
ಸಿದ್ದಾಪುರ: ಚೆಟ್ಟಳ್ಳಿ ವ್ಯಾಪ್ತಿಯ ಕಾಫಿ ತೋಟದಲ್ಲಿ ಉರುಳಿಗೆ ಸಿಲುಕಿ ಹುಲಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಯಿತು.
ಚೆಟ್ಟಳ್ಳಿ ಸಮೀಪದ ಶ್ರೀಮಂಗಲ ಗ್ರಾಮದ ನಿವಾಸಿ ಕೆಚ್ಚೆಟ್ಟೀರ ಅಪ್ಪಯ್ಯ ಎಂಬುವರ ಕಾಫಿ ತೋಟದ ಬೇಲಿಯಲ್ಲಿ ಉರುಳಿಗೆ ಸಿಲುಕಿ ಅಂದಾಜು 8 ವರ್ಷ ಪ್ರಾಯದ ಗಂಡು ಹುಲಿ ಸಾವನ್ನಪ್ಪಿತ್ತು. ಈ ಬಗ್ಗೆ ಅರಣ್ಯ ಸಚಿವರು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಕೊಡಗಿನಲ್ಲಿ ಹುಲಿ ಸಾವು ಪ್ರಕರಣಕ್ಕೆ ಸಂಬಧಿಸದಂತೆ ಕಾಡಂಚಿನ ಜಮೀನುಗಳಲ್ಲಿ ಅಳವಡಿಸುವ ಉರುಳುಗಳನ್ನು ತೆರವುಗೊಳಿಸಬೇಕು ಇದಕ್ಕಾಗಿ ತಂಡಗಳನನು ರಚಿಸಿ ಶೋಧ ನಡೆಸಬೇಕು ಹಾಗೂ ವನ್ಯ ಜೀವಿಗಳು ಸಾವಿಗೀಡಾದರೆ ಎದುರಾಗುವ ಕಾನೂನು ತೊಡಕಿನ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.
ಚೆಟ್ಟಳ್ಳಿ ಪ್ರಕರಣದಲ್ಲಿ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಿದರು. ಈ ಹಿನ್ನೆಲೆಯಲ್ಲಿ ಎ.ಸಿ.ಎಫ್ ಎ.ಎ ಗೋಪಾಲ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಶ್ವಾನ ಸ್ಟೆಲ್ಲ ಹಾಗೂ ಸಿಬ್ಬಂದಿ ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡಸಿದರು.
ಹುಲಿ ಬಂದ ಜಾಗ ಹಾಗೂ ಸುಮಾರು ಎರಡು ಕಿ.ಮೀ ವ್ಯಾಪ್ತಿಯ ಜಾಗವನ್ನು ಪರಿಶೀಲಿಸಿದರು. ಆರೋಪಿಗಳ ಪತ್ತೆಗೆ ಡಿ.18 ರಂದು ಕಾರ್ಯಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.