ADVERTISEMENT

ತಾಲ್ಲೂಕು ರೈತ ಸಂಘದಿಂದ ಶ್ರದ್ಧಾಂಜಲಿ ಸಭೆ: ‘ಎಂದಿಗೂ ಯಾರ ಬಳಿಯೂ ಕೈ ಚಾಚದ ರೈತರು’

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 4:51 IST
Last Updated 10 ಜೂನ್ 2025, 4:51 IST
ಇತ್ತೀಚೆಗೆ ಅಗಲಿದ ರೈತ ಮುಖಂಡರಿಗೆ ಸೋಮವಾರಪೇಟೆ ತಾಲ್ಲೂಕು ರೈತ ಸಂಘದ ಆಶ್ರಯದಲ್ಲಿ ಸೋಮವಾರ ಒಕ್ಕಲಿಗರ ಸಮುದಾಯಭವನದ ಶ್ರೀಗಂಧ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿದರು 
ಇತ್ತೀಚೆಗೆ ಅಗಲಿದ ರೈತ ಮುಖಂಡರಿಗೆ ಸೋಮವಾರಪೇಟೆ ತಾಲ್ಲೂಕು ರೈತ ಸಂಘದ ಆಶ್ರಯದಲ್ಲಿ ಸೋಮವಾರ ಒಕ್ಕಲಿಗರ ಸಮುದಾಯಭವನದ ಶ್ರೀಗಂಧ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿದರು    

ಸೋಮವಾರಪೇಟೆ: ‘ಹೋರಾಟಗಾರರು, ಚಳವಳಿಗಾರರು ಯಾರಿಂದಲೂ ಯಾವುದನ್ನೂ ಬಯಸುವುದಿಲ್ಲ. ರೈತರು ಎಂದಿಗೂ ಯಾರ ಬಳಿಯೂ ಕೈ ಚಾಚುವುದಿಲ್ಲ. ಸ್ವಾಭಿಮಾನಿಗಳಾಗಿರುವ ರೈತರು ಕೇವಲ ಮದುವೆ ಮತ್ತಿತರ ಶುಭ ಸಮಾರಂಭಗಳು,ಹಬ್ಬ ಹರಿದಿನಗಳು, ವಾರದ ಸಂತೆ ಇಂತಹ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಬಾರದು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳಿದರು.

ರೈತ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಸೋಮವಾರ ಇಲ್ಲಿನ ಒಕ್ಕಲಿಗರ ಸಮುದಾಯಭವನದ ಶ್ರೀಗಂಧ ಸಭಾಂಗಣದಲ್ಲಿ ಇತ್ತೀಚೆಗೆ ಅಗಲಿದ ರೈತ ಮುಖಂಡರಿಗೆ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ವರ್ಷಪೂರ್ತಿ ಕೆಲಸ ಮಾಡುವ ರೈತರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಸರ್ಕಾರಗಳು ರೈತರ ಸಮಸ್ಯೆಗಳನ್ನು ಪರಿಹರಿಸಬೇಕಾದರೆ ಸಂಘಟಿತ ಹೋರಾಟ ಅಗತ್ಯ.ಪಕ್ಷ ರಾಜಕೀಯವನ್ನು ಕೈಬಿಟ್ಟು ರೈತರ ಏಳಿಗೆಗಾಗಿ ಹೋರಾಟ ರೂಪಿಸಬೇಕು. ಆಗ ಮಾತ್ರ ಪ್ರತಿಫಲ ಪಡೆಯಲು ಸಾಧ್ಯ’ ಎಂದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ‘ಇಂದಿಗೂ ಸಿ ಮತ್ತು ಡಿ ಲ್ಯಾಂಡ್, ಪೌತಿ ಖಾತೆ ಸೇರಿದಂತೆ ರೈತರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಾಗಿಲ್ಲ. ಕೊಡಗು ಜಿಲ್ಲೆಯು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದರೂ ಜಿಲ್ಲೆಯ ಬೆಳೆಗಾರರು ಹಾಗೂ ರೈತರ ಬಗ್ಗೆ ಯಾವುದೇ ಸರ್ಕಾಗಳಿಗೂ ಕಾಳಜಿ ಇರುವಂತೆ ತೋರುತ್ತಿಲ್ಲ. ನಮ್ಮನ್ನಾಳುವ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರಬೇಕಾದರೆ ರೈತ ಸಂಘಟನೆ ಇನ್ನಷ್ಟು ಬಲಯುತವಾಗಬೇಕು’ಎಂದರು.

ಇದೇ ಸಂದರ್ಭ ಅಗಲಿದ ರೈತ ಮುಖಂಡರಾದ ಪೊನ್ನಚಂಡ ವಿಷ್ಣು, ಪುರುಷೋತ್ತಮ, ಚಿಣ್ಣಪ್ಪ, ನೀರುಗುಂದ ಸೋಮಪ್ಪ, ಹೊಸಗುತ್ತಿ ಶಂಕರಪ್ಪ, ಐ.ಪಿ.ಭವೇರಪ್ಪ ಅವರ ಸೇವೆಯನ್ನು ಸ್ಮರಿಸಲಾಯಿತು.

ವೇದಿಕೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಸುಭಾಶ್ ಸುಬ್ಬಯ್ಯ,ರೈತ ಹೋರಾಟ ಸಮಿತಿಯ ಸಂಚಾಲಕ ಕೆ.ಬಿ.ಸುರೇಶ್, ತಾಲ್ಲೂಕು ಘಟಕದ ಪ್ರಮುಖರಾದ ಹೂವಯ್ಯ ಮಾಸ್ಟರ್, ಟಿ.ಕೆ.ಮಾಚಯ್ಯ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಸಂಘಕ್ಕೆ ಹಲವು ವರ್ಷಗಳಿಂದ ದುಡಿದ ಹಿರಿಯ ರೈತ ಮುಖಂಡರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.