
ಶನಿವಾರಸಂತೆ: ತಲಕಾವೇರಿ ತೀರ್ಥೋದ್ಭವದ ಪ್ರಯುಕ್ತ ಇಲ್ಲಿಗೆ ಸಮೀಪದ ಕೊಡ್ಲಿಪೇಟೆ ಬಳಿಯ ನಂದಿಪುರ ಗ್ರಾಮದಲ್ಲಿರುವ ನಂದಿನೇಸರ ಉದ್ಯಾನದಲ್ಲಿ ಶುಕ್ರವಾರ ಗಂಗಾ ಆರತಿ ಬಾಗಿನ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತುಲಾ ಸಂಕ್ರಮಣ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಕೊಡ್ಲಿಪೇಟೆ ಗಣಪತಿ ದೇವಸ್ಥಾನದಿಂದ ಉದ್ಯಾನದವರೆಗೆ ಮಹಿಳೆಯರಿಂದ ದೀಪ ಪ್ರಜ್ವಲನ, ಪೂರ್ಣಕುಂಭ ಮೆರವಣಿಗೆ ನಡೆಯಿತು.
ತಲಕಾವೇರಿಯಲ್ಲಿ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ತೀರ್ಥೋದ್ಭವಗೊಂಡ ಸಮಯದಲ್ಲೇ ನಂದಿನೇಸರ ಉದ್ಯಾನದ ನಂದಿಪುರ ಕೆರೆಗೆ ಸಾಂಪ್ರದಾಯಕ ಆರತಿ ಪೂಜೆ ಸಲ್ಲಿಸಿದ ನಂತರ ಗಂಗಾಮಾತೆ ಮತ್ತು ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಲಾಯಿತು.
ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮಾಜಿ ಸಚಿವ ಮಾಧುಸ್ವಾಮಿ ದಂಪತಿ ಮತ್ತು ಪ್ರಮುಖರು ನಂದಿಪುರ ಕೆರೆಗೆ ಬಾಗಿನ ಸಮರ್ಪಿಸಿದರು.
ಬಾಗಿನ ಸಮರ್ಪಣಾ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷ ಮತ್ತು ಹೈಕೋರ್ಟ್‌ನ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮನೆಹಳ್ಳಿ ಮಠದ ಮಹಾಂತಶಿವಲಿಂಗ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಜೆ.ಪ್ರವೀಣ್, ಮುಖಂಡರಾದ ಡಾ.ಉದಯ್‍ಕುಮಾರ್, ಯತೀಶ್ ಕುಮಾರ್ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.