ADVERTISEMENT

Kodagu Rains | ಮೇ ತಿಂಗಳಿನಲ್ಲೇ ನಡುಗಿಸುವಂತಹ ಮಳೆ

ಗಾಳಿ, ಮಳೆಯ ಅಬ್ಬರಕ್ಕೆ ನಲುಗಿದ ಕೊಡಗು

​ಪ್ರಜಾವಾಣಿ ವಾರ್ತೆ
Published 26 ಮೇ 2025, 3:50 IST
Last Updated 26 ಮೇ 2025, 3:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿಯೇ ಮಳೆ, ಗಾಳಿ ಅಬ್ಬರಿಸುತ್ತಿದೆ. ಜೂನ್, ಜುಲೈ, ಆಗಸ್ಟ್‌ ತಿಂಗಳಿನಲ್ಲಿ ಜನರು ಅನುಭವಿಸುತ್ತಿದ್ದ ಮಳೆಯ ಭೀಕರ ಸ್ವರೂಪವನ್ನು ಮೇ ತಿಂಗಳಿನಲ್ಲೇ ಕಾಣುವಂತಾಗಿದೆ. ಅಕ್ಷರಶಃ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿರುವುದರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌) ಕೊಡಗಿನತ್ತ ಪ್ರಯಾಣ ಬೆಳೆಸಿದೆ.

ಭಾರಿ ಮಳೆ ಬೀಳುತ್ತಿರುವುದರಿಂದ ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಮೇ 26 ಮತ್ತು 27ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

ADVERTISEMENT

ಎರಡೇ ದಿನಕ್ಕೆ 197 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಎಲ್ಲೆಂದರಲ್ಲಿ ಮರಗಳು ತರಗಲೆಗಳಂತೆ ಬುಡಮೇಲಾಗುತ್ತಿವೆ. ಯಾವ ರಸ್ತೆಯಲ್ಲಿ ಸಂಚರಿಸುವುದಕ್ಕೂ ಭಯಪಡುವ ಸನ್ನಿವೇಶ ಕೇವಲ ಎರಡೇ ದಿನದ ಮಳೆ ಸೃಷ್ಟಿಸಿದೆ.

ಮೇ ತಿಂಗಳಿನಲ್ಲೇ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿ ಉದ್ಯಾನ ಸಂಪೂರ್ಣ ಮುಳುಗಡೆಯಾಗಿದೆ. ಬಲಮುರಿಯಲ್ಲಿ ಕಿರುಸೇತುವೆಯೂ ಮುಳುಗಡೆಯಾಗಿದೆ. ದುಬಾರೆಯಲ್ಲಿ ನೀರಿನ ಹರಿವು ಇದ್ದಕ್ಕಿದ್ದಂತೆ ಏರಿಕೆಯಾಗಿದ್ದು, ರ‍್ಯಾಫ್ಟಿಂಗ್ ಮತ್ತೆ ಆರಂಭವಾಗಿದೆ.

ಮತ್ತೊಂದು ಕಡೆ ದಕ್ಷಿಣ ಕೊಡಗಿನಲ್ಲಿ ಕೀರೆಹೊಳೆ ತುಂಬಿ ಹರಿಯಲಾರಂಭಿಸಿದೆ. ವಿರಾಜಪೇಟೆಯಲ್ಲಿ ಮಳೆ ಪ್ರತಿ ನಿಮಿಷಕ್ಕೂ ಭಾರಿ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರಿಂದ ಎಚ್ಚೆತ್ತ ಸ್ಥಳೀಯ ಆಡಳಿತ ಕಾಳಜಿ ಕೇಂದ್ರ ತೆರೆಯುಲು ಸರ್ವ ಸಿದ್ಧತೆ ನಡೆಸಿದೆ.

ಒಂದೇ ಸಮನೆ ಬೀಳುತ್ತಿರುವ ಭಾರಿ ಮಳೆಯಿಂದ ಜಿಲ್ಲೆಯ ನದಿ, ತೊರೆಗಳೆಲ್ಲ ಒಮ್ಮೆಗೆ ಉಕ್ಕಿ ಹರಿಯಲಾರಂಭಿಸಿದ್ದು, ಪ್ರವಾಹ ಭೀತಿ ಸೃಷ್ಟಿಸಿದೆ. ಇದಕ್ಕಿದ್ದಂತೆ ಎದುರಾದ ಈ ಪರಿಸ್ಥಿತಿ ಕಂಡು ನದಿ ತೀರದ ಜನರು ಅಕ್ಷರಶಃ ಆತಂಕಗೊಂಡಿದ್ದಾರೆ.

ಈಗಾಗಲೇ ಬರೆ ಕುಸಿತದಂತಹ ಘಟನೆಗಳು ಕಂಡು ಬರತೊಡಗಿವೆ. ಎತ್ತರದ ಪ್ರದೇಶ ಮತ್ತು ಕೆಳಗಿನ ಇಳಿಜಾರು ಪ್ರದೇಶಗಳಲ್ಲಿ ವಾಸಿಸುವವರಲ್ಲಿ ನಡುಕ ಸೃಷ್ಟಿಯಾಗಿದೆ.

ಮಡಿಕೇರಿಯನ್ನು ಮೈಸೂರು ಮತ್ತು ಮಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಗಳು ಬೀಳುತ್ತಿದ್ದು, ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಬೆಳಿಗ್ಗೆ, ಮಧ್ಯಾಹ್ನ ಅಲ್ಲಲ್ಲಿ ಮರಗಳು ಬಿದ್ದಿದ್ದವು. ಈಗ ಬಸವನಹಳ್ಳಿಯ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು.

ಮಡಿಕೇರಿಗೆ ಕುಡಿಯುವ ನೀರು ಪೂರೈಸುವ ಕೂಟುಹೊಳೆಯು ಮೇ ತಿಂಗಳಿನಲ್ಲೇ ತುಂಬಿ ಕೋಡಿ ಬಿದ್ದಿದೆ. ಮುಳಿಯ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ. ರಾತ್ರಿಯಾದರೂ ಮಳೆ ನಿಯಂತ್ರಣಕ್ಕೆ ಬಾರದಿರುವುದರಿಂದ ಜನಮಾನಸದಲ್ಲಿ ಆತಂಕ ಸೃಷ್ಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.