ADVERTISEMENT

'ಪರಿಹಾರ ವಿಳಂಬ- ಸ್ಥಳೀಯ ಶಾಸಕರೇ ಹೊಣೆ'

ರಾಜ್ಯ ಸರ್ಕಾರದ ವಿರುದ್ಧ ಶಾಸಕ ಯು.ಟಿ.ಖಾದರ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 15:24 IST
Last Updated 12 ನವೆಂಬರ್ 2019, 15:24 IST
ಮಡಿಕೇರಿಯ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯು.ಟಿ.ಖಾದರ್‌ ಮಾತನಾಡಿದರು. ಕಾಂಗ್ರೆಸ್‌ ಮುಖಂಡರು ಚಿತ್ರದಲ್ಲಿದ್ದಾರೆ
ಮಡಿಕೇರಿಯ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯು.ಟಿ.ಖಾದರ್‌ ಮಾತನಾಡಿದರು. ಕಾಂಗ್ರೆಸ್‌ ಮುಖಂಡರು ಚಿತ್ರದಲ್ಲಿದ್ದಾರೆ   

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳ ವಿಳಂಬಕ್ಕೆ ಸ್ಥಳೀಯ ಶಾಸಕರೇ ನೇರ ಹೊಣೆ’ ಎಂದು ಶಾಸಕ ಯು.ಟಿ.ಖಾದರ್ ಅವರು ಅರೋಪ ಮಾಡಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ರಾಜ್ಯದ ಸರ್ಕಾರವು ಹೆಚ್ಚು ದಿನ ಉಳಿಯುವುದಿಲ್ಲ’ ಎಂದು ಖಾದರ್‌ ಭವಿಷ್ಯ ನುಡಿದರು.

‘ಅಧಿಕಾರಕ್ಕೆ ಬಂದು 100 ದಿನ ಕಳೆದರೂ ಸರ್ಕಾರ ಟೇಕ್ಆಫ್ ಆಗಿಲ್ಲ. ಸರ್ಕಾರ ಕೋಮದಲ್ಲೇ ಇದೆ. ಜನಪರ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಕಡೆಯ ಪಕ್ಷ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳನ್ನು ಮುಂದುವರಿಸುವ ಮನೋಭಾವ ಸಹ ಇಲ್ಲ. ಜನರ ಕಣ್ಣೀರನ್ನು ಒರೆಸದ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಕೇಂದ್ರ ಸರ್ಕಾರದಿಂದ ಸಮರ್ಪಕ ಪರಿಹಾರ ಪಡೆಯಲೂ ರಾಜ್ಯ ಸರ್ಕಾರವು ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರು ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲು ಹಿಂದೆ ಸರಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಪುನರ್ವಸತಿ ಕಾರ್ಯ ವಿಳಂಬಕ್ಕೆ ಹಾಗೂ ಪರಿಹಾರ ದೊರಕದೇ ಇರುವುದಕ್ಕೆ ಸ್ಥಳೀಯ ಶಾಸಕರೂ ಕಾರಣ’ ಎಂದು ಆಪಾದಿಸಿದರು.

‘ನೆರೆ ಪರಿಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜಾಹೀರಾತಿಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರದ ಬೊಕ್ಕಸದಲ್ಲಿ ಹಣವಿದೆ. ಪ್ರಕೃತಿ ವಿಕೋಪ ಸಂದರ್ಭ ಬಿದ್ದ ಮನೆಗಳಿಗೆ ಪರಿಹಾರ ನೀಡಲು ಮಾತ್ರ ಹಣವಿಲ್ಲವೇ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ರಾಜ್ಯದ ಜನರು ನೆಮ್ಮದಿಯಿಂದ ಬದುಕಬೇಕೆನ್ನುವ ಉದ್ದೇಶವಿತ್ತು. ಆದರೆ, ಇದೀಗ ಪಡಿತರ ಸಾಮಗ್ರಿಗಳ ವಿತರಣೆಯಲ್ಲಿ ವ್ಯತ್ಯಾಸ ಉಂಟಾಗುತ್ತಿದೆ’ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೆ.ಮಂಜುನಾಥ್, ನಗರ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ವಿ.ಪಿ.ಸುರೇಶ್, ತೆನ್ನೀರ ಮೈನಾ, ಸುರೇಶ್ ಹೊಸೂರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.