ADVERTISEMENT

ಸೆರೆ ಸಿಕ್ಕ ಹುಲಿ ನರಭಕ್ಷಕವೇ?: ಸಾರ್ವಜನಿಕರ ಸಂಶಯ

ಹುಲಿ ದಾಳಿಗೆ ಇಬ್ಬರ ಬಲಿ, ಸ್ಥಳೀಯರ ಆತಂಕ , ಮಂಚಳ್ಳಿಯಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 14:40 IST
Last Updated 21 ಫೆಬ್ರುವರಿ 2021, 14:40 IST
ಪೊನ್ನಂಪೇಟೆಯ ಶ್ರೀಮಂಗಲದಲ್ಲಿ ಹುಲಿ ಸೆರೆ ಕಾರ್ಯಾಚರಣೆಗೆ ತಂದಿದ್ದ ಬೋನ್
ಪೊನ್ನಂಪೇಟೆಯ ಶ್ರೀಮಂಗಲದಲ್ಲಿ ಹುಲಿ ಸೆರೆ ಕಾರ್ಯಾಚರಣೆಗೆ ತಂದಿದ್ದ ಬೋನ್   

ಪೊನ್ನಂಪೇಟೆ: ಮಂಚಳ್ಳಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಹೆಣ್ಣು ಹುಲಿಯನ್ನು (ಅಂದಾಜು 10 ವರ್ಷ ಪ್ರಾಯ) ಭಾನುವಾರ ಸಂಜೆಯ ವೇಳೆಗೆ ಸೆರೆ ಹಿಡಿದಿದ್ದರೂ ಸ್ಥಳೀಯರ ಆತಂಕ ಮಾತ್ರವಾಗಿಲ್ಲ. ಇದೇ ಹುಲಿಯೇ ಇಬ್ಬರ ಮೇಲೆ ದಾಳಿ ನಡೆಸಿದ್ದು ಎಂಬುದನ್ನು ಅರಣ್ಯಾಧಿಕಾರಿಗಳೂ ಖಚಿತಪಡಿಸಿಲ್ಲ. ಹೀಗಾಗಿ, ದಕ್ಷಿಣ ಕೊಡಗಿನ ಜನರಲ್ಲಿ ಆತಂಕ ಉಳಿದಿದೆ.

ಹೆಣ್ಣು ಹುಲಿಯನ್ನು, ಹಿಡಿದು ಮೈಸೂರು ಹುಲಿ ಪುನಶ್ಚೇತನ ಶಿಬಿರಕ್ಕೆ ರವಾನಿಸಲಾಗಿದೆ. ಆದರೆ, ಈ ಹುಲಿ ನರಭಕ್ಷಕ ಎಂಬುವುದು ಧೃಡಪಟ್ಟಿಲ್ಲ. ಹುಲಿಗೆ ಬಲಿಯಾದ ಅಯ್ಯಪ್ಪ ಎಂಬ ಬಾಲಕನ ಮೇಲೆ ದಾಳಿ ನಡೆಸಿದ್ದ 48 ಗಂಟೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಸಾಕಾನೆ ಸಹಕಾರದಲ್ಲಿ ಕೂಂಬಿಂಗ್ ನಡೆಸಿ ಹುಲಿ ಸೆರೆ ಹಿಡಿಯಲಾಗಿದೆ. ನರಭಕ್ಷಕ ಹುಲಿ ಎಂಬುವುದು‌ ಧೃಡ ಪಟ್ಟಿಲ್ಲ ಖಚಿತವಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಹೇಗಿತ್ತು ಕಾರ್ಯಾಚರಣೆ?:

ADVERTISEMENT

ಭಾನುವಾರ ಬೆಳಿಗ್ಗೆಯಿಂದಲೂ ಕಾರ್ಯಾಚರಣೆ ನಡೆದರೂ ಅರಣ್ಯ ಇಲಾಖೆಯ ತಂಡದ ಕಣ್ಣಿಗೆ ಹುಲಿ ಬಿದ್ದಿರಲಿಲ್ಲ. ಆದರೆ, ಸಂಜೆ ವೇಳೆಗೆ ಮಂಚಳ್ಳಿಯ ಕಾಫಿ ತೋಟದಲ್ಲಿ ಅವಿತಿದ್ದ ಹೆಣ್ಣು ಹುಲಿ ಸೆರೆ ಹಿಡಿಯಲಾಯಿತು. ಸ್ಥಳದಲ್ಲಿದ್ದ ವೈದ್ಯ ಮುಜೀಬ್‌ ಅವರು ಹುಲಿಗೆ ಅರಿವಳಿಕೆ ಚುಚ್ಚುಮದ್ದು ಹಾರಿಸಿ, ಪ್ರಜ್ಞೆ ತಪ್ಪಿಸಿದ ಬಳಿಕ ಬಲೆ ಹಾಕಿ ಹುಲಿ ಸೆರೆ ಹಿಡಿಯಲಾಯಿತು. ನಂತರ, ಬೋನಿನಲ್ಲಿ ಹಾಕಿ ಮೈಸೂರಿಗೆ ರವಾನೆ ಮಾಡಲಾಯಿತು. ಮತ್ತಿಗೋಡು ಶಿಬಿರದ ಎರಡು ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.

ಶನಿವಾರ ಸಂಜೆ ಸೌದೆ ತರಲು ತೋಟಕ್ಕೆ ತೆರಳಿದ್ದ ಕುಮಟೂರು ಗ್ರಾಮದ ಪಣಿ ಯರವರ ಅಯ್ಯಪ್ಪ (14) ಎಂಬ ಬಾಲಕನ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿತ್ತು. ಇಭಾನುವಾರ ಬೆಳಿಗ್ಗೆ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಕಾರ್ಮಿಕ ಮಹಿಳೆ ಚಿಣ್ಣಿ (60) ಅವರ ಮೇಲೆ ದಾಳಿ ನಡೆಸಿ, ಬಲಿ ಪಡೆದಿತ್ತು. ಪುತ್ರ ಅಪ್ಪು ಮತ್ತು ಪತಿ ಬೊಳಕ ಕಣ್ಣ ಮುಂದೆಯೇ ಈ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ಅಣಬೆ ಹುಡುಕಲು ಹೋಗಿದ್ದಾಗ ಘಟನೆ ನಡೆದಿದೆ. ದಾಳಿ ನಡೆಸಿ ಹುಲಿ ದೇಹವನ್ನು ಎಳೆದೊಯ್ಯುತ್ತಿದ್ದ ಸಂದರ್ಭ ಇತರ ಕಾರ್ಮಿಕರು ಕಿರುಚಿಕೊಂಡಾಗ ಹುಲಿ ಓಡಿಹೋಗಿದೆ. ದೇಹವನ್ನು ರಸ್ತೆಯಿಂದ ಸುಮಾರು 50 ಮೀಟರ್‌ ದೂರಕ್ಕೆ ಎಳೆದೊಯ್ದಿತ್ತು. ಮೃತ ಕಾರ್ಮಿಕ ಮಹಿಳೆ ಚಿಣ್ಣಿ ಅವರು ಗ್ರಾಮದ ಆಲೇಮಾಡ ಸೋಮಣ್ಣ ಬೋಪಣ್ಣ ಅವರ ಲೈನ್‌ಮನೆಯಲ್ಲಿ ವಾಸವಾಗಿದ್ದರು. ಮಹಿಳೆಯ ತಲೆಯ ಹಿಂಬಾಗಕ್ಕೆ ದಾಳಿಯಾಗಿರುವುದು ಕಂಡು ಬಂದಿದೆ.

ಅರಣ್ಯಾಧಿಕಾರಿಗಳಿಗೆ ತರಾಟೆ:‌
ಕಳೆದ ಐದು ತಿಂಗಳಿಂದ ಈ ಭಾಗದಲ್ಲಿ ಹುಲಿಯು ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಇಬ್ಬರು ಬಲಿಯಾಗಬೇಕಾಯಿತು ಎಂದು ಆರೋಪಿಸಿದ ರೈತ ಸಂಘದ ಕಾರ್ಯಕರ್ತರು, ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ನರಹಂತಕ ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಆಗ್ರಹಿಸಿದರು. ಹುಲಿ ಸೆರೆ ಹಿಡಿಯಲು ವಿಫಲವಾದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಬೆಳಿಗ್ಗೆ ಎಚ್ಚರಿಕೆ ನೀಡಿದ್ದರು.

ಶನಿವಾರ ಸಂಜೆ ಸಾವನ್ನಪ್ಪಿದ ಯುವಕನ ಮೃತದೇಹವನ್ನು ಶ್ರೀಮಂಗಲ ಬಸ್ ನಿಲ್ದಾಣದಲ್ಲಿಟ್ಟು ಸೂಕ್ತ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದರು. ಶ್ರೀಮಂಗಲ ಪಟ್ಟಣದಲ್ಲಿ 1 ಗಂಟೆಗಳ ಕಾಲ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಮೃತ ಯುವಕನ ಅಂತ್ಯ ಸಂಸ್ಕಾರಕ್ಕೆ ₹ 20,000 ಹಣವನ್ನು ಅರಣ್ಯ ಅಧಿಕಾರಿಗಳ ಮೂಲಕ ಕೊಡಿಸಿದರು. ಮೃತ ಯುವಕನ ಕುಟುಂಬಕ್ಕೆ ಸರ್ಕಾರದಿಂದ ₹ 7.5 ಲಕ್ಷ ಪರಿಹಾರ ಹಣ ವಿತರಿಸುದಾಗಿ ಅರಣ್ಯ ಅಧಿಕಾರಿಗಳು ಭರವಸೆ ನೀಡಿದರು.

ಕುಮಟೂರು, ಶ್ರೀಮಂಗಲ, ಟಿ. ಶೆಟ್ಟಿಗೇರಿ, ಹರಿಹರ, ಬೆಳ್ಳೂರು, ವೆಸ್ಟ್ ನೆಮ್ಮಲೆ ಸುತ್ತಮುತ್ತಲಿ ಹುಲಿ ಓಡಾಟ ನಡೆಸಿತ್ತು.
ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹುಲಿ ದಾಳಿಗೆ ಮೃತಪಟ್ಟ ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

ಅರಣ್ಯ ಸಚಿವರ ರಾಜೀನಾಮೆಗೆ ಕೊಡಗು ಜೆಡಿಎಸ್ ಒತ್ತಾಯ
ಮಡಿಕೇರಿ: ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ ಹುಲಿ ದಾಳಿಗೆ ಎರಡು ಜೀವ ಬಲಿಯಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿರುವ ಜಾತ್ಯತೀತ ಜನತಾದಳದ ಜಿಲ್ಲಾ ಅಧ್ಯಕ್ಷ ಕೆ.ಎಂ.ಗಣೇಶ್, ಅರಣ್ಯ ಸಚಿವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನಿರಂತರ ಹುಲಿ ಮತ್ತು ಕಾಡಾನೆಗಳ ದಾಳಿಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ಮೈಮರೆತದ್ದೇ ಎರಡು ಅಮಾಯಕ ಜೀವಗಳು ಬಲಿಯಾಗಲು ಕಾರಣವೆಂದು ಆರೋಪಿಸಿದ್ದಾರೆ.

ಇತ್ತೀಚೆಗಷ್ಟೇ ಮಡಿಕೇರಿಗೆ ಆಗಮಿಸಿದ್ದ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಅರಣ್ಯ ಭವನದ ನಾಲ್ಕು ಗೋಡೆಗಳ ಮಧ್ಯ ಅಧಿಕಾರಿಗಳ ಕಾಟಾಚಾರದ ಸಭೆ ನಡೆಸಿ ಹೋಗಿದ್ದಾರೆ. ಜಿಲ್ಲೆಯ ಜನ ವನ್ಯಜೀವಿಗಳ ದಾಳಿಯಿಂದ ಅನುಭವಿಸುತ್ತಿರುವ ಕಷ್ಟ, ನಷ್ಟಗಳ ಬಗ್ಗೆ ಸಚಿವರು ಯಾವುದೇ ಗಂಭೀರ ಚಿಂತನೆ ಮಾಡಿಲ್ಲ. ಗ್ರಾಮಸ್ಥರು ಹಾಗೂ ಬೆಳೆಗಾರರೊಂದಿಗೆ ಸಭೆ ನಡೆಸಿ ಕಾಡು ಪ್ರಾಣಿಗಳ ಹಾವಳಿಯ ಕುರಿತು ಅಭಿಪ್ರಾಯ ಸಂಗ್ರಹಿಸದೆ ಕೇವಲ ಅಧಿಕಾರಿಗಳಿಂದ ಮಾಹಿತಿ ಪಡೆದ ತೆರಳಿರುವ ಅರಣ್ಯ ಸಚಿವರು ಶ್ರೀಮಂಗಲದ ಘಟನೆಗೆ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿರುವ ಗಣೇಶ್, ಸಚಿವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ತಕ್ಷಣ ಸರ್ಕಾರ ಎಚ್ಚೆತ್ತುಕೊಂಡು ವನ್ಯಜೀವಿಗಳ ದಾಳಿ ತಡೆಗೆ ಶಾಶ್ವತ ಪರಿಹಾರವನ್ನು ಘೋಷಿಸಿ ಯೋಜನೆಯನ್ನು ರೂಪಿಸದಿದ್ದಲ್ಲಿ ಗ್ರಾಮಸ್ಥರು, ಬೆಳೆಗಾರರು, ವಿವಿಧ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಜೆಡಿಎಸ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.