ADVERTISEMENT

ಮಡಿಕೇರಿ | ಹುತ್ತರಿಯ ಮರುದಿನ ಕೋಲಾಟದ ಸಡಗರ

ಮಂದ್‌ಗಳಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 7:27 IST
Last Updated 29 ನವೆಂಬರ್ 2023, 7:27 IST
ಭಾಗಮಂಡಲದ ಕಾವೇರಿ ಕೋಲ್ ಮಂದ್ ನಲ್ಲಿ  ಮಂಗಳವಾರ ನಾಲ್ಕು ಗ್ರಾಮದವರಿಂದ ಹುತ್ತರಿಕೋಲಾಟ ಸಂಭ್ರಮದಿಂದ ನಡೆಯಿತು
ಭಾಗಮಂಡಲದ ಕಾವೇರಿ ಕೋಲ್ ಮಂದ್ ನಲ್ಲಿ  ಮಂಗಳವಾರ ನಾಲ್ಕು ಗ್ರಾಮದವರಿಂದ ಹುತ್ತರಿಕೋಲಾಟ ಸಂಭ್ರಮದಿಂದ ನಡೆಯಿತು   

ಮಡಿಕೇರಿ/ನಾಪೋಕ್ಲು: ಹುಣ್ಣಿಮೆಯ ಬೆಳದಿಂಗಳಿನಲ್ಲಿ ಹುತ್ತರಿ ಹಬ್ಬದ ಸಡಗರದಲ್ಲಿ ಮಿಂದೆದ್ದ ಕೊಡಗಿನ ಜನರು ಮಂಗಳವಾರ ಮಂದ್‌ಗಳಲ್ಲಿ ಸೇರಿ ಕೋಲಾಟ ಸೇರಿದಂತೆ ಹಲವು ಬಗೆಯ ಜನಪದ ನೃತ್ಯಗಳನ್ನಾಡುವ ಮೂಲಕ ಸಂತಸಪಟ್ಟರು.

ಮಡಿಕೇರಿಯ ಕೋಟೆ ಆವರಣದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಶ್ರೀ ಓಂಕಾರೇಶ್ವರ ದೇವಾಲಯ, ಪಾಂಡೀರ ಕುಟುಂಬ ಹೆಬ್ಬಟ್ಟಗೇರಿ ಮತ್ತು ಕೊಡವ ಸಮಾಜ ಮಡಿಕೇರಿ ವತಿಯಿಂದ ನಡೆದ ‘ಪುತ್ತರಿ ಕೋಲಾಟ’ದಲ್ಲಿ ನೂರಾರು ಮಂದಿ ಭಾಗಿಯಾದರು.

ಪಾಂಡೀರ ಕುಟುಂಬದ ಸದಸ್ಯರು ಕೋಲಾಟ, ಉಮ್ಮತ್ತಾಟ್, ಬೊಳಕಾಟ್‌ಗಳು ನಡೆದರೆ, ಕೊಡವ ಸಮಾಜದ ಸದಸ್ಯರು ಕೋಲಾಟ, ಉಮ್ಮತ್ತಾಟ್, ಪರೆಯಕಳಿ ಕಲೆಗಳನ್ನು ಪ್ರಸ್ತುತಪಡಿಸಿದರು. ಕೋಟೆ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಾಂಡೀರ ಕುಟುಂಬಸ್ಥರು ದೇವಕೋಲನ್ನು ಕೋಟೆಯ ಮಂದ್‌ಗೆ ದುಡಿಕೊಟ್ಟ್ ಪಾಟ್, ವಾಲಗದ ಜತೆ ತಂದು ಪ್ರಾರ್ಥನೆ ಸಲ್ಲಿಸುತ್ತಿದ್ದಂತೆ ಕಲಾ ಪ್ರದರ್ಶನ ಆರಂಭಗೊಂಡಿತು.

ADVERTISEMENT

ಉಮ್ಮತಾಟ್ ಸಮಯದಲ್ಲಿ ಕೇಳಿ ಬಂದ ಒಂದೊಂದು ಬಿಡಿಬಿಡ ಹಾಡುಗಳನ್ನೂ ಮತ್ತೆ ಮತ್ತೆ ಕೇಳುವಂತೆನಿಸಿತ್ತು. ಬೊಳಕಾಟ್, ಕೋಲಾಟಗಳನ್ನು ಜನರು ಕಣ್ತುಂಬಿಕೊಂಡರು. ಕೊನೆಯಲ್ಲಿ ನಡೆದ ಪರೆಯಕಳಿ ಕಲೆಯ ಎವೆಯಿಕ್ಕದೇ ವೀಕ್ಷಿಸುವಂತೆ ಮಾಡುವಲ್ಲಿ ಸಫಲವಾಯಿತು.

ಕೊನೆಯಲ್ಲಿ ಪ್ರೇಕ್ಷಕರಾದಿಯಾಗಿ ಎಲ್ಲರೂ ವಾಲಗತಾಟ್‌ಗೆ ಹೆಜ್ಜೆ ಹಾಕಿದರು. ಬಿಜೆಪಿ ಮುಖಂಡ ಕೆ.ಜಿ.ಬೋಪಯ್ಯ, ‘ಕೊಡವ ಜನಾಂಗದ ಪದ್ಧತಿಗಳು, ಆಚಾರವಿಚಾರಗಳು ನಶಿಸಿ ಹೋಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ರಾಜರ ಕಾಲದಿಂದಲೂ ಈ ಕಾರ್ಯಕ್ರಮ ನಡೆಯುತ್ತಿದೆ. ನಂತರ ಸ್ವಲ್ಪ ನಿಂತು ಹೋಗಿ ರಾಜರ ಗದ್ದುಗೆಯಲ್ಲಿ ನಡೆಯುತ್ತಿತ್ತು. ನಂತರ, ಮತ್ತೆ ಇಲ್ಲಿ ಆರಂಭಿಸಲಾಯಿತು. ಈ ಪರಂಪರೆ ಮುಂದುವರಿಯಬೇಕಿದೆ ಎಂದರು. ಒಕ್ಕ ಪಟ್ಟೆದಾರ ಮೇದಪ್ಪ, ತಕ್ಕ ರವಿ ಕರುಂಬಯ್ಯ, ಆಡಳಿತ ಅಧ್ಯಕ್ಷ ಸಜನ್ ಪೂಣಚ್ಚ ಇದ್ದರು.

ನಾಡಮಂದ್‌ಗಳಲ್ಲಿ ಹುತ್ತರ ಕೋಲಾಟ:

ನಾಪೋಕ್ಲು: ಇಲ್ಲಿನ ವಿವಿಧ ಮಂದ್‌ಗಳಲ್ಲಿ ಹುತ್ತರಿ ಕೋಲಾಟದ ಸದ್ದು ಮಾರ್ದನಿಸಿತು. 3 ದಿನಗಳ ಬಳಿಕ ನಾಪೋಕ್ಲುವಿನ ಬಿದ್ದಾಟಂಡ ವಾಡೆಯಲ್ಲಿ, ಮೂರ್ನಾಡಿನ ಪಾಂಡಾಣೆ ನಾಡ ಮಂದ್‌ನಲ್ಲಿ ಮುಖ್ಯ ಕೋಲಾಟ ಜರುಗಲಿದ್ದು ಗ್ರಾಮಸ್ಥರನ್ನು ರಂಜಿಸಲಿದೆ.

ಭಾಗಮಂಡಲದ ಕಾವೇರಿ ಕೋಲ್ ಮಂದ್‌ನಲ್ಲಿ ಮಂಗಳವಾರ 4 ಗ್ರಾಮದವರಿಂದ ಹುತ್ತರಿಕೋಲಾಟ ಸಂಭ್ರಮದಿಂದ ನಡೆಯಿತು. ಭಾಗಮಂಡಲದ ತಾವೂರು, ಚೇರಂಗಾಲ, ಕೋರಂಗಾಲ ಮತ್ತು ತಣ್ಣಿಮಾನಿ ಗ್ರಾಮಸ್ಥರು ಒಟ್ಟಾಗಿ ಕಾವೇರಿ ಹಿರಿಯ ಮಾನಿ ಮಂದ್‌ನಲ್ಲಿ ಹುತ್ತರಿ ಕೋಲಾಟ ನಡೆಸಿದರು.

ತಾವೂರು ಗ್ರಾಮದ ಮಹಿಷಾಸುರ ಮರ್ದಿನಿ ದೇವಾಲಯದ ತಕ್ಕರಾದ ಕುರುಂಜಿ ದೇವಯ್ಯ, ಚೇರಂಗಾಲ ಗ್ರಾಮದ ಸಿರಕಜ್ಜೆ ಸುಂದರ, ತಣ್ಣಿಮಾನಿ ಭಗವತಿ ದೇವಾಲಯದ ತಕ್ಕರಾದ ದಂಡಿನ ರಮೇಶ್ ಹಾಗೂ ಕೋರಂಗಾಲ ಗ್ರಾಮದ ಸುಬ್ರಹ್ಮಣ್ಯ ದೇವಾಲಯದ ನಂಗಾರು ವಿಜಯ ನೇತೃತ್ವದಲ್ಲಿ ಹುತ್ತರಿಕೋಲು ನಡೆಯಿತು.

ಬಳಿಕ ಭಾಗಮಂಡಲಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಒಟ್ಟು ಸೇರಿ ಭಗಂಡೇಶ್ವರ ದೇವಾಲಯಕ್ಕೆ ತೆರಳಿದರು . ಅಲ್ಲಿಂದ ವಾದ್ಯಗೋಷ್ಠಿಯೊಂದಿಗೆ ತೆರಳಿದ ಮಂದಿ ಎಂಟು ಸುತ್ತಿನ ಕೋಲಾಟ ನಡೆಸಿದರು. ನಂತರ, ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಹಿಂತಿರುಗಿ ಕೋಲು ಒಪ್ಪಿಸಲಾಯಿತು.

ತಣ್ಣಿಮಾನಿ ಗ್ರಾಮದ ಭಗವತಿ ದೇವಾಲಯದಲ್ಲಿ ಹುತ್ತರಿ ಕೋಲು ನಡೆದು ಅಲ್ಲಿಯೇ ಕೋಲು ಒಪ್ಪಿಸುವ ಸಂಪ್ರದಾಯವಿದೆ.

ಮಡಿಕೇರಿಯ ಕೋಟೆ ಆವರಣದಲ್ಲಿ ಮಂಗಳವಾರ ಹುತ್ತರಿ ಹಬ್ಬದ ಪ್ರಯುಕ್ತ ನಡೆದ ಪುತ್ತರಿ ಕೋಲಾಟ ಕಾರ್ಯಕ್ರಮದಲ್ಲಿ ವಿವಿಧ ಜನ‍ಪದ ನೃತ್ಯಗಳನ್ನು ಕಲಾವಿದರ ಪ್ರದರ್ಶಿಸಿದರು
ಮಡಿಕೇರಿಯ ಕೋಟೆ ಆವರಣದಲ್ಲಿ ಮಂಗಳವಾರ ಹುತ್ತರಿ ಹಬ್ಬದ ಪ್ರಯುಕ್ತ ನಡೆದ ಪುತ್ತರಿ ಕೋಲಾಟ ಕಾರ್ಯಕ್ರಮದಲ್ಲಿ ವಿವಿಧ ಜನ‍ಪದ ನೃತ್ಯಗಳನ್ನು ಕಲಾವಿದರ ಪ್ರದರ್ಶಿಸಿದರು
ಮಡಿಕೇರಿಯ ಕೋಟೆ ಆವರಣದಲ್ಲಿ ಮಂಗಳವಾರ ಹುತ್ತರಿ ಹಬ್ಬದ ಪ್ರಯುಕ್ತ ನಡೆದ ಪುತ್ತರಿ ಕೋಲಾಟ ಕಾರ್ಯಕ್ರಮವನ್ನು ಹಲವು ಮಂದಿ ವೀಕ್ಷಿಸಿದರು

ಹಲವೆಡೆ ಆರಂಭವಾದ ಕೋಲಾಟ ವಾಲಗತಾಟ್‌ಗೆ ಹೆಜ್ಜೆ ಹಾಕಿದ ಎಲ್ಲ ಜನರು ಹುತ್ತರಿ ಸಡಗರದಲ್ಲಿ ತೇಲಿದ ಕೊಡಗು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.