ಮಡಿಕೇರಿ: ‘ಎಲ್ಲಾ ಅರ್ಹ ದಂಪತಿಗಳು ಕುಟುಂಬ ಕಲ್ಯಾಣ ವಿಧಾನವನ್ನು ಅನುಸರಿಸಿ ಚಿಕ್ಕ ಕುಟುಂಬವನ್ನು ರೂಪಿಸಿಕೊಳ್ಳಬೇಕು’ ಎಂದು ಮಡಿಕೇರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ಯು.ಚೇತನ್ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಜನಸಂಖ್ಯೆ ದಿನಾಚರಣೆಯಲ್ಲಿ ಅವರು ಮಾತನಾಡಿದರು.
1987ರ ಜುಲೈ 11 ರಂದು ವಿಶ್ವ ಜನಸಂಖ್ಯೆ 500 ಕೋಟಿ ತಲುಪಿದ ಕಾರಣ ಈ ದಿನ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. 2 ಮಕ್ಕಳನ್ನು ಹೊಂದಿರುವ ದಂಪತಿಗಳು ಕಡ್ಡಾಯವಾಗಿ ಶಾಶ್ವತ ಕುಟುಂಬ ಕಲ್ಯಾಣ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ಅರ್ಹ ದಂಪತಿಗಳು ಕುಟುಂಬ ಕಲ್ಯಾಣ ವಿಧಾನವನ್ನು ಅನುಸರಿಸಿ ಚಿಕ್ಕ ಕುಟುಂಬವನ್ನು ರೂಪಿಸಿಕೊಳ್ಳಬೇಕು ಈ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವಿರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ದಯಾನಂದ ಅವರು ವಿಶ್ವ ಜನಸಂಖ್ಯಾ ದಿನಾಚರಣೆಯ ಉದ್ದೇಶ, ಇತಿಹಾಸ, ಜನಸಂಖ್ಯಾ ಸ್ಪೋಟದಿಂದ ಉಂಟಾಗುವ ಪರಿಣಾಮಗಳು, ವಸತಿ ಮತ್ತು ಆಹಾರ ಸಮಸ್ಯೆ, ನಿರುದ್ಯೋಗ, ಬಡತನ, ಹಸಿವು, ಆರ್ಥಿಕ ಅಸಮಾನತೆ, ಅನಕ್ಷರತೆ, ನೈಸರ್ಗಿಕ ಸಂಪನ್ಮೂಲಗಳ ಕೊರತೆ ಮೊದಲಾದ ವಿಷಯಗಳನ್ನು ಕುರಿತು ಮಾತನಾಡಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ ಮಾತನಾಡಿ, ‘ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸಮುದಾಯ ಸಂಸ್ಥೆಗಳ ವತಿಯಿಂದ ಜಾಗೃತಿ ಅಭಿಯಾನಗಳು, ವಿಶ್ವವಿದ್ಯಾಲಯಗಳ ಸಹಕಾರದಿಂದ ಸಾರ್ವಜನಿಕ ಉಪನ್ಯಾಸಗಳು, ಚರ್ಚೆಗಳು, ಆರೋಗ್ಯ ಶಿಬಿರಗಳು ನಡೆಯುತ್ತಿವೆ ಎಂದರು.
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ್, ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ದೇಚಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.