ಗೋಣಿಕೊಪ್ಪಲು: ಪೊನ್ನಂಪೇಟೆ ಬಳಿಯ ರುದ್ರಬೀಡು ಹೊನ್ನಿಕೊಪ್ಪಲಿನ ಪ್ರಶಾಂತ್ ಎಂಬವರ ಕಾಫಿ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ.
ಕಾಫಿ ತೋಟದಲ್ಲಿ ಕಾಡುಹಂದಿ ಕಳೇಬರ ಪತ್ತೆಯಾಗಿದ್ದು ಎರಡು ಮೂರು ದಿನಗಳ ಹಿಂದೆ ಅದನ್ನು ಹುಲಿ ಬೇಟೆಯಾಡಿರಬಹುದು ಎಂದು ಶಂಕಿಸಲಾಗಿದೆ. ಹಂದಿ ಕಳೇಬರ ಇರುವ ಸ್ಥಳದಲ್ಲಿ ಹುಲಿ ಶನಿವಾರ ಕಾಣಿಸಿಕೊಂಡಿರುವುದು ಇದಕ್ಕೆ ಪುಷ್ಟಿ ನೀಡಿದೆ. ಕಾಡು ಹಂದಿಯನ್ನು ಅರ್ಧ ತಿಂದು ಹಾಕಿದೆ. ಕಾಫಿ ತೋಟದ ಮಾಲೀಕ ಪ್ರಶಾಂತ್ ಶನಿವಾರ ಬೆಳಿಗ್ಗೆ ಕಾಫಿ ತೋಟಕ್ಕೆ ಭೇಟಿ ನೀಡಿದ್ದಾಗ ಹುಲಿ ಸುಳಿವು ಅರಿತು ಓಡಿ ಬಂದಿದ್ದಾರೆ.
ಸೆರೆಗೆ ಕಾರ್ಯಾಚರಣೆ: ಈ ಬಗ್ಗೆ ಮಾಹಿತಿ ನೀಡಿದ ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್ ಮೂರು ದಿನಗಳಿಂದಲೂ ಇದೇ ಭಾಗದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದೆ. ಇದನ್ನು ಸೆರೆ ಹಿಡಿಯುವುದಕ್ಕೆ ಮೇಲಧಿಕಾರಿಗಳು ಅದೇಶ ನೀಡಿದ್ದಾರೆ. ಮತ್ತಿಗೋಡು ಶಿಬಿರದ ಆನೆಗಳು ದಸರಾಕ್ಕೆ ತೆರಳಿದ್ದರಿಂದ ಕಾರ್ಯಾಚರಣೆ ತಡವಾಯಿತು. ಇದೀಗ ಆನೆಗಳು ಮರಳಿರುವುದರಿಂದ ಭಾನುವಾರದಿಂದ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.