ADVERTISEMENT

ಸಂತ್ರಸ್ತರ ಮನೆಗಳು ಕಳಪೆಯಾಗಿಲ್ಲ: ವಿ.ಸೋಮಣ್ಣ

ಜೂನ್‌ 5ರ ಒಳಗೆ ಜಂಬೂರು, ಮದೆಯಲ್ಲಿ ನೆರೆ ಸಂತ್ರಸ್ತರಿಗೆ ಮನೆಗಳ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 22 ಮೇ 2020, 12:33 IST
Last Updated 22 ಮೇ 2020, 12:33 IST
ಮಡಿಕೇರಿಯಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು
ಮಡಿಕೇರಿಯಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು   

ಮಡಿಕೇರಿ: ‘ನೆರೆ ಸಂತ್ರಸ್ತರಿಗೆ ಕೊಡಗು ಜಿಲ್ಲೆಯ ಮದೆ ಹಾಗೂ ಜಂಬೂರಿನಲ್ಲಿ ನಿರ್ಮಿಸಿರುವ ಮನೆಗಳು ಕಳಪೆಯಾಗಿಲ್ಲ. ನಾನೇ ನಾಲ್ಕೈದು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಇನ್ನೊಬ್ಬರ ಮೆಚ್ಚಿಸುವ ಕೆಲಸ ನಾನು ಮಾಡುವುದಿಲ್ಲ. ಸಣ್ಣ ಡಾಟ್‌ ಬಂದಿದ್ದಕ್ಕೆ ಕಳಪೆ ಎನ್ನಲು ಸಾಧ್ಯವಿಲ್ಲ. ಸ್ಥಳೀಯ ಶಾಸಕರೂ ಸೇರಿದಂತೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ನೋಡಿದ್ದೇನೆ. ಫಸ್ಟ್‌ ಕ್ಲಾಸ್‌ ಕೆಲಸ ನಡೆದಿದೆ’ ಎಂದು ಸ್ಪಷ್ಟನೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ‘ಕಳಪೆಯಾಗಿದೆ ಎಂಬುದನ್ನು ಎಂಜಿನಿಯರ್‌ಗಳು ಹೇಳಬೇಕು. ಎಲ್ಲಿ ಸೋರಿಕೆ ಆಗುತ್ತಿದೆ ಎಂಬುದನ್ನು ತೋರಿಸಬೇಕು. ಕಳೆದ ವರ್ಷ ಮಂತ್ರಿಗಳೊಂದಿಗೆ ಭೇಟಿ ನೀಡಿದ್ದಾಗ ಮಂತ್ರಿಗಳೇ ಫಸ್ಟ್‌ಕ್ಲಾಸ್‌ ಆಗಿವೆ ಮನೆಗಳೆಂದು ಹೇಳಿದ್ದರು’ ಎಂದು ತಿಳಿಸಿದರು.

ADVERTISEMENT

ಹಸ್ತಾಂತರ ಕಾರ್ಯಕ್ರಮಕ್ಕೆ ಸಿ.ಎಂ:‘ಇದೇ 29ರಂದು ಮನೆ ಹಸ್ತಾಂತರ ಮಾಡಲು ತೀರ್ಮಾನಿಸಿದ್ದೆವು. ಆದರೆ, ಲಾಕ್‌ಡೌನ್‌ ಮುಂದುವರಿಸಿರುವ ಕಾರಣಕ್ಕೆ ಹಸ್ತಾಂತರ ಕಾರ್ಯಕ್ರಮ ಮುಂದೂಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಹಸ್ತಾಂತರ ಕಾರ್ಯಕ್ರಮಕ್ಕೆ ಬರಲಿ ಎನ್ನುವ ಅಪೇಕ್ಷೆಯಿಂದ ಜೂನ್‌ 5ರ ಒಳಗೆ ಮನೆ ಹಸ್ತಾಂತರ ಮಾಡಲಾಗುವುದು’ ಎಂದು ಸಚಿವ ಸೋಮಣ್ಣ ಹೇಳಿದರು.

ಸಭೆಯಲ್ಲಿ ಚರ್ಚೆ:ಅದಕ್ಕೂ ಮೊದಲು ನಡೆದ ಸಭೆಯಲ್ಲಿ ಸಚಿವರು ಮಾತನಾಡಿ, ‘450 ಮಂದಿ ಜಿಲ್ಲೆಯಲ್ಲಿ ಇನ್ನೂ ಕ್ವಾರಂಟೈನ್‌ನಲ್ಲಿದ್ದಾರೆ. ಜಿಲ್ಲೆಯನ್ನು ಬೆಂಗಳೂರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಶಿಸ್ತು ಇದೆ. ಲಾಕ್‌ಡೌನ್‌ ಅವಧಿಯಲ್ಲಿ ಜನರ ಸಹಕಾರ ಚೆನ್ನಾಗಿತ್ತು’ ಎಂದು ಹೇಳಿದರು.

‘ಈಗಾಗಲೇ ಜಿಲ್ಲೆಯಿಂದ ವಲಸೆ ಕಾರ್ಮಿಕರನ್ನು ತಮಿಳುನಾಡು, ಬಿಹಾರ್‌, ಜಾರ್ಖಂಡ್‌ ಸೇರಿದಂತೆ ವಿವಿಧ ರಾಜ್ಯಗಳಿಗೆ ಕಳುಹಿಸಲಾಗಿದೆ. ಇನ್ನೂ ಕೆಲವು ವಲಸೆ ಕಾರ್ಮಿಕರು ತಮ್ಮ ಊರಿಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಆದರೆ, ರಾಜ್ಯಗಳಿಂದ ಒಪ್ಪಿಗೆ ಸಿಕ್ಕಿಲ್ಲ’ ಎಂದು ಹೇಳಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸರ್ಕಾರವು ಅಂತರ ಜಿಲ್ಲೆಯ ಸಂಚಾರಕ್ಕೆ ಚೆಕ್‌ಪೋಸ್ಟ್‌ ತೆರವು ಮಾಡಿ ಅವಕಾಶ ನೀಡಿದೆ. ಆದರೆ, ಕೊಪ್ಪ ಹಾಗೂ ಸಂಪಾಜೆ ಗೇಟ್‌ನಲ್ಲಿ ಜಿಲ್ಲೆಯ ಒಳಕ್ಕೆ ಬರುವಾಗ ತಪಾಸಣೆ ನಡೆಸಬೇಕು. ತಪಾಸಣೆ ನಡೆಸದೇ ಒಳಗೆ ಬಿಟ್ಟರೆ ಮತ್ತೊಂದು ರೀತಿಯ ಸಮಸ್ಯೆ ಆಗಬಹುದು ಎಂದು ಹೇಳಿದರು.

‘ನನ್ನ ವೈಯಕ್ತಿಕ ಅಭಿಪ್ರಾಯ ಯಾವುದೇ ಇದ್ದರೂ ಹೊರ ಜಿಲ್ಲೆಯ ಮೀನು ಹಾಗೂ ಹಂದಿ ಮಾಂಸವನ್ನು ಜಿಲ್ಲೆಗೆ ತರಲು ಅವಕಾಶ ಕಲ್ಪಿಸಲಾಗಿದೆ. ಆದರೆ, ತರಕಾರಿ ಸಾಗಣೆ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಿಯೇ ಬಿಡಬೇಕು. ಅದರಲ್ಲಿ ದನದ ಮಾಂಸ ಸಾಗಣೆ ಮಾಡುವ ಸಾಧ್ಯತೆಯಿದೆ’ ಎಂದು ಬೋಪಯ್ಯ ಎಚ್ಚರಿಸಿದರು.

ಶಾಸಕ ರಂಜನ್‌ ಮಾತನಾಡಿ, ಜಿಲ್ಲೆಯ ಒಳಗೆ ಬರುವವರು ಸ್ವಯಂ ಪ್ರೇರಣೆಯಿಂದ ತಪಾಸಣೆಗೆ ಒಳಪಡಬೇಕು ಎಂದು ಕೋರಿದರು.

ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ಸಂಸದ ಪ್ರತಾಪ ಸಿಂಹ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌, ಸಿಇಒ ಕೆ.ಲಕ್ಷ್ಮಿಪ್ರಿಯಾ ಹಾಜರಿದ್ದರು.

ಶಿಷ್ಟಾಚಾರದಂತೆ ಗಣ್ಯರಿಗೆ ಆಹ್ವಾನ
‘ಶಿಷ್ಟಾಚಾರದಂತೆ ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಎಲ್ಲರ ಟ್ವೀಟ್‌ ಅನ್ನೂ ನಾನು ನೋಡಿದ್ದೇನೆ’ ಎಂದು ಸಚಿವ ವಿ.ಸೋಮಣ್ಣ ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಮನೆ ನಿರ್ಮಾಣ ವಿಚಾರವಾಗಿ ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

‘ಇದು ಅವರ ಕಾಲದ ಯೋಜನೆ, ಇವರ ಕಾಲದ ಯೋಜನೆ ಅನ್ನುವ ಚರ್ಚೆ ಸರಿಯಲ್ಲ. ಬಡವರಿಗೆ, ಸಂಕಷ್ಟದಲ್ಲಿ ಇರುವ ಜನರಿಗೆ ಸೌಲಭ್ಯ ತಲುಪಬೇಕು’ ಎಂದು ಪ್ರತಿಪಾದಿಸಿದರು.

10 ಲಕ್ಷ ಮನೆ ನಿರ್ಮಾಣ ಗುರಿ
ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಎರಡು ವರ್ಷದ ಅವಧಿಯಲ್ಲಿ 10 ಲಕ್ಷ ಮನೆ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

*
ನನ್ನ ಅನುಭವದಲ್ಲಿ ಸಂತ್ರಸ್ತರ ಮನೆಗಳು ಕಳಪೆಯಾಗಿಲ್ಲ. ಕಳಪೆಯಾಗಿದ್ದರೆ ತಾಂತ್ರಿಕವಾಗಿ ಹೇಳಬೇಕು. ದುರುದ್ದೇಶದಿಂದ ಆರೋಪ ಸರಿಯಲ್ಲ. ಕಳಪೆಯಾಗಿದ್ದರೆ ಕಾನೂನು ಚೌಕಟ್ಟಿನಲ್ಲಿಯೇ ಕ್ರಮ ಕೈಗೊಳ್ಳಲಾಗುವುದು.
– ವಿ.ಸೋಮಣ್ಣ, ಉಸ್ತುವಾರಿ ಸಚಿವ, ಕೊಡಗು

*
ಇನ್ನೇನು ಮಳೆಗಾಲ ಆರಂಭವಾಗಲಿದೆ. ಆದರೆ, 2018ರಲ್ಲಿ ಹೊಳೆಯಲ್ಲಿ ಬಿದ್ದಿದ್ದ ಮರಗಳನ್ನು ಇನ್ನೂ ತೆರವು ಮಾಡಿಲ್ಲ. ಇನ್ನೆರಡು ದಿನದಲ್ಲಿ ತೆರವು ಮಾಡದಿದ್ದರೆ ನಾನೇ ಅರಣ್ಯ ಇಲಾಖೆ ಎದುರು ಧರಣಿ ನಡೆಸುವೆ.
– ವೀಣಾ ಅಚ್ಚಯ್ಯ, ವಿಧಾನ ಪರಿಷತ್‌ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.