ಸೋಮವಾರಪೇಟೆ: ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯ ನಡುವೆ ಸೆಸ್ಕ್ ಸಿಬ್ಬಂದಿ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಎರಡು ದಿನ ಸುರಿದ ಭಾರಿ ಗಾಳಿ ಮಳೆಗೆ ಸಾಕಷ್ಟು ಹಾನಿಯಾಗಿದ್ದು, ತಾಲ್ಲೂಕಿನ ಹೆಚ್ಚಿನ ಗ್ರಾಮಗಳು ವಿದ್ಯುತ್ ವಂಚಿತವಾಗಿವೆ. ಸೆಸ್ಕ್‌ನಲ್ಲಿ ಕೆಲಸಗಾರರ ಕೊರತೆಯೊಂದಿಗೆ, ನುರಿತ ಕೆಲಸಗಾರರ ಸಮಸ್ಯೆ ಇಲಾಖೆಯನ್ನು ಕಾಡುತ್ತಿದೆ. ಇದರಿಂದಾಗಿ ಗ್ರಾಮಗಳಲ್ಲಿ ಎಲ್ಲಿ ವಿದ್ಯುತ್ ಕಡಿತಗೊಂಡಿದೆ ಎಂದು ಕಂಡು ಹಿಡಿಯುವುದಕ್ಕೆ ಸಾಕಷ್ಟು ಸಮಯಾವಕಾಶ ಹಿಡಿಯುತ್ತಿದೆ.
ಮಳೆ ಗಾಳಿ ಮುಂದುವರೆಯುತ್ತಿರುವುದರಿಂದ ಬೃಹತ್ ಮರಗಳು ವಿದ್ಯುತ್ ಮಾರ್ಗದ ಮೇಲೆ ಉರುಳುತ್ತಿರುವುದರಿಂದ ಸಾಕಷ್ಟು ವಿದ್ಯುತ್ ಕಂಬಗಳು ನೆಲಕ್ಕೊರಗುತ್ತಿವೆ.
ಸೋಮವಾರಪೇಟೆ ಪಟ್ಟಣದ ಪ್ರಮುಖ ಮಾರ್ಗದ ಯಡವಾರೆ ಆರಣ್ಯದಲ್ಲಿ 33ಕೆ.ವಿ. ಮಾರ್ಗದ ಮೇಲೆ ಮರಗಳು ಬಿದ್ದಿದ್ದರಿಂದ ವಿದ್ಯುತ್ ಕಡಿತಗೊಂಡಿತ್ತು. ಅದನ್ನು ಪತ್ತೆ ಹಚ್ಚಿನ ಮಾರ್ಗ ಸರಿಮಾಡುವಷ್ಟರಲ್ಲಿ ಸಂಜೆಯಾಗಿತ್ತು. ಗ್ರಾಮೀಣ ಭಾಗಗಳಿಗೆ ವಿದ್ಯುತ್ ಕಡಿತಗೊಳಿಸಿ ಪಟ್ಟಣಕ್ಕೆ ಮಾತ್ರ ವಿದ್ಯುತ್ ನೀಡಲಾಗಿತ್ತು. ಅಬ್ಬೂರುಕಟ್ಟೆ, ಗೌಡಳ್ಳಿ, ಶಾಂತಳ್ಳಿ, ಕಿರಗಂದೂರು, ಬೆಟ್ಟದಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಮರಗಳು ವಿದ್ಯುತ್ ಮಾರ್ಗದ ಮೇಲೆ ಬಿದ್ದಿದ್ದರಿಂದ 16 ವಿದ್ಯುತ್ ಕಂಬಗಳು ಮುರಿದು ಬಿದ್ದರೆ, ಸಾಕಷ್ಟು ಕಂಬಗಳು ನೆಲಕೊರಗುವುದರೊಂದಿಗೆ, ತಂತಿಗಳು ತುಂಡಾಗಿವೆ. ಭಾರಿ ಮಳೆಯಿಂದ ತಕ್ಷಣಕ್ಕೆ ಕೆಲಸ ಮಾಡಲು ಸಿಬ್ಬಂದಿಗಳಿಗೂ ತೊಂದರೆಯಾಗುತ್ತಿದೆ.
‘ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಕೆಲಸಕ್ಕೆಂದು 10 ಹೊರ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ಇವರು ನುರಿತ ಕೆಲಸಗಾರರಲ್ಲದಿರುವುದರಿಂದ ವೇಗವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ವಿದ್ಯುತ್ ಕಂಬಗಳನ್ನು ಈಗಾಗಲೇ ಸಾಕಷ್ಟು ಸಂಗ್ರಹಿಸಿದ್ದು, ಕಂಬಗಳ ಸಮಸ್ಯೆ ಇಲ್ಲ. ಬೇಸಿಗೆಯಲ್ಲಿ ವಿದ್ಯುತ್ ಮಾರ್ಗದ ಮೇಲಿನ ಮರದ ಕೊಂಬೆಗಳನ್ನು ಕಡಿಯುತ್ತೇವೆ. ಆದರೆ, ಪೂರ್ಣ ಮರಗಳನ್ನು ಕಡಿಯಲು ನಮಗೆ ಅನುಮತಿ ಇಲ್ಲ. ಈಗ ವಿದ್ಯುತ್ ಮಾರ್ಗದ ಮೇಲೆ ಬೃಹತ್ ಮರಗಳು ಉರುಳುತ್ತಿರುವುದರಿಂದ ಸಾಕಷ್ಟು ಹಾನಿಯಾಗುತ್ತಿದೆ. ತಾಲ್ಲೂಕಿನಲ್ಲಿ ಸುಮಾರು 157 ಕಂಬಗಳಿಗೆ ಹಾನಿಯಾಗಿದೆ ಎಂಬ ಮಾಹಿತಿ ಇದ್ದು, ಹಂತ ಹಂತವಾಗಿ ಸರಿಪಡಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆ ಮತ್ತು ತೋಟದಲ್ಲಿ ಬೀಳುವ ಸಂದರ್ಭ ಇದ್ದು, ಅಂತಹ ಮಾಹಿತಿ ಇದ್ದಲ್ಲಿ ತಕ್ಷಣ 1912 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸೆಸ್ಕ್ ಎಇಇ ವಿ. ರವಿ ತಿಳಿಸಿದರು.
ಸೋಮವಾರಪೇಟೆ ತಾಲ್ಲೂಕಿನಲ್ಲಿ 157 ಕಂಬಗಳಿಗೆ ಹಾನಿ ವಿದ್ಯುತ್ ಸಮಸ್ಯೆ ಇದ್ದಲ್ಲಿ 1912 ಸಂಖ್ಯೆಗೆ ಕರೆ ಮಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.