ADVERTISEMENT

ಕೊಡವರಿಂದ ‘ಎಡ್ಮ್ಯಾರ್’ ಆಚರಣೆ

ಸಿಎನ್‌ಸಿಯಿಂದ ಎಡ್ಮ್ಯಾರ್ ಹೊಸ ವರ್ಷಾಚರಣೆ : ಬೆಟ್ಟತ್ತೂರು ಗ್ರಾಮದಲ್ಲಿ ಉಳುಮೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 15:52 IST
Last Updated 13 ಏಪ್ರಿಲ್ 2025, 15:52 IST
ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಎಡ್ಮ್ಯಾರ್ ಹಬ್ಬದ ಪ್ರಯುಕ್ತ ಭಾನುವಾರ ಬೆಟ್ಟತ್ತೂರು ಗ್ರಾಮದಲ್ಲಿ ಭೂಮಿಯನ್ನು ಉಳುಮೆ ಮಾಡಿದರು
ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಎಡ್ಮ್ಯಾರ್ ಹಬ್ಬದ ಪ್ರಯುಕ್ತ ಭಾನುವಾರ ಬೆಟ್ಟತ್ತೂರು ಗ್ರಾಮದಲ್ಲಿ ಭೂಮಿಯನ್ನು ಉಳುಮೆ ಮಾಡಿದರು   

ಮಡಿಕೇರಿ: ಕೊಡವರ ಹೊಸ ವರ್ಷ ‘ಎಡ್ಮ್ಯಾರ್’ ಆಚರಣೆ ಏ. 14ರಂದು ನಡೆಯಲಿದ್ದು, ಎಲ್ಲೆಡೆ ಸಿದ್ಧತೆಗಳು ಭರದಿಂದ ನಡೆದಿದೆ. ಒಂದು ದಿನ ಮುಂಚಿತವಾಗಿಯೇ ಕೊಡವ ನ್ಯಾಷನಲ್ ಕೌನ್ಸಿಲ್‌ ಹಬ್ಬದ ಜನಪದೀಯ ಆಚರಣೆಗಳನ್ನು ಮಾಡಿ ಗಮನ ಸೆಳೆದಿದೆ.

ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬೇಂಗ್ ನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಉಳುಮೆ ಮಾಡುವ ಮೂಲಕ ಹಬ್ಬಕ್ಕೆ ಸಾಂಪ್ರದಾಯಿಕ ಚಾಲನೆ ನೀಡಿತು.

ಗ್ರಾಮದ ಕೃಷಿಕ ಕೂಪದಿರ ಎನ್.ಮೋಹನ್ ಅವರ ಗದ್ದೆಯಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಜೋಡೆತ್ತು ಕೆಂಪಯ್ಯ ಹಾಗೂ ಕರಿಯನ ಮೂಲಕ ಗದ್ದೆ ಉಳುಮೆ ಮಾಡಿ ಭೂಮಿಗೆ ನಮನ ಸಲ್ಲಿಸಿದರು.

ADVERTISEMENT

ಈ ವೇಳೆ ಮಾತನಾಡಿದ ಅವರು, ‘ಎಡ್ಮ್ಯಾರ್ –1 ಏ. 14ರಂದು ಆದರೂ ಕೊಡವ ಸಂಪ್ರದಾಯದಂತೆ ಕೊಡವರು ಸೋಮವಾರದಂದು ಎತ್ತುಗಳಿಂದ ಉಳುಮೆ ಮಾಡುವುದಿಲ್ಲ. ಈ ಕಾರಣಕ್ಕಾಗಿ ಒಂದು ದಿನ ಮುಂಚಿತವಾಗಿ ಉಳುಮೆ ಮಾಡಿ ಕೊಡವ ಬುಡಕಟ್ಟು ಜನಾಂಗ ಭೂಮಿ ಮತ್ತು ಪ್ರಕೃತಿಯೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧದ ಕುರಿತು ಸಾಕ್ಷೀಕರಿಸಲಾಯಿತು’ ಎಂದು  ತಿಳಿಸಿದರು.

ಕೊಡವ ಬುಡಕಟ್ಟು ಜನರು ಸೌರ ಕ್ಯಾಲೆಂಡರ್‌ನ್ನು ಅನುಸರಿಸುತ್ತಾರೆ. ಹೊಸ ವರ್ಷದ ಎಡ್ಮ್ಯಾರ್ –1 ಸೇರಿದಂತೆ ಕೊಡವರ ಸಾಂಪ್ರದಾಯಿಕ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಸಿಎನ್‌ಸಿ ಸಂಘಟನೆ ಮಾಡಿಕೊಂಡು ಬರುತ್ತಿದೆ ಎಂದರು.

ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ, ಸಂವಿಧಾನದ ಆರ್ಟಿಕಲ್ 244, 371 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಸ್ವಯಂ ಆಡಳಿತ ನೀಡಬೇಕು. ಕೊಡವ ಪ್ರಾಂತ್ಯದ ಪ್ರಾಚೀನ ಜನಾಂಗೀಯ ಸಮುದಾಯವಾಗಿ ಅಂತರಾಷ್ಟ್ರೀಯ ಸಮಾವೇಶದ ಅಡಿಯಲ್ಲಿ ಕೊಡವರಿಗೆ ವಿಶ್ವ ರಾಷ್ಟ್ರಸಂಸ್ಥೆಯಲ್ಲಿ ಮಾನ್ಯತೆ ಕಲ್ಪಿಸಬೇಕು. ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಸಮುದಾಯವನ್ನು ಸಂವಿಧಾನದ 340 ಮತ್ತು 342ನೇ ವಿಧಿಗಳ ಅಡಿಯಲ್ಲಿ ಎಸ್‌ಟಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಕೊಡವ ಬುಡಕಟ್ಟಿನ ಕೊಡವ ಮಾತೃಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಅಳವಡಿಸಬೇಕು. ಕೊಡವ ಸಂಸ್ಕೃತಿ-ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಗಳ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಧಾರ್ಮಿಕ ‘ಸಂಸ್ಕಾರ’ ಗನ್ ವಿನಾಯಿತಿ ಸವಲತ್ತು ಮುಂದುವರೆಯಬೇಕು ಮತ್ತು ಸಿಖ್ಖರ ಕಿರ್ಪಾನ್ ಮಾದರಿಯಲ್ಲಿ ಸಂವಿಧಾನದ 25 ಮತ್ತು 26ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಬೇಕು ಎಂದು ಆಗ್ರಹಿಸಿದರು.

ಸಿಕ್ಕಿಂನ ಬೌದ್ಧ ಸನ್ಯಾಸಿಗಳ ಸಮುದಾಯಕ್ಕೆ ‘ಸಂಘ’ ಅಮೂರ್ತ ಕ್ಷೇತ್ರದ ರೀತಿಯಲ್ಲಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿ ಇದೇ ವೇಳೆ ಎನ್.ಯು.ನಾಚಪ್ಪ ಅವರು ಹಕ್ಕೊತ್ತಾಯ ಮಂಡಿಸಿದರು.

ಕೂಪದಿರ ಒಕ್ಕದ ಅಧ್ಯಕ್ಷೆ ಕೂಪದಿರ ಪುಷ್ಪಾ ಮುತ್ತಪ್ಪ, ಕೂಪದಿರ ಗಂಗವ್ವ, ಕೂಪದಿರ ಕಾವೇರಿಯಮ್ಮ, ಕೂಪದಿರ ಭವ್ಯಾ ಮಾಚಯ್ಯ, ಕೂಪದಿರ ನಯನಾ ಯಶವಂತ, ಪಟ್ಟಮಾಡ ಕುಶ, ಕೂಪದಿರ ಮೋಹನ್, ಮಂದಪಂಡ ಮನೋಜ್, ರೋಷನ್, ಕೂಪದಿರ ಪ್ರಣಾಮ್, ಯಶವಂತ ಕುಮಾರ್ ಗದ್ದೆ ಉಳುಮೆ ಸಂದರ್ಭ ಭಾಗವಹಿಸಿದರು.

ಇಂದು ಪಂಜಿನ ಮೆರವಣಿಗೆ

ಎಡ್ಮ್ಯಾರ್ 1 ಹೊಸ ವರ್ಷಾಚರಣೆ ಪ್ರಯುಕ್ತ ಸಿಎನ್‌ಸಿ ಸಂಘಟನೆ ವತಿಯಿಂದ ಏ.14 ರಂದು ಸಂಜೆ 6.30ಕ್ಕೆ ಗೋಣಿಕೊಪ್ಪಲಿನ ಆರ್‌ಎಂಸಿ ಯಾರ್ಡ್‌ನಿಂದ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.