
ಮಡಿಕೇರಿ: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನೂ ನೀಡಿಲ್ಲ, ಚೆಂಬು ನೀಡಿದ್ದಾರೆ ಎಂದು ಹೇಳಿರುವುದು ಸರಿಯಲ್ಲ ಎಂದು ಮಾಜಿ ಸ್ಪೀಕರ್ ಹಾಗೂ ಬಿಜೆಪಿಯ ಹಿರಿಯ ಮುಖಂಡ ಕೆ.ಜಿ.ಬೋಪಯ್ಯ ಖಂಡಿಸಿದರು.
ಹೈಸ್ಪೀಡ್ ರೈಲು ಯೋಜನೆಯನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಿದೆ. ಬೆಂಗಳೂರು ಮತ್ತು ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ನ್ನು ಸಂಪರ್ಕಿಸುವ ಈ ಹೈಸ್ಪೀಡ್ ರೈಲಿನಿಂದ ಪ್ರಯಾಣಿಕರಿಗೆ ಮಾತ್ರವಲ್ಲ ವ್ಯಾಪಾರ, ವಹಿವಾಟಿಗೂ ಹೆಚ್ಚು ಅನುಕೂಲವಾಗುತ್ತದೆ. ಪ್ರಯಾಣ ಮಾಡುವ ಅವಧಿ ತಗ್ಗುತ್ತದೆ. ಇಂತಹ ಒಂದು ಪ್ರಮುಖ ಯೋಜನೆಯನ್ನು ನೀಡಿದ್ದರೂ ಏನೂ ನೀಡಿಯೇ ಇಲ್ಲ ಎಂದು ಹೇಳುವುದು ಎಷ್ಟು ಸರಿ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಬಜೆಟ್‌ನಲ್ಲಿ ಎಲ್ಲ ರಾಜ್ಯ ಸರ್ಕಾರಗಳಿಗೂ ಹೆಚ್ಚುವರಿ ಅನುದಾನ ನೀಡಲಾಗಿದೆ. ಕಳೆದ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ₹ 5 ಸಾವಿರ ಕೋಟಿಯನ್ನು ನಿಗದಿ ಮಾಡಿದ್ದರು. ರಾಜ್ಯಸರ್ಕಾರ ಈ ಕುರಿತು ಪ್ರಸ್ತಾವಗಳನ್ನು ಕಳುಹಿಸಿ ಆ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಟೀಕೆ ಮಾಡಲೇಬೇಕು ಎಂಬಂತೆ ವೃಥಾ ಟೀಕಿಸಬಾರದು ಎಂದರು.
ಈಗಾಗಲೇ ಬಜೆಟ್ ಅನ್ನು ವಾಣಿಜ್ಯೋದ್ಯಮಿಗಳು, ರೈತರು ಸ್ವಾಗತಿಸಿದ್ದಾರೆ. ಇದೊಂದು ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಎಂಬುದರಲ್ಲಿ ಎರಡು ಮಾತಿಲ್ಲ. ದೇಶದ ಎಲ್ಲ ವರ್ಗದವರಿಗೂ ಒಂದಲ್ಲ ಒಂದು ಸ್ವರೂಪದಲ್ಲಿ ಅನುಕೂಲ ಮಾಡಿಕೊಡುವಂತಹ ಬಜೆಟ್ ಇದಾಗಿದೆ ಎಂದು ವಿಶ್ಲೇಷಿಸಿದರು.
ಸಮಗ್ರ ಭಾರತ ಕಲ್ಪನೆಯನ್ನು ಇಟ್ಟುಕೊಂಡು ರೂಪಿಸಿರುವ ಈ ಬಜೆಟ್ ಅನ್ನು ಎಲ್ಲರೂ ಸ್ವಾಗತಿಸಲೇಬೇಕಿದೆ. ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ. ಎಲ್ಲರಿಗೂ ಉಚಿತವಾಗಿ ನೀಡದೇ ಜನರು ಸ್ವಾಭಿಮಾನಿಯಾಗಿ ಬದುಕುವುದಕ್ಕೆ ಆಸ್ಪದ ಕೊಡುವಂತಹ ಯೋಜನೆಗಳು ಬಜೆಟ್‌ನಲ್ಲಿವೆ ಎಂದರು.
ಬಿಜೆಪಿ ಮುಖಂಡರಾದ ಮಹೇಶ್ ಜೈನಿ, ಸಜಿಲ್ ಕೃಷ್ಣ, ತಳೂರು ಕಿಶೋರ್ ಕುಮಾರ್, ಅರುಣ್‌ಕುಮಾರ್ ಭಾಗವಹಿಸಿದ್ದರು.
ಯಾರಿಗೂ ಹೊರೆ ಮಾಡದ ಬಜೆಟ್; ರವಿ ಕಾಳಪ್ಪ
ಬಿಜೆಪಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ ‘ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಯಾವುದೇ ತೆರಿಗೆಗಳನ್ನು ಹೆಚ್ಚಿಸಿಲ್ಲ. ಹಾಗಾಗಿ ಇದು ಯಾರಿಗೂ ಹೊರೆ ತರದ ಬಜೆಟ್ ಎಂಬುದು ಗಮನಾರ್ಹ’ ಎಂದು ಹೇಳಿದರು. ಸಾಮಾನ್ಯವಾಗಿ ಬಜೆಟ್‌ನಲ್ಲಿ ಒಂದಿಲ್ಲೊಂದು ತೆರಿಗೆಗಳನ್ನು ಹೆಚ್ಚಿಸುತ್ತಾರೆ. ಆದರೆ ಈ ಬಾರಿ ಸಾಮಾನ್ಯ ಜನರ ಮೇಲೆ ತೆರಿಗೆಯ ಹೊರೆಯನ್ನು ಬಜೆಟ್ ಹಾಕಿಲ್ಲ ಎಂದರು. ‘ನಮ್ಮ ಸುತ್ತಲಿನ ದೇಶಗಳು ಈಗಾಗಲೇ ದಿವಾಳಿಯಾಗಿವೆ. ಆದರೆ ನಮ್ಮ ದೇಶ ಸದೃಢವಾಗಿದೆ. ಇದಕ್ಕೆ ಪ್ರಮುಖವಾಗಿ ಬಿಜೆಪಿ ಮಂಡಿಸುತ್ತಿರುವ ಬಜೆಟ್ ಕಾರಣ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.