣದಲ್ಲಿ ಒಂದೆರಡು ಬಸ್‌ಗಳು ಬಂದು ನಿಂತರಂತೂ, ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.
ವಿರಾಜಪೇಟೆಯಿಂದ, ಮಡಿಕೇರಿಯಿಂದ, ಭಾಗಮಂಡಲದಿಂದ ನಾಪೋಕ್ಲು ಸಂಪರ್ಕಿಸುವ 3 ರಸ್ತೆಗಳ ಸಂಗಮ ಸ್ಥಳವೇ ಇಲ್ಲಿ ಬಸ್ ನಿಲ್ದಾಣವಾಗಿದೆ.
ಸ್ಥಳದ ಕೊರತೆಯಿಂದ ಜನಸಾಮಾನ್ಯರು ಬಸ್‌ಗಾಗಿ ಪರದಾಡುವ ಪರಿಸ್ಥಿತಿ ಇದೆ. ಮಡಿಕೇರಿ ತಾಲ್ಲೂಕಿನ 2ನೇ ದೊಡ್ಡ ಪಟ್ಟಣವಾದ ನಾಪೋಕ್ಲುವಿಗೆ ಬಸ್‌ನಿಲ್ದಾಣಕ್ಕಾಗಿ ಹಲವು ವರ್ಷಗಳಿಂದ ಬೇಡಿಕೆ ಇದೆ. ನಿಲ್ದಾಣಕ್ಕಾಗಿ ಸೂಕ್ತ ಸ್ಥಳಾವಕಾಶದ ಕೊರತೆ ಇದ್ದು, ಸ್ಪಂದಿಸುವವರೇ ಇಲ್ಲದ್ದರಿಂದ ಸಮಸ್ಯೆ ಬಿಗಡಾಯಿಸಿದೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಏರುತ್ತಿದ್ದು, ನಿಲುಗಡೆಗೆ ಸ್ಥಳವಿಲ್ಲದೆ ವಾಹನ ಮಾಲೀಕರು ಪರದಾಡಿದರೆ ಬಸ್‌ನಿಲ್ದಾಣಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಇಚ್ಛಾಶಕ್ತಿ ಜನಪ್ರತಿನಿಧಿಗಳಿಗೂ ಇಲ್ಲದಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಇಲ್ಲಿರುವ ಕಿರಿದಾದ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ಸಾಲು, ಜನಸಾಮಾನ್ಯರಿಗೆ ನಡೆದಾಡಲು ಜಾಗವೇ ಇಲ್ಲದ ಸ್ಥಿತಿ, ಕಂಗಾಲಾದ ಶಾಲಾ ಮಕ್ಕಳು ಈ ದೃಶ್ಯಗಳು ನಿತ್ಯ ಕಂಡು ಬರುತ್ತಿವೆ. ಅದರಲ್ಲೂ ಮೊನ್ನೆ ಶುಕ್ರವಾರವಂತೂ ಜನರು ವಾಹನ ದಟ್ಟಣೆಯಿಂದ ಹೈರಣಾದರು.
ಶಾಲೆಗೆ ಮಕ್ಕಳು ತೆರಳುವ, ಹಿಂತಿರುಗುವ ವೇಳೆಗೆ ಪಟ್ಟಣದಲ್ಲಿ ಶಾಲಾ ವಾಹನಗಳು ಸೇರಿದಂತೆ ವಾಹನಗಳ ದಟ್ಟಣೆ ಅಧಿಕವಾಗಿರುತ್ತದೆ. ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಯಾಗುತ್ತಿದ್ದು, ನಿಯಂತ್ರಿಸುವವರು ಹರಸಾಹಸ ಪಡಬೇಕು. ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಮಾಲೀಕರು ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ ಸಮಸ್ಯೆ ಉದ್ಭವಿಸುತ್ತಿದೆ. ಅತ್ತ ಪೊಲೀಸ್ ಇಲಾಖೆ ವಾಹನಗಳ ದಟ್ಟಣೆ ನಿಯಂತ್ರಿಸುತ್ತಿಲ್ಲ. ಇತ್ತ ವಾಹನ ಮಾಲೀಕರೂ ಸಹಕರಿಸುತ್ತಿಲ್ಲ ಎಂಬುದು ಜನಸಾಮಾನ್ಯರ ದೂರು.
ಶುಕ್ರವಾರ ಸಂಜೆ ಪಟ್ಟಣದಲ್ಲಿ ವಾಹನ ದಟ್ಟಣೆ ವಿಪರೀತ ಎನ್ನಿಸುವಷ್ಟರಮಟ್ಟಿಗೆ ಕಂಡು ಬಂತು. ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವವರು ಇರಲಿಲ್ಲ.
ನಾಪೋಕ್ಲು ಪಟ್ಟಣದ ರಸ್ತೆ ವಿಸ್ತರಣೆ ಬಗ್ಗೆ ಗ್ರಾಮ ಪಂಚಾಯತಿ ಸಭೆಯಲ್ಲಿ ನಿರ್ಣಯ ಕೈಗೊಂಡು, ಅಧಿಕಾರಿಗಳಿಗೆ ನೋಟಿಸ್ ನೀಡಿದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಇತ್ತೀಚೆಗೆ ಗ್ರಾಮ ಪಂಚಾಯತಿ ಹೆಸರಿಗೆ ಆಗಿದ್ದು ಪ್ರಗತಿಯಲ್ಲಿದೆ. ಈ ಬಗ್ಗೆ ಒಂದೆರಡು ದಿನದಲ್ಲಿ ಶಾಸಕ ಎ.ಎಸ್.ಪೋನ್ನಣ್ಣ ಅವರನ್ನು ಪಂಚಾಯತಿ ವತಿಯಿಂದ ಭೇಟಿ ಮಾಡಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಮನವಿ ಮಾಡಲಾಗುವುದು.
ವನಜಾಕ್ಷಿ ರೇಣುಕೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ.
ನಾಪೋಕ್ಲುವಿನಲ್ಲಿ ಬಸ್ ನಿಲ್ದಾಣಕ್ಕೆ ಕ್ರಿಯಾಯೋಜನೆ ಮಾಡಲಾಗಿತ್ತು. ನೀಲನಕ್ಷೆ ಸಿದ್ಧವಾಗಿತ್ತು. ಆದರೆ, ಸ್ಥಳ ಗ್ರಾಮ ಪಂಚಾಯಿತಿಯ ಆರ್‌ಟಿಸಿಯಲ್ಲಿ ದಾಖಲಾಗಿರಲಿಲ್ಲ. ಬಸ್‌ನಿಲ್ದಾಣಕ್ಕೆ ಸರ್ವೆ ಕಾರ್ಯ ನಡೆದಿದೆ. ₹ 2 ಕೋಟಿ ವೆಚ್ಚದಲ್ಲಿ ಬಸ್‌ನಿಲ್ದಾಣವನ್ನು ನಿರ್ಮಿಸಲಾಗುವುದು. ಈಗಾಗಲೇ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ.
ಕಾಳೆಯಂಡ ಸಾಬಾ ತಿಮ್ಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ
ನಾಪೋಕ್ಲುವಿನಲ್ಲಿ ಈಗ ಬಸ್‌ನಿಲ್ಲಿಸಲು ಸ್ಥಳಾವಕಾಶದ ಕೊರತೆ ಇದೆ. ಜನಸಾಮಾನ್ಯರು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಿಂದ ಬೇತು ಗ್ರಾಮಕ್ಕೆ ತೆರಳುವ ಅಪ್ಪಚ್ಚ ಕವಿ ರಸ್ತೆಯು ಕೂಡ ವಾಹನಗಳ ದಟ್ಟಣೆಯಿಂದ ಸಂಚಾರ ಸಮಸ್ಯೆ ಎದುರಿಸುತ್ತಿದೆ. ಶೀಘ್ರ ಬಸ್ ನಿಲ್ದಾಣ ಆಗಬೇಕು.
ಗಣರಾಜ, ಸ್ಥಳೀಯ ನಿವಾಸಿ
ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ವಾಹನದಟ್ಟಣೆ ಅಧಿಕವಾಗಿ ಸಮಸ್ಯೆಯಾಗಿದೆ. ರಸ್ತೆ ಕಿರಿದಾಗಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಿಬ್ಬಂದಿಗಳ ಕೊರತೆಯೂ ಇದ್ದು ಮುಂದಿನ ದಿನದಲ್ಲಿ ಯಾವುದೇ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಮಂಜುನಾಥ್, ಪಿಎಸ್‌ಐ, ಪೊಲೀಸ್ ಠಾಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.