
ಸೋಮವಾರಪೇಟೆ: ಪಟ್ಟಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಒಟ್ಟು 81ಕ್ಕೂ ಹೆಚ್ಚಿನ ದೂರುಗಳನ್ನು ದಾಖಲಿಸಲಾಗಿದೆ.
ನೂತನ ವರ್ಷಾಚರಣೆಯಲ್ಲಿ ಬೇಕಾಬಿಟ್ಟಿ ಓಡಾಟದ ಮೂಲಕ ಸಂಚಾರಿ ನಿಯಮ ಉಲ್ಲಂಘನೆ, ಮದ್ಯಪಾನ ಮಾಡಿ ವಾಹನ ಚಾಲನೆ ಸೇರಿದಂತೆ ಇನ್ನಿತರ ಸಂಚಾರಿ ನಿಯಮಗಳನ್ನು ಗಾಳಿದ ತೂರಿದ ವಾಹನ ಸವಾರರಿಗೆ ₹ 90,500 ದಂಡ ವಿಧಿಸಲಾಗಿದೆ. ನಿತ್ಯವೂ ಸಂಚಾರ ನಿಯಮ ಉಲ್ಲಂಘನೆ ಕುರಿತು ದೂರುಗಳು ದಾಖಲಾಗುತ್ತಿದೆ.
ಅಂತೆಯೇ ಪಟ್ಟಣದ ಕಕ್ಕೆಹೊಳೆ ಜಂಕ್ಷನ್ ಹಾಗೂ ಮಹಾತ್ಮಾ ಗಾಂಧೀಜಿ ವೃತದಲ್ಲಿ ಎಎನ್‌ಪಿಆರ್‌ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಈ ಕ್ಯಾಮೆರಾಗಳು ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಸವಾರರ ಚಿತ್ರಗಳನ್ನು, ವಾಹನಗಳ ನಂಬರ್ ಸಹಿತ ಸೆರೆ ಹಿಡಿಯುತ್ತಿವೆ.
ಈವರೆಗೆ ಪೊಲೀಸರ ಕಣ್ತಪ್ಪಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದವರು, ಪೊಲೀಸರು ಈ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರೆ ಬೇರೊಂದು ರಸ್ತೆಯ ಮೂಲಕ ತಪ್ಪಿಸಿಕೊಂಡು ಹೋಗುತ್ತಿದ್ದ ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಚಾಲಕರು ಇನ್ನು ಮುಂದೆ ಸಂಚಾರ ನಿಯಮ ಪಾಲನೆಯಿಂದ ತಪ್ಪಿಸಿಕೊಳ್ಳಲು ಕಷ್ಟಸಾಧ್ಯವಾಗಿದೆ. ಇದನ್ನೂ ಮೀರಿದರೆ ಅನಿವಾರ್ಯವಾಗಿ ದಂಡ ಕಟ್ಟಬೇಕಾಗುತ್ತದೆ.
ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘನೆಯ ದೃಶ್ಯಗಳನ್ನು ಸಿಸಿಟಿವಿ ಕ್ಯಾಮೆರಾಗಳೇ ಸೆರೆ ಹಿಡಿದು ಠಾಣೆಗೆ ರವಾನಿಸುವುದರಿಂದ ಇಂತಹ ಇರಿಸು ಮುರಿಸಿನಿಂದ ಪೊಲೀಸರು ತಪ್ಪಿಸಿಕೊಳ್ಳುವಂತಾಗಿದೆ. ಠಾಣೆಯಲ್ಲಿಯೇ ಕುಳಿತು ವಾಹನದ ನೋಂದಣಿ ಸಂಖ್ಯೆಯ ಆಧಾರದ ಮೇರೆ ಮಾಲೀಕರಿಗೆ ನೋಟೀಸ್ ಜಾರಿಯಾಗುತ್ತದೆ. ಅವರುಗಳು ಠಾಣೆಗೆ ಅಥವಾ ನ್ಯಾಯಾಲಯಕ್ಕೆ ಹಾಜರಾಗಿ ದಂಡ ಕಟ್ಟಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಲೇಬೇಕು. ತಪ್ಪಿದ್ದಲ್ಲಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿರುವ ಇನ್‌ಸ್ಪೆಕ್ಟರ್ ಮುದ್ದು ಮಾದೇವ, ಸಂಚಾರ ನಿಯಮ ಪಾಲನೆಯಿಂದ ಬೇರೊಬ್ಬರ ಜೀವ ಉಳಿಸುವುದರೊಂದಿಗೆ ನಮ್ಮ ಜೀವ-ಜೀವನವನ್ನೂ ಉಳಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.