ADVERTISEMENT

ವಿಬಿ–ಜಿ ರಾಮ್‌ ಜಿ ಕಾಯ್ದೆಯ ವಿರುದ್ಧ ಜನಾಂದೋಲನ: ಹೋರಾಟಕ್ಕೆ ಅಣಿಯಾಗಲು ಸಚಿವ ಕರೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 3:11 IST
Last Updated 21 ಜನವರಿ 2026, 3:11 IST
   

ಮಡಿಕೇರಿ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ಮನರೇಗಾ) ಕಾಯ್ದೆಯ ಬದಲಿಗೆ ಹೊಸದಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ಕಾಯ್ದೆಯ ವಿರುದ್ಧ ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಮತ್ತು ಹೋಬಳಿಮಟ್ಟದಲ್ಲಿ ಹೋರಾಟಗಳನ್ನು ನಡೆಸಲು ಇಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ನಿರ್ಧರಿಸಲಾಯಿತು.

ಹೊಸ ಕಾಯ್ದೆಯ ವಿರುದ್ಧ ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.

ಈ ವಿಷಯವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಬ್ರಿಟಿಷರ ವಿರುದ್ಧ ಹೋರಾಟದಂತೆಯೇ ಈ ವಿಚಾರದಲ್ಲಿ ಎಲ್ಲ ಭಿನ್ನಾಭಿಪ್ರಾಯ ಮರೆತು ಹೋರಾಟಕ್ಕೆ ಇಳಿಯಬೇಕು ಎಂದರು.

ADVERTISEMENT

ಭಾರತೀಯರ ಮನಸ್ಸಿನಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಅಳಿಸಲು ಬಿಜೆಪಿ ನಡೆಸುತ್ತಿರುವ ಷಡ್ಯಂತರ ಇದಾಗಿದ್ದು ಕಾಂಗ್ರೆಸ್ ಪಕ್ಷ ಇಂತಹ ಷಡ್ಯಂತರಗಳನ್ನು ಕಾರ್ಯರೂಪಕ್ಕೆ ತರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ, ‘ಮನರೇಗಾ ಯೋಜನೆಯಲ್ಲಿ ವಾರ್ಷಿಕ ಕನಿಷ್ಠ 100 ದಿನಗಳು ಉದ್ಯೋಗ ಹಾಗೂ ಗರಿಷ್ಠ ಮಿತಿ ಇರಲಿಲ್ಲ. ಆದರೆ, ವಿಜಿ ರಾಮ್‌ಜಿ ಯೋಜನೆಯಲ್ಲಿ 125 ದಿನ ಅಂತ ನಿಗದಿ ಪಡಿಸಿ ಅನ್ಯಾಯ ಮಾಡಲಾಗಿದೆ. ಇದರ ವಿರುದ್ದ ಜನಾಂದೋಲನ ರೀತಿಯಲ್ಲಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ಕಾಂಗ್ರೆಸ್ ಸಿದ್ದಾಂತವನ್ನು ಅಳಿಸುವ ಉದ್ದೇಶದಿಂದ ಬಿಜೆಪಿ ಆರ್‌ಎಸ್‌ಎಸ್ ಸಿದ್ದಾಂತವನ್ನು ಹೇರಲು ಹೊರಟಿದೆ’ ಎಂದು ಆರೋಪಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ ಮಾತನಾಡಿ, ‘ಪ್ರತಿಯೊಬ್ಬ ನಾಗರೀಕರಿಗೂ ಕೇಂದ್ರ ಸರ್ಕಾರ ಮಾಡಿರುವ ಅನ್ಯಾಯಗಳನ್ನು ಮನದಟ್ಟು ಮಾಡುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಧ್ಯಕ್ಷ ಅರುಣ್ ಮಾಚಯ್ಯ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಕೆ.ಬಿ.ಶಾಂತಪ್ಪ, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಸುಜು ತಿಮ್ಮಯ್ಯ, ಕೊಲ್ಯದ ಗಿರೀಶ್, ಮುನೀರ್ ಅಹಮದ್, ಟಿ.ಪಿ.ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಪಿ ಶಶಿಧರ್, ಎಚ್.ಎ.ಹಂಸ, ಇಸ್ಮಾಯಿಲ್, ಪಟ್ಟಡ ರಂಜಿ ಪೂಣಚ್ಚ, ಸತೀಶ್ ಕುಮಾರ್, ಮೀದೇರಿರ ನವೀನ್, ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಟಾಟು ಮೊಣ್ಣಪ್ಪ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ,ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ಭಾಗವಹಿಸಿದ್ದರು.