ADVERTISEMENT

ಕೊಡಗು | ಈಡೇರದ ಸಂಪರ್ಕ ಸೇತುವೆ ಕನಸು: ‘ಕಾವೇರಿ‘ ಪ್ರವಾಹ ಹೆಚ್ಚಿದರೆ ದೋಣಿಯೇ ಗತಿ

ದೋಣಿಕಡು ಕ್ರಮಿಸಲು ದೋಣಿಯೇ ಗತಿ, ಮಳೆಗಾಲದಲ್ಲಿ ಸಂಕಷ್ಟಕ್ಕೆ ಸಿಲುಕುವ ಜನರು

ಸಿ.ಎಸ್.ಸುರೇಶ್
Published 24 ಡಿಸೆಂಬರ್ 2021, 19:30 IST
Last Updated 24 ಡಿಸೆಂಬರ್ 2021, 19:30 IST
ದೋಣಿಕಡುವಿನಲ್ಲಿ ದೋಣಿ ಚಲಾಯಿಸುತ್ತಿರುವ ದೃಶ್ಯ (ಸಂಗ್ರಹ ಚಿತ್ರ)
ದೋಣಿಕಡುವಿನಲ್ಲಿ ದೋಣಿ ಚಲಾಯಿಸುತ್ತಿರುವ ದೃಶ್ಯ (ಸಂಗ್ರಹ ಚಿತ್ರ)   

ನಾಪೋಕ್ಲು: ಮಳೆಗಾಲದಲ್ಲಿ ಇಲ್ಲಿನ ಮಂದಿ ಸಂಕಷ್ಟಕ್ಕೆ ಈಡಾಗುತ್ತಾರೆ. ಕಾವೇರಿ ನೀರಿನ ಪ್ರವಾಹ ಹೆಚ್ಚಾದಾಗ ನದಿದಾಟಲು ದೋಣಿಯನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಸುತ್ತು ಬಳಸಿ ಸಾಗುವ ದಾರಿಯನ್ನು ಬಿಟ್ಟು ದೋಣಿಯಲ್ಲಿಯೇ ಸಾಗುವ ಗ್ರಾಮೀಣ ಜನರ ಬವಣೆಯ ಬದುಕು ಸೇತುವೆಯ ಕನಸಿನ ಜೊತೆಯಲ್ಲಿಯೇ ಮುಂದುವರಿಯುತ್ತಿದೆ.

ಸ್ಥಳೀಯರು ಹೇಳುವಂತೆ ಇದು ದೋಣಿಕಡು ಎಂಬುದು ಮಡಿಕೇರಿ ತಾಲ್ಲೂಕಿನ ಬೇಂಗೂರು ಗ್ರಾಮ ಪಂಚಾಯಿತಿ ಹಾಗೂ ಎಮ್ಮೆಮಾಡು ಗ್ರಾಮ ಪಂಚಾಯಿತಿ ಸಂಪರ್ಕಿಸುವ ಕಾವೇರಿ ನದಿ ಹರಿವಿನ ತಾಣ.

ದೋಣಿಕಡುವಿನಲ್ಲಿ ಮಳೆಯ ಬಿರುಸು ಹೆಚ್ಚಾದಾಗ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕುತ್ತಾರೆ. ಎಮ್ಮೆಮಾಡು ಗ್ರಾಮ ಪಂಚಾಯಿತಿ ಹಾಗೂ ಬೇಂಗೂರು ಗ್ರಾಮ ಪಂಚಾಯಿತಿ ನಡುವೆ ಕಾವೇರಿ ನದಿ ತಟದಲ್ಲಿನ ಕೂಡಕಂಡ ಕುಟುಂಬಸ್ಥರು ಪರಂಬು ಪೈಸಾರಿ ಮಂದಿ ಸೇರಿದಂತೆ ಸುಮಾರು 60ಕ್ಕೂ ಅಧಿಕ ಮನೆಗಳ ಮಂದಿ ಸಂಕಷ್ಟಕ್ಕೆ ಸಿಲುಕುತ್ತಾರೆ.

ADVERTISEMENT

ಎಮ್ಮೆಮಾಡು ಪಂಚಾಯಿತಿ ವ್ಯಾಪ್ತಿಯ ವಿವಿಧ ಕುಟುಂಬಗಳು ಕಾವೇರಿ ನದಿ ತಟದಲ್ಲಿ ವಾಸವಾಗಿವೆ. ಸಮೀಪದ ಚೇರಂಬಾಣೆಗೆ ಸಂಪರ್ಕ ಕಲ್ಪಿಸುವ ಬೇಂಗೂರು ಗ್ರಾಮದ ಮೂಲಕ ಸಂಚಾರ ವ್ಯವಸ್ಥೆ ಕೈಗೊಳ್ಳಲಾಗಿದೆ. ನದಿಯ ಎರಡೂ ಬದಿ ರಸ್ತೆಯಿದೆ. ಆದರೆ, ನದಿ ಕ್ರಮಿಸಲು ಸೇತುವೆಯೇ ಇಲ್ಲ. ಪಡಿಯಾಣಿ, ಎಮ್ಮೆಮಾಡು ಹಾಗೂ ಬೇಂಗೂರು ಗ್ರಾಮಗಳ ಕೂಲಿಕಾರ್ಮಿಕರು ಸಾರ್ವಜನಿಕರು 10 ರಿಂದ 15 ಕಿಲೋಮೀಟರ್ ಸುತ್ತಿ ಸಾಗುವ ಬದಲು ಮಳೆಗಾಲದಲ್ಲಿ ದೋಣಿಯ ಮೊರೆ ಹೋಗುವ ಸ್ಥಿತಿ ಉಂಟಾಗಿದೆ.

ಹಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಕಾವೇರಿ ನದಿ ದಾಟಲು ಗ್ರಾಮಸ್ಥರು ದೋಣಿ ಬಳಸುತ್ತಿದ್ದಾರೆ. ಜಿಲ್ಲಾಡಳಿತದಿಂದಲೂ ಹಾಗೂ ಗ್ರಾಮ ಪಂಚಾಯಿತಿಯಿಂದಲೂ ಮಳೆಗಾಲದಲ್ಲಿ ಸಂಪರ್ಕಕ್ಕೆ ದೋಣಿ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಬೇಂಗೂರು ಪಂಚಾಯಿತಿಯಿಂದ ಈ ಹಿಂದೆ ದೋಣಿ ಚಾಲಕನಿಗೆ ₹ 1,500 ಮಾಸಿಕ ವೇತನ ನೀಡಲಾಗುತ್ತಿತ್ತು. ಪ್ರತಿವರ್ಷ ಮಳೆಗಾಲದಲ್ಲಿ ವಿದ್ಯಾರ್ಥಿಗಳು ದೋಣಿಯಲ್ಲಿ ಸಾಗುತ್ತಿದ್ದಾರೆ.

ದೋಣಿಕಡು ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಸಂಘ–ಸಂಸ್ಥೆಗಳಿಂದ ಹಲವು ಪ್ರಯತ್ನಗಳಾಗಿವೆಯಾದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎನ್ನುತ್ತಾರೆ ಪುಲಿಕೋಟು ಗ್ರಾಮದ ಕರವಂಡ ಲವ ನಾಣಯ್ಯ.

ಎಂ.ಸಿ.ನಾಣಯ್ಯ ಕಾನೂನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಲವು ಸೇತುವೆಗಳ ನಿರ್ಮಾಣದ ಜೊತೆಗೆ ನಾಪೋಕ್ಲು ಬೇಂಗುನಾಡು ಸಂಪರ್ಕ ಸೇತುವೆ ನಿರ್ಮಿಸಲು ಮುತುವರ್ಜಿ ವಹಿಸಿದ್ದರು. ಭಾಗಮಂಡಲದಿಂದ ನಾಪೋಕ್ಲುವಿಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಎರಡು ಪಂಚಾಯಿತಿಗಳ ರಸ್ತೆ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿತ್ತು. ಜಿಲ್ಲಾ ಪಂಚಾಯಿತಿಯಿಂದ ರಸ್ತೆ ನಿರ್ಮಾಣವಾಗಿದೆ. ಆದರೆ, ಸೇತುವೆ ನಿರ್ಮಾಣದ ಕನಸು ನನಸಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಸೇತುವೆ ನಿರ್ಮಾಣವಾದಲ್ಲಿ ಗ್ರಾಮಸ್ಥರಿಗೆ ಸಮಯ ಹಾಗೂ ಅಂತರ ಕಡಿಮೆಯಾಗಲಿದೆ. ಸ್ವಲ್ಪ ಸಮಯದಲ್ಲಿ ದೋಣಿಯಲ್ಲಿ ತೆರಳುವ ಸ್ಥಳಕ್ಕೆ ವಾಹನದಲ್ಲಿ ಸುತ್ತಿ ಬಳಸಿ ತೆರಳಬೇಕಿದೆ. ನಾಲ್ಕುನಾಡಿನಿಂದ ಬೇಂಗುನಾಡಿಗೆ ಸುಮಾರು 15 ಕಿ.ಮೀ. ಅಂತರ ಕಡಿಮೆಯಾಗಲಿದೆ. ಗ್ರಾಮಸ್ಥರ ಬೇಡಿಕೆ ಈಡೇರಲು ಹಲವು ವರ್ಷಗಳೇ ಬೇಕು. ಅಷ್ಟರವರೆಗೆ ದೋಣಿಕಡು ಕ್ರಮಿಸಲು ದೋಣಿಯೇ ಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.